'ಅಂಗವಿಕಲರು ಕೀಳರಿಮೆ ತೊರೆಯಿರಿ'
ಚಿಕ್ಕಬಳ್ಳಾಪುರ: ದೇಹ ನ್ಯೂನತೆ ಕಾಡುತ್ತಿದ್ದರೂ ಎಲ್ಲರನ್ನೂ ನಾಚಿಸುವಂತೆ ಅಂಗವಿಕಲರು ಉತ್ಸುಕತೆಯಿಂದ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು. ಕೀಳರಿಮೆಯನ್ನು ಮರೆತು ಗೆಲ್ಲಬೇಕೆಂಬ ಮನೋಭಾವನೆಯಲ್ಲಿ ಪೈಪೋಟಿ ನೀಡಿ ಮೆಚ್ಚುಗೆಗೆ ಪಾತ್ರರಾದರು.
ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ವಿಕಲಚೇತನರ ಕ್ರೀಡಾಕೂಟ ಆಯೋಜಿಸಲಾಗಿತ್ತು. ಕ್ರೀಡಾಕೂಟಕ್ಕೆ ತಾಪಂ ಅಧ್ಯಕ್ಷ ಕೃಷ್ಣಮೂರ್ತಿ ಚಾಲನೆ ನೀಡಿದರು.
ಆಕರ್ಷಕ ಆಟಗಳು: ವೀಲ್ ಛೇರ್ ರನ್ನಿಂಗ್ ರೇಸ್, ಮ್ಯೂಸಿಕಲ್ ಛೇರ್, ರಂಗೋಲಿ, ಕೇರಂ, ಕಪ್ಪೆ ಜಿಗಿತ, ಬೆಲೂನ್ ಪ್ರಸ್ಸಿಂಗ್, ಬುಟ್ಟಿಯಲ್ಲಿ ಚೆಂಡು... ಸೇರಿದಂತೆ ವಿವಿಧ ರೀತಿಯ ಸ್ಪರ್ಧೆಗಳನ್ನು ಕೈಗೊಳ್ಳಲಾಯಿತು.ನಾ ಮುಂದು ತಾ ಮುಂದು ಎನ್ನುವಂತೆ ಅಂಗವಿಕಲರು ಪೈಪೋಟಿಗಿಳಿದರು.
ವೀಲ್ ಚೇರ್ ಓಟದ ಸ್ಪರ್ಧೆಯಲ್ಲಿ ಉಷಾಕಿರಣ್ ಪ್ರಥಮ, ದ್ವಿತೀಯ ಕೆ.ವಿ. ಮಮತ ಮತ್ತು ರಾಜೇಶ್ ಬಾಬು ತೃತೀಯ, ಅನ್ ಲಕ್ಕಿ ಸ್ಪಾಟ್ ಸ್ಪರ್ಧೆಯಲ್ಲಿ ಸುಬ್ರಮಣಿ ಪ್ರಥಮ, ಗೀತಾ ದ್ವಿತೀಯ, ಶ್ರೀನಿವಾಸ್ ತನತೀಯ, ಬೆಲೂನ್ ಪ್ರೆಸ್ಸಿಂಗ್ ಸ್ಪರ್ಧೆ(ಮಹಿಳೆಯರ ವಿಭಾಗದಲ್ಲಿ) ಭವಾನಿ, ಉಷಾಕಿರಣ್, ಸವಿತಾ ಮತ್ತು ಪುರುಷರ ವಿಭಾಗದಲ್ಲಿ ಸುಬ್ರಮಣಿ, ಶ್ರೀನಿವಾಸ್, ಕೃಷ್ಣ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು. ಬಕೆಟ್ನಲ್ಲಿ ಬಾಲ್ ಹಾಕುವ ಸ್ಪರ್ಧೆಯಲ್ಲಿ ಭವಾನಿ ಪ್ರಥಮ, ಗೀತಾ ದ್ವಿತೀಯ, ನಾಗವೇಣಿ ತೃತೀಯ, 50 ಮೀಟರ್ ಓಟದ ಸ್ಪರ್ಧೆಯಲ್ಲಿ (ಪುರುಷರ ವಿಭಾಗದಲ್ಲಿ) ಕೃಷ್ಣಾ , ಮಹಮದ್ ಮತ್ತು ಹರಿ ಅರ್ಚನ್, ಮಹಿಳೆಯರ ವಿಭಾಗದಲ್ಲಿ ಗೀತಾ, ನಾಗವೇಣಿ, ಸುಶೀಲಮ್ಮ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದರು.
ಕೀಳರಿಮೆ ಬಿಡಿ; ಕ್ರೀಡಾಕೂಟದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಸುರೇಖಾ ವಿಜಯಪ್ರಕಾಶ್, ಮೊದಲು ಅಂಗವಿಕಲರು ಕೀಳರಿಮೆಯನ್ನು ಮರೆತು ಸಮಾಜದ ಮುಖ್ಯವಾಹಿನಿಯಲ್ಲಿ ಸ್ವಾವಲಂಬಿ ಜೀವನ ನಡೆಸುವಂತಹ ಸಾಮರ್ಥ್ಯವನ್ನು ಪಡೆದುಕೊಳ್ಳಬೇಕು ಎಂದರು.
ತಾಪಂ ಅಧ್ಯಕ್ಷ ಕೃಷ್ಣಮೂರ್ತಿ, ಮಂಚನಬಲೆ ಶ್ರೀನಿವಾಸ್, ಶಾಂತಲರಾಜ್, ಶ್ರೀನಿವಾ, ರತ್ನಮ್ಮ, ನಾರಾಯಣಸ್ವಾಮಿ, ಮಂಜುನಾಥ್, ರಘುನಾಥರೆಡ್ಡಿ, ಸುಬ್ರಮಣಿ, ಕುಶ್ ಕುಮಾರ್, ಸುಶೀಲಾ ಇದ್ದರು.