ಬಾಗೇಪಲ್ಲಿ ಬಂದ್ ಠುಸ್
ಬಾಗೇಪಲ್ಲಿ: ತಾಲೂಕಿನ ಗೂಳೂರು ನಿಡುಮಾಮಿಡಿ ಮಠಾಧೀಶ ವೀರಭದ್ರ ಶ್ರೀ ಚನ್ನಮಲ್ಲ ದೇಶಿಕೇಂದ್ರ ಸ್ವಾಮಿಜೀಗೆ ಪ್ರಾಣ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಶಾಖೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಕರೆ ನೀಡಿದ್ದ ಬಾಗೇಪಲ್ಲಿ ಬಂದ್ ಸಂಪೂರ್ಣವಾಗಿ ವಿಫಲವಾಯಿತು. ಈ ನಡುವೆ ಕರವೇ ಕಾರ್ಯಕರ್ತರು ಮತ್ತು ಬಿಜೆಪಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆದು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಶ್ರೀ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿಗೆ ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆಯ ಕರೆ ಬಂದಿದೆ ಎಂದು ಕರವೇ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಮಂಗಳವಾರ ಬಾಗೇಪಲ್ಲಿ ಬಂದ್ ಕರೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲ್ಲೇ ಎಲ್ಲಾ ಅಂಗಡಿಗಳ ವ್ಯವಹಾರ ಹಾಗೂ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ದೊಡ್ಡ ದೊಡ್ಡ ಸೈಜಿನ ಕಲ್ಲುಗಳನ್ನು ರಸ್ತೆಗೆ ಅಡ್ಡಲಾಗಿ ಹಾಕಲಾಗಿತ್ತು.
ಆದರೆ, ಇದಕ್ಕೆ ಬಿಜೆಪಿ ಮುಖಂಡರು ಸೇರಿದಂತೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದರು. ರಸ್ತೆಗೆ ಅಡ್ಡಲಾಗಿ ಹಾಕಲಾಗಿದ್ದ ಕಲ್ಲುಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಆ ನಂತರ ವ್ಯಾಪಾರ ವಹಿವಾಟು ಎಂದಿನಂತೆ ನಡೆಯಿತು. ವಾಹನಗಳ ಸಂಚಾರದಲ್ಲೂ ಯಾವುದೇ ವ್ಯತ್ಯಾಸವಾಗಲಿಲ್ಲ.
ಪರಸ್ಪರ ನಿಂದನೆ: ಇದೇ ಸಮಯದಲ್ಲಿ ಕೆಲವು ಕರವೇ ಕಾರ್ಯಕರ್ತರು ಬಸ್ಗೆ ಕಲ್ಲು ಹೊಡೆಯುತ್ತಿದ್ದಾರೆಂದು ಪೊಲೀಸರಿಗೆ ಬಿಜೆಪಿ ಕಾರ್ಯಕರ್ತರು ದೂರು ನೀಡಿದರು ಎಂಬ ವಿಷಯವನ್ನು ಮುಂದಿಟ್ಟುಕೊಂಡು ಗಲಾಟೆ ನಡೆಸಲಾಯಿತು.
ಪಟ್ಟಣದ ಡಾ.ಹೆಚ್.ಎನ್. ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿತು. ಅಶ್ಲೀಲ ಪದಗಳಿಂದ ಪರಸ್ಪರ ನಿಂದಿಸಿಕೊಳ್ಳಲಾಯಿತು. ಪರಿಸ್ಥಿತಿಯನ್ನರಿತ ಸ್ಥಳದಲ್ಲಿಯೇ ಇದ್ದ ಆರಕ್ಷಕ ಉಪ ನಿರೀಕ್ಷಕ ವಿ. ಮುನಿರೆಡ್ಡಿ ಮತ್ತು ಸಿಬ್ಬಂದಿ ಎರಡು ಗುಂಪುಗಳನ್ನು ಚದುರಿಸಿದರು.
ಬಾಗೇಪಲ್ಲಿ ಬಂದ್ ಕರೆ ನೀಡುವ ನಿರ್ಧಾರವನ್ನು ಕರವೇ, ಅಹಿಂದಾ ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳು ತೆಗೆದುಕೊಂಡರೂ ಸಹ ಬಂದನಲ್ಲಿ ಕೇವಲ ಕರವೇ ಕಾರ್ಯಕರ್ತರನ್ನು ಬಿಟ್ಟರೆ ಬೇರೆ ಯಾರು ಕಾಣಿಸಲಿಲ್ಲ. ಉಳಿದ ಎಲ್ಲಾ ಪ್ರಗತಿ ಪರ ಸಂಘಟನೆಗಳು ಕೈ ಕೊಟ್ಟಿದ್ದರಿಂದ ಕರವೇ ಒಂಟಿಯಾಗಿ ಬಂದ್ನಲ್ಲಿ ಭಾಗವಹಿಸಿ ಹೋರಾಟವನ್ನು ಮಾಡಬೇಕಾಯಿತು.
ಪದವಿ ಮತ್ತು ಪದವಿ ಪೂರ್ವಕಾಲೇಜು ಹಾಗೂ ಮುಂತಾದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ತೊಂದರೆಯಿಲ್ಲದಂತೆ ನೆರವೇರಿದವು. ಆದರೆ, ಸರಕಾರಿ ಕಚೇರಿಗಳಲ್ಲಿ ಜನರ ಹಾಜರಾತಿ ಕಡಿಮೆಯಿತ್ತಾದರೂ ಸರಕಾರಿ ಕಚೇರಿಗಳು, ಬ್ಯಾಂಕ್ ಹಾಗೂ ಖಾಸಗಿ ಸಂಸ್ಥೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.