ನಕಲಿ ವೈದ್ಯರ ಪತ್ತೆಗೆ ವಿಶೇಷ ತಂಡ: ಡಿಸಿ
ಕನ್ನಡಪ್ರಭ ವಾರ್ತೆ, ಕೋಲಾರ, ನ.27
ಜಿಲ್ಲೆಯಾಧ್ಯಂತ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ ನಕಲಿ ವೈದ್ಯರನ್ನು ಪತ್ತೆ ಹಚ್ಚಲು ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯದ ವಿವಿಧ ಕಡೆ ನಕಲಿ ವೈದ್ಯರ ಹಾವಳಿಯಿಂದ ರೋಗಿಗಳ ಮೇಲೆ ಆಗುತ್ತಿರುವ ದುಷ್ಪರಿಣಾಮದ ಹಿನ್ನಲೆಯಲ್ಲಿ ಜಿಲ್ಲೆಯಲ್ಲೂ ನಕಲಿ ವೈದ್ಯರಿಗೆ ಕಡಿವಾಣ ಹಾಕಲು ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯ ಜೊತೆ ಚರ್ಚಿಸಿ ಸೂಕ್ತ ಕ್ರಮಕ್ಕೆ ಆದೇಶಿಸಿದ್ದಾರೆ. ವಿದ್ಯಾರ್ಹತೆ ಇಲ್ಲದೆ ವೈದ್ಯಕೀಯ ವೃತ್ತಿ ಮಾಡುತ್ತಿರುವ, ಬೇರೋಬ್ಬರ ಹೆಸರಿನಲ್ಲಿ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿರುವ ಹಾಗೂ ನೋಂದಣಿ ಇಲ್ಲದ ಆರ್.ಎಂ.ಪಿ ವೈದ್ಯರನ್ನು ನಕಲಿ ವೈದ್ಯರೆಂದು ಪರಿಗಣಿಸಿ ಇವರ ವಿರುದ್ಧ ಭಾರತೀಯ ಆರೋಗ್ಯ ಸೇವೆ ಕಾಯಿದೆಯಡಿಲ್ಲಿ ಕ್ರಮ ಜರುಗಿಸಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಫೈಯಾಜ್ ಖಾನ್ ತಾಲೂಕುವಾರು ವಿಶೇಷ ತನಿಖಾ ತಂಡಗಳನ್ನು ರಚನೆ ಮಾಡಿದ್ದಾರೆ. ಆಯಾ ತಾಲೂಕುಗಳ ತಹಸೀಲ್ದಾರ್, ತಾಲೂಕು ವೈದ್ಯಧಿಕಾರಿ, ಪೊಲೀಸ್ ಅಧಿಕಾರಿ, ನಗರಸಭೆ ಮತ್ತು ಪುರಸಭೆಗಳ ಆಯುಕ್ತರು ಮತ್ತು ಮುಖ್ಯಾಧಿಕಾರಿಗಳು, ಜಿಲ್ಲಾ ಆಸ್ಪತ್ರೆಯ ಸರ್ಜನ್, ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳನ್ನು ಒಳಗೊಂಡ ತಂಡ ರಚನೆ ಮಾಡಲಾಗಿದ್ದು ಈ ತಂಡದ ಮೇಲ್ವಿಚಾರಕರಾಗಿ ಡಿಹೆಚ್ಒ ಕಾರ್ಯನಿರ್ವಹಿಸಲಿದ್ದಾರೆ.
ಖಾಸಗಿಯಾಗಿ ಕ್ಲಿನಿಕ್ಗಳನ್ನು ಇಟ್ಟುಕೊಂಡಿರುವ ವೈದ್ಯರ ಮೂಲ ದಾಖಲೆಗಳನ್ನು ಪರಿಶೀಲನೆ ಮಾಡಲಿದೆ. 15 ದಿನಗಳಲ್ಲಿ ಜಿಲ್ಲೆಯಾಧ್ಯಂತ ಸಮೀಕ್ಷೆ ನಡೆಸಿ ಒಂದು ವೇಳೆ ನಕಲಿ ವೈದ್ಯರು ಪತ್ತೆಯಾದಲ್ಲಿ ಕ್ರಮ ಕೈಗೊಳ್ಳುವುದಕ್ಕೆ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಿದೆ. ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ನೀಡಿರುವ ಸೂಚನೆ ಎಷ್ಟರ ಮಟ್ಟಿಗೆ ಫಲಶೃತಿ ನೀಡಲಿದೆ ಎಂಬುದು 15 ದಿನಗಳ ನಂತರವಷ್ಟೇ ತಿಳಿಯಬಹುದಾಗಿದೆ.
ನಕಲಿ ವೈದ್ಯರನ್ನು ಮಟ್ಟ ಹಾಕುತ್ತೇವೆ: ಜಿಲ್ಲೆಯಲ್ಲಿ ನಕಲಿ ವೈದ್ಯರ ಪತ್ತೆಗಾಗಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ. ಈ ತಂಡ ಜಿಲ್ಲೆಯಾಧ್ಯಂತ ಪ್ರವಾಸ ಕೈಗೊಂಡು ಸಮೀಕ್ಷೆ ನಡೆಸಿದ ಬಳಿಕ ಯಾರಾದರೂ ನಕಲಿ ವೈದ್ಯರು ಇರುವುದು ಕಂಡು ಬಂದಲ್ಲಿ ಅಂತಹವರನ್ನು ಮಟ್ಟ ಹಾಕುತ್ತೇವೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಫೈಯಾಜ್ ಖಾನ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.