ಟಿಪ್ಪು ಸಂಶೋಧನಾ ಕೇಂದ್ರ ಆರಂಭಿಸಲು 2 ತಿಂಗಳ ಗಡುವು
ಬಂಗಾರಪೇಟೆ: ಮೈಸೂರು ಹುಲಿ ಟಿಪ್ಪು ಸುಲ್ತಾನ್ ಬಗ್ಗೆ ಎರಡು ತಿಂಗಳಲ್ಲಿ ಸಂಶೋಧನಾ ಕೇಂದ್ರವನ್ನು ಸರ್ಕಾರ ಪ್ರಾರಂಭಿಸಲು ಮುಂದಾಗದಿದ್ದಲ್ಲಿ ಸರ್ಕಾರಕ್ಕೆ ಸವಾಲಾಗಿ ಟಿಪ್ಪು ಅಭಿಮಾನಿಗಳೇ ಸೇರಿ ಆರಂಭಿಸುವುದಾಗಿ ಟಿಪ್ಪು ಸುಲ್ತಾನ್ ಪ್ರಚಾರ ಸಮಿತಿ ಅಧ್ಯಕ್ಷ ತಲಕಾಡು ಚಿಕ್ಕರಂಗೇಗೌಡ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಟಿಪ್ಪು ಸೆಕ್ಯುಲರ್ ಸೇನೆ ವತಿಯಿಂದ ನಡೆದ 264ನೇ ಟಿಪ್ಪು ಸುಲ್ತಾನ್ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಶ್ರೀರಂಗಪಟ್ಟಣದಲ್ಲಿರುವ ಟಿಪ್ಪುವಿನ ಸಮಾಧಿ ವೀಕ್ಷಿಸಲು ಪ್ರತಿ ವರ್ಷ 18 ಲಕ್ಷ ದೇಶಿ ಮತ್ತು ವಿದೇಶಿಗಳಿಂದ ಬರುವರು ಅವರಿಂದ ಸಂಗ್ರಹವಾಗುವ ಶುಲ್ಕ ವಾರ್ಷಿಕವಾಗಿ ಸರ್ಕಾರಕ್ಕೆ 30ಲಕ್ಷ ಸಂದಾಯವಾಗುತ್ತಿದೆ ಇಂತಹ ಆದಾಯವಿರುವ ವ್ಯಕ್ತಿ ಬಗ್ಗೆ ಮತ್ತು ಇವರ ಜೀವನ ಮೌಲ್ಯಗಳ ಕುರಿತು ಸಂಶೋಧನೆ ಕೇಂದ್ರ ಸ್ಥಾಪಿಸುವಂತೆ ಈ ಕಾರ್ಯಕ್ಕೆ ಹೆಚ್ಚಿನ ಅನುದಾನ ಕಲ್ಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದರೂ ಸರ್ಕಾರ ಆಸಕ್ತಿ ತೋರದೆ ನಿರ್ಲಕ್ಷ್ಯ ವಹಿಸಿದೆ ಜನವರಿಯೊಳಗೆ ಕಾರ್ಯಗತವಾಗದ ಪಕ್ಷ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡಿ ಅಲ್ಲಿ ನಾವೇ ಸರ್ಕಾರ ಮಾಡಬೇಕಿದ್ದ ಕೆಲವನ್ನು ಮಾಡಲು ನಿರ್ಣಯವನ್ನು ಕೈಗೊಳ್ಳುವುದು ಖಚಿತ ಎಂದು ಹೇಳಿದರು.
ಯಾಸಿನ್ ಬಾಬ ಮಾತನಾಡಿ ಟಿಪ್ಪು ಜನ್ಮದಿನದಂದು ಸರ್ಕಾರಿ ರಜೆ ಘೋಷಿಸಬೇಕು ಟಿಪ್ಪು ಭವನ ನಿರ್ಮಾಣವಾಗಿ ಅವರ ಬಗ್ಗೆ ಪ್ರಚಾರ ಕಾರ್ಯನಡೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಶಂಷುದ್ದಿನ್‌ಬಾಬು, ಸಿದ್ದಿಕ್ ಅಹ್ಮದ್, ಆರ್. ಜಗದೀಶ್, ಆಜಾಂಶರೀಫ್, ಸುಭ್ರಮಣಿ ಇದ್ದರು. ಇದೇ ವೇಳೆ ಟಿಪ್ಪು ಸುಲ್ತಾನ್ ಬಗ್ಗೆ ತಲಕಾಡು ಚಿಕ್ಕರಂಗೇಗೌಡ ಬರೆದಿರುವ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.