ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಲ್ಯಾಣಿ ಜೀರ್ಣೋದ್ಧಾರಕ್ಕೆ ಹಸಿರು ನಿಶಾನೆ

Mainashree
Updated On : 27 Nov 2013, 11:06 am

ಮಾಲೂರು: ಪಟ್ಟಣದ ಹೃದಯಭಾಗದಲ್ಲಿ ಸಂಪೂರ್ಣ ಶಿಥಿಲವಾಗಿ ಪಟ್ಟಣದ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಂತಾಗಿದ್ದ ಇತಿಹಾಸ ಪ್ರಸಿದ್ಧ ಗಜಾಗುಂಡ್ಲ ಕಲ್ಯಾಣಿಯ ಜೀರ್ಣೋದ್ದಾರಕ್ಕೆ ಕೊನೆಗೂ ಜಿಲ್ಲಾಧಿಕಾರಿಗಳು ಹಸಿರು ನಿಶಾನೆ ತೋರಿಸಿದಾರೆ.
ಹಲವು ದಶಕಗಳಿಂದ ಗಿಡಗುಂಟೆ ಬೆಳೆದು ಹಾವು ಚೇಳುಗಳ ವಾಸಸ್ಥಾನವಾಗಿದ್ದ ಈ ಸ್ಥಳಕ್ಕೆ ಮುಕ್ತಿ ಸಿಗಲಿದೆ. ಪಟ್ಟಣದ ಗ್ರಾಮ ದೇವತೆ ಮಾರಿಕಾಂಭ ಹಾಗೂ ಕೋಂದಡರಾಮ ದೇವಾಲಯದ ತಪ್ಪಲಲ್ಲಿರುವ ಗಜಾಗುಂಡ್ಲ 80 ರ ದಶಕದ ತನಕ ನೀರು ತುಂಬಿತ್ತು. ನಂತರದ ದಿನದಲ್ಲಿ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಗಜಾಗುಂಡ್ಲಕ್ಕೆ ನೀರು ಹರಿದು ಬರುತ್ತಿದ್ದ ಕಾರಂಜಿ ಕಟ್ಟೆಯನ್ನು ಒಡೆದು ವಾಣಿಜ್ಯ ಪ್ರದೇಶ ಮಾಡಿದ ಪರಿಣಾಮ ಕಲ್ಯಾಣಿಗೆ ನೀರು ಹರಿದು ಬರುವುದು ನಿಂತು ಗಿಡಗುಂಟೆ ಬೆಳೆಯಿತು.
ಕಲ್ಯಾಣಿಯಲ್ಲಿ ನೀರು ಸಂಗ್ರಹವಾಗದೆ ಸುತ್ತಮುತ್ತಲ ಪ್ರದೇಶಗಳ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಪಟ್ಟಣದವಾಸಿಗಳು ನೀರಿನ ಸಮಸ್ಯೆ ಎದುರಿಸಬೇಕಾಗಿ ಬಂದಿತ್ತು. ಹಿಂದೆ ಪುರಸಭೆಯಲ್ಲಿ ಕಳದ ದಶಕದಿಂದ ಆಡಳಿತ ನಡೆಸಿದ ಸದಸ್ಯರು ಕಲ್ಯಾಣಿ ಜೀರ್ಣೋದ್ಧಾರಕ್ಕೆ ಹಲವು ಬಾರಿ ವಿಫಲ ಯತ್ನ ನಡೆಸಿದರು. 2011-12 ರಲ್ಲಿ ಜಿಲ್ಲಾದಾದ್ಯಂತ ಕಲ್ಯಾಣಿ ಅಬಿವೃದ್ಧಿಗೆ ವಿಶೇಷ ಗಮನ ನೀಡಿದ್ದ ಜಿಲ್ಲಾಧಿಕಾರಿ ವಿಶ್ವನಾಥ್ ಅವರು ಮಾಲೂರಿನ ಗಜಾಗುಂಡ್ಲ ಕಲ್ಯಾಣಿ ಅಭಿವೃದ್ಧಿಗಾಗಿ ಎಸ್‌ಎಫ್‌ಸಿ ಯೋಜನೆಯಡಿ 20 ಲಕ್ಷ ರು. ನಿಗದಿ ಪಡಿಸಿ ಕಲ್ಯಾಣಿಯನ್ನು ಶುದ್ಧಿಗೊಳಿಸುವಂತೆ ಆದೇಶ ನೀಡಿದ್ದರು. ಆದರೆ ಇಲ್ಲಿನ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ತಾಂತ್ರಿಕ ಅಡಚಣೆಗಳಿಂದ ಕಳೆದ ವರ್ಷ ಪ್ರಾರಂಭವಾಗಿದ್ದ ಕಲ್ಯಾಣಿ ಅಬಿವೃದ್ಧಿ ಕಾಮಗಾರಿ ನಾಲ್ಕೇ ದಿನಗಳಲ್ಲಿ ನಿಂತು ಹೋಗಿತ್ತು.
ಕಲ್ಯಾಣಿ ಅಭಿವೃದ್ಧಿಗೆ ಚಾಲನೆ ನೀಡಬೇಕೆಂದು ಅಂದಿನ ವಾರ್ಡ್ ಸದಸ್ಯೆ ನೀಲಾಚಂದ್ರ ಸೇರಿದಂತೆ ಇಂದಿನ ಪುರಸಭೆ ಸದಸ್ಯರು ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ತಂದಿದ್ದರು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ರವಿ ಅವರು ಕಲ್ಯಾಣಿ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಕಾಮಗಾರಿ ಪ್ರಾರಂಭಿಸುವಂತೆ ಆದೇಶಿಸಿ 20 ಲಕ್ಷ ರು.ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಮುಂದಿನ ವಾರದಲ್ಲಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಕಲ್ಯಾಣಿಯ ಅಭಿವೃದ್ಧಿ ನಕ್ಷೆ ತಯಾರಿಸಿರುವ ಪುರಸಭೆ ಅಭಿಯಂತರ ಮಂಜುನಾಥ್ ತಿಳಿಸಿದ್ದಾರೆ. ವಾರ್ಡ್ ಸದಸ್ಯ ಎಂ.ಪಿ.ವಿಜಯಕುಮಾರ್ ಮಾತನಾಡಿ, ಒಂದು ವೇಳೆ ಯೋಜನೆಗೆ ಹಣ ಸಾಕಾಗದಿದ್ದರೆ ಸಹಾಯ ಹಸ್ತ ಚಾಚುತ್ತೇವೆ, ಮಾರಿಕಾಂಭ ದೇವಾಲಯ ಅಭಿವೃದ್ಧಿ ಸಮಿತಿ ಸಹಕಾರ ಪಡೆದು ಕಲ್ಯಾಣಿ ಅಭಿವೃದ್ಧಿ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.
ರಾಜೇಂದ್ರ ವೈದ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement