ಶೈಕ್ಷಣಿಕ ಪ್ರವಾಸದಲ್ಲಿ ಭಾಗವಹಿಸಿ
ಮಾಲೂರು: ವ್ಯಾಸಂಗ ಕಾಲದಲ್ಲಿ ಹಮ್ಮಿಕೊಳ್ಳುವ ಶೈಕ್ಷಣಿಕ ಪ್ರವಾಸ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿಯಾಗುವುದರಿಂದ ವಿದ್ಯಾರ್ಥಿಗಳು ಪ್ರವಾಸಗಳಲ್ಲಿ ಭಾಗವಹಿಸಬೇಕು ಎಂದು ಶಾಲಾ ಮುಖ್ಯೋಪಾಧ್ಯಾಯ ರಾಮಕೃಷ್ಣಗೌಡ ಹೇಳಿದರು. ತಾಲೂಕಿನ ಚಿಕ್ಕಕುಂತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಆಯೋಜಿಸಿದ್ದ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದರು. ಸಹ ಶಿಕ್ಷಕ ಮಂಜುನಾಥ್, ರಮೇಶ್, ವೆಂಕಟಾ ಚಲಪತಿ ಇದ್ದರು.
ಹಾಸ್ಟೆಲ್‌ಗೆ ಬೇಕಿದೆ ಸರ್ಜರಿ
ಗುಡಿಬಂಡೆ: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಲ್ಪಿಸಿರುವ ಹಾಸ್ಟೆಲ್ ವ್ಯವಸ್ಥೆ ತಾಲೂಕಿನಲ್ಲಿ ತೀವ್ರವಾಗಿ ಹದೆಗಟ್ಟಿದ್ದು, ವಿದ್ಯಾರ್ಥಿಗಳಿಗೆ ಇಲ್ಲಿ ಉಳಿಯುವುದೇ ದೊಡ್ಡ ನರಕವಾಗಿ ಪರಿಣಮಿಸಿದೆ ಎಂದು ವಿದ್ಯಾರ್ಥಿ ಫೆಡರೇಷನ್ ಮುಖಂಡ ಈಶ್ವರಪ್ಪ ಹೇಳಿದ್ದಾರೆ. ಪಟ್ಟಣದ ಮೆಟ್ರಿಕ್ ಬಾಲಕರ ವಿದ್ಯಾರ್ಥಿ ನಿಲಯದಲ್ಲಿರುವ ಬಾಲಕರಿಗೆ ಶನಿವಾರ ಮಧ್ಯಾಹ್ನ ವೇಳೆಗೆ ಸರಿಯಾಗಿ ಊಟ ನೀಡದೇ ಇದ್ದುದ್ದರಿಂದ ವಿದ್ಯಾರ್ಥಿಗಳು ಹಸಿವಿನಿಂದ ಕಂಗಾಲದ ಪರಿಸ್ಥಿತಿ ಏರ್ಪಟ್ಟಿತ್ತು. ಈ ಸಂಬಂಧ ಅಲ್ಲಿನ ವಿದ್ಯಾರ್ಥಿಗಳನ್ನು ಭೇಟಿಯಾದ ಸಂದರ್ಭದಲ್ಲಿ ಅವರು ತಾಲೂಕಿನ ಹಾಸ್ಟೆಲ್‌ಗಳ ದುಸ್ಥಿತಿ ಬಗ್ಗೆ ವಿವರಿಸಿದರು.
5,681 ಪ್ರಕರಣಗಳ ವಿಲೇವಾರಿ
ಕೋಲಾರ: ಜಿಲ್ಲಾ ನ್ಯಾಯಾಲಯಗಳಲ್ಲಿ ಹಾಗೂ ಜಿಲ್ಲೆಯ ಎಲ್ಲಾ ಅಧೀನ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳ ವಿಲೇವಾರಿಗಾಗಿ ಇತ್ತೀಚೆಗೆ ನಡೆದ ಲೋಕ್ ಅದಾಲತ್‌ನ್ನಲ್ಲಿ 5,681 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಡಿ ಲೋಕ್ ಅದಾಲತ್ ನಡೆಸಲಾಗಿತ್ತು. ಕೋಲಾರ ಜಿಲ್ಲೆಯಾದ್ಯಂತ 1,525 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ ಬಾಕಿ ಇದ್ದ ಒಟ್ಟು 5,681 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ.
ಶಾಲಾ ಶಿಕ್ಷಕರಿಗೆ ಪಠ್ಯೇತರ ಚಟುವಟಿಕೆ
ಕೋಲಾರ: ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗಾಗಿ ನ.30 ರಂದು ನಗರದ ಪಾಲಸಂದ್ರ ಬಡಾವಣೆಯ ನಳಂದ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಗದೀಶ್ ತಿಳಿಸಿದ್ದಾರೆ. ಶಿಕ್ಷಕರ ಮತ್ತು ಮಕ್ಕಳ ಕಲ್ಯಾಣ ನಿಧಿ ಯೋಜನೆಯಡಿ ಕಾರ್ಯಕ್ರಮ ರೂಪಿಸಲಾಗಿದ್ದು ಗಾಯನ, ಆಶುಭಾಷಣ, ಪ್ರಬಂಧ , ಟಿ.ಎಲ್.ಎಂ ತಯಾರಿಕೆ, ಚಿತ್ರ ಬರೆಯುವ ಸ್ಪರ್ಧೆಯನ್ನು ಶಿಕ್ಷಕರಿಗಾಗಿ ಏರ್ಪಡಿಸಲಾಗಿದ್ದು ಭಾಗವಹಿಸುವ ಶಾಲಾ ಶಿಕ್ಷಕರು ವಿವರಗಳಿಗೆ ಸ್ಪರ್ಧೆಯ ನೋಡಲ್ ಅಧಿಕಾರಿಯೂ ಆಗಿರುವ ಇಸಿಒ ರಾಮಚಂದ್ರರೆಡ್ಡಿ ಇವರಲ್ಲಿ ಹೆಸರು ನೋಂದಾಯಿಸಿ ಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.