ಬರಪೀಡಿತ ಪ್ರದೇಶ ಘೋಷಣೆಗೆ ಆಗ್ರಹ
ಮಾಲೂರು; ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವ ತಾಲೂಕನ್ನು ಬರಗಾಲ ಪ್ರದೇಶ ಎಂದು ಘೋಷಿಸಬೇಕು ಹಾಗೂ ಕನ್ನಡಿಗರ ಬಗ್ಗೆ ಅವಹೇಳನ ಮಾಡಿರುವ ಎಂಇಎಸ್ ಶಾಸಕರ ಶಾಸಕತ್ವ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ ಕರವೇ ಕಾರ್ಯಕರ್ತರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ ಮಾರಿಕಾಂಭ ಮಹಾದ್ವಾರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಮಂಜುನಾಥ್ ಗೌಡ, ತಾಲೂಕಿನಲ್ಲಿ ಅಂತರ್ಜಲ ಮಟ್ಟ 1,500 ಅಡಿಗಳಿಗೆ ಹೋಗಿದ್ದು, ರೈತರು ಗುಳೆ ಹೋಗುವ ಪರಿಸ್ಥಿತಿ ಬಂದಿದ್ದರೂ ಬರಗಾಲ ಪ್ರದೇಶವಲ್ಲ ಎಂದು ಗುರ್ತಿಸಿರುವುದು ಖಂಡನೀಯ ಎಂದರು. ಕರ್ನಾಟಕದಲ್ಲಿ ಸಾಮರಸ್ಯ ಕದಡುವ ಹೇಳಿಕೆ ನೀಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಎಂಇಎಸ್ ಶಾಸಕರ ಸದಸ್ಯತ್ವ ರದ್ದು ಮಾಡಿ, ಅವರನ್ನು ಕೊಡಲೇ ಬಂಧಿಸಬೇಕು ಎಂದರು. ಮಹಿಳಾ ವಿಭಾಗದ ಅಧ್ಯಕ್ಷೆ ಲತಾಬಾಯಿ, ಎಸ್.ಎಂ. ರಾಜು, ಮುರಳೀಧರ್, ಅನಂತಲಕ್ಷ್ಮಿ, ಲಕ್ಷ್ಮಮ್ಮ, ಶ್ಯಾಮ್, ನವೀನ್, ಆಟೋ ಮಂಜು, ಆಟೋ ಅಮೀರ್, ಪ್ರಸನ್ನಕುಮಾರ್, ನಾ. ಯಾದವ್, ರವಿ, ಲವ-ಕುಶ, ಚಲಪತಿ ಇದ್ದರು.
ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಟೇಕಲ್: ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಟೇಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ, ತಾ.ಪಂ., ಜಿ.ಪಂ., ಮತ್ತು ಎಆರ್ ಎಸ್ ಸಮಿತಿ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಬುಧವಾರ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಂಡಿದ್ದು ರಕ್ತದಾನ ಕೊಡಲಿಚ್ಚಿಸುವವರು ಕೊಡಬಹುದೆಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಕಾಲುಬಾಯಿ ಜ್ವರ; ಹಸು ಸಾವು
ಟೇಕಲ್: ಸಮೀಪದ ಹುಳದೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕೋಟೆ ತಿಮ್ಮನಾಯಕನಹಳ್ಳಿಯ ರಾಮಪ್ಪ ಎಂಬವರ ಸುಮಾರು 30 ಸಾವಿರ ಬೆಲೆ ಬಾಳುವ ಹಸು ಕಾಲುಬಾಯಿ ಜ್ವರದಿಂದ ಮೃತಪಟ್ಟಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಲುಬಾಯಿ ಜ್ವರದಿಂದ ಜಾನುವಾರುಗಳು ನರಳುತ್ತಿದ್ದು, ಕೂಡಲೇ ಪಶು ಸಂಗೋಪನೆ ಇಲಾಖೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ದುಷ್ಪರಿಣಾಮಗಳ ಜಾಗೃತಿ ಶಿಬಿರ
ಶಿಡ್ಲಘಟ್ಟ: ತಾಲೂಕಿನ ಚೀಮಂಗಲ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಕಳ್ಳಬಟ್ಟಿ ಮತ್ತು ನಕಲಿ ಮದ್ಯ ಸೇವನೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳು ಹಾಗೂ ದುರಂತಗಳ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಲಾಯಿತು. ಕಳ್ಳಬಟ್ಟಿ, ನಕಲಿ ಮದ್ಯ ತಯಾರಿಕೆ, ಗಾಂಜಾ ಬೆಳೆಯುವುದು ತಿಳಿದು ಬಂದ ತಕ್ಷಣ ಅಬಕಾರಿ ಇಲಾಖೆ ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕೆಂದು ಗ್ರಾಮಸ್ಥರಿಗೆ ತಿಳಿಸಲಾಯಿತು. ಉಪ ಆಯುಕ್ತ ಶ್ರೀನಿವಾಸ ಮೂರ್ತಿ, ಅಬಕಾರಿ ನಿರೀಕ್ಷಕ ವಿಶ್ವನಾಥ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿ. ಶಂಕರ್, ಸದಸ್ಯರಾದ ಕೆ.ಮಂಜುನಾಥ್ ಮತ್ತಿತರರು ಇದ್ದರು.
ಮಳ್ಳೂರಲ್ಲಿ ಬಿಜೆಪಿ ಜನಜಾಗೃತಿ ಕಾರ್ಯಕ್ರಮ
ಶಿಡ್ಲಘಟ್ಟ: ತಾಲೂಕಿನ ದೇವರ ಮಳ್ಳೂರು ಗ್ರಾಮದಲ್ಲಿ ಬಿಜೆಪಿ ಜನಜಾಗೃತಿ ಕಾರ್ಯಕ್ರಮ ನಡೆಯಿತು. ಬಿ.ಜೆ.ಪಿ ಕಾರ್ಯಕರ್ತರು ಮನೆ ಮನೆಗಳಿಗೂ ಭೇಟಿ ನೀಡಿ ಬಿಜೆಪಿ ಸಾಧನೆಗಳು ಹಾಗೂ ಇತರೆ ಆಡಳಿತ ಪಕ್ಷಗಳ ಹಗರಣಗಳ ಬಗ್ಗೆ ಸಾರುವ ಕರ ಪತ್ರಗಳನ್ನು ಹಂಚಿ ಜಾಗೃತಿ ಮೂಡಿಸಿದರು. ಬಿಜೆಪಿ ತಾಲೂಕು ಅಧಕ್ಷ ಸುರೇಂದ್ರ ಗೌಡ, ಶ್ರೀಧರ್, ಸುಜಾತಮ್ಮ, ರಾಘವೇಂದ್ರ, ವೆಂಕಟೇಶ್, ರೆಡ್ಡಿಸ್ವಾಮಿ, ರಾಮಾಂಜಿನಪ್ಪ, ಧ್ರುವ ಇದ್ದರು.