ಎಂಇಎಸ್ ಶಾಸಕರ ಗಡೀಪಾರಿಗೆ ಕರವೇ ಆಗ್ರಹ
ಬಾಗೇಪಲ್ಲಿ: ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ ಎಂಇಎಸ್ ಶಾಸಕರನ್ನು ಗಡೀಪಾರು ಮಾಡಬೇಕೆಂದು ಕರವೇ ಒತ್ತಾಯಿಸಿದೆ.
ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಕೆ.ಎನ್. ಹರೀಶ್, ಮರಾಠಿ ಭಾಷೆಯ ವ್ಯಾಮೋಹಕ್ಕೆ ಸಿಲುಕಿ ಕನ್ನಡ ಭಾಷೆಗೆ ಅಪಮಾನಗೊಳಿಸುತ್ತಿರುವ ಎಂ.ಇ.ಎಸ್. ಶಾಸಕರ ಸ್ಥಾನವನ್ನು ರದ್ದುಗೊಳಿಸಬೇಕಲ್ಲದೇ ಅವರನ್ನು ಕೂಡಲೇ ಗಡಿಪಾರು ಮಾಡುವಂತೆ ಆಗ್ರಹಿಸಿದರು.
ಚಳಿಗಾಲದ ಅಧಿವೇಶನದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಶಾಸಕರಾದ ಸಂಭಾಜಿ ಪಾಟೀಲ್ ಮತ್ತು ಅರವಿಂದ್ಪಾಟೀಲ್ ನಾಡಿನ ಜನರಿಂದ ಮತಗಳನ್ನು ಪಡೆದು ಶಾಸಕರಾಗಿದ್ದು ಇವರು ವಿನಾಕಾರಣ ಕನ್ನಡ ಭಾಷೆಯ ಬಗ್ಗೆ ಹಾಗೂ ರಾಜ್ಯ ಸರ್ಕಾರವನ್ನು ಕೀಳು ಮಟ್ಟದ ಭಾಷೆಯಿಂದ ನಿಂದಿಸಿರುವುದು ಖಂಡನೀಯ.ಇದು 6 ಕೋಟಿ ಕನ್ನಡಗರಿಗೆ ಅಪಮಾನ ಮಾಡಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಹಸೀಲ್ದಾರ್ ಎಂ.ಎ. ಪದ್ಮ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕರವೇ ಮುಖಂಡರಾದ ಶಿವಶಂಕರ್, ಸತೀಶ್, ವೆಂಕಟೇಶ್, ರಾಮಿರೆಡ್ಡಿ, ಸುಜಾತಮ್ಮ,ನಂದೀಶ್, ಸೋಮಶೇಖರ್, ಶ್ರೀಕಾಂತ್, ಚೇತನ್ ಮುಂತಾದವರು ಭಾಗವಹಿಸಿದ್ದರು.