ಸರಗಳ್ಳರ ಪತ್ತೆ: ಪೊಲೀಸರಿಗೆ ತಲೆಬಿಸಿ
ಕ.ಪ್ರ.ವಾರ್ತೆ ಕೋಲಾರ ನ.27
ನಗರದಲ್ಲಿ ಕಳೆದ ಒಂದು ವಾರದಿಂದೀಚೆಗೆ ಸರಗಳ್ಳತನ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ಪತ್ತೆಗೆ ತೀವ್ರ ಶೋಧನೆ ನಡೆಸಿದ್ದಾರೆ.
ದ್ವಿಚಕ್ರ ವಾಹನಗಳಲ್ಲಿ ಬಂದು ಮಹಿಳೆಯರ ಕೊರಳಿನಿಂದ ಚಿನ್ನದ ಸರಗಳನ್ನು ಅಪಹರಿಸಿ ನಾಗರಿಕರಲ್ಲಿ ಆತಂಕ ಉಂಟು ಮಾಡಿದ್ದಾರಲ್ಲದೆ, ಪೊಲೀಸ್ ಇಲಾಖೆಗೂ ಸವಾಲುವೊಡ್ಡಿರುವ ದುಷ್ಕರ್ಮಿಗಳನ್ನು ಹಿಡಿಯಲು ಪೊಲೀಸರು ಪರದಾಡುತ್ತಿದ್ದಾರೆ.
ಸರಗಳ್ಳತನ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಬುಧವಾರ ಬೆಳಿಗ್ಗೆ ಡಿವೈಎಸ್ಪಿ ಅಶೋಕ್ಕುಮಾರ್ ಅವರು ಎಂ.ಜಿ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ, ನಂಬರ್ ಪ್ಲೇಟ್ ಇಲ್ಲದೆ ದ್ವಿಚಕ್ರ ವಾಹನ ಓಡಿಸುತ್ತಿದ್ದವರನ್ನು ತಡೆದು ತಪಾಸಣೆ ಮಾಡಿ ದಾಖಲೆ ಇಲ್ಲದ ವಾಹನಗಳನ್ನು ವಶಕ್ಕೆ ಪಡೆದುಕೊಂಡರಾದರೂ ಸರಗಳ್ಳರ ಸುಳಿವು ಪತ್ತೆ ಮಾಡಲಾಗಿಲ್ಲ.
34 ಪ್ರಕರಣದಲ್ಲಿ 12 ಪತ್ತೆ: ಕಳೆದ ಜನವರಿಯಿಂದ ನವೆಂಬರ್ 26ರವರೆಗೆ 34 ಸರಗಳ್ಳತನ ಪ್ರಕರಣಗಳು ಕೋಲಾರ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ನಡೆದಿದ್ದು ಈ ಪೈಕಿ 12 ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಆದರೆ, ಕೋಲಾರ ನಗರ ಒಂದರಲ್ಲೇ 11 ಪ್ರಕರಣಗಳು ನಡೆದು ಕೇವಲ 4 ಪ್ರಕರಣಗಳು ಪತ್ತೆಯಾಗಿರುವುದರಿಂದ ಪೊಲೀಸರ ತಲೆಬಿಸಿಗೆ ಕಾರಣವಾಗಿದೆ.
ಚಹರೆ ತಿಳಿದು ಬಂದಿಲ್ಲ: ದ್ವಿಚಕ್ರ ವಾಹನಗಳಲ್ಲಿ ಬಂದು ಸರಗಳ್ಳತನ ಮಾಡಲಾಗುತ್ತಿದೆ ಎಂದು ದೂರುದಾರರು ಹೇಳುತ್ತಿದ್ದಾರೆ. ಆದರೆ, ವಾಹನ ಚಾಲಕರು ಮತ್ತು ಇವರು ಬಳಸಿರುವ ವಾಹನಗಳ ಚಹರೆ ತಿಳಿಸಲು ದೂರುದಾರರಿಗೆ ಸಾಧ್ಯವಾಗುತ್ತಿಲ್ಲ. ಮಹಿಳೆಯರು ಸರಗಳ್ಳತನದಿಂದ ಅಘಾತಕ್ಕೆ ಒಳಗಾಗಿರುವುದರಿಂದ ಕಳ್ಳರನ್ನು ಗುರುತಿಸಲು ಆಗುತ್ತಿಲ್ಲವೆಂದು ಎಂದು ಜಿಲ್ಲಾ ಎಎಸ್ಪಿ ಜಮೀಲ್ ತಿಳಿಸಿದ್ದಾರೆ.
ನಗರಠಾಣೆಯಲ್ಲಿ ಅವರು ಡಿವೈಎಸ್ಪಿ ಅಶೋಕ್ಕುಮಾರ್, ಸರ್ಕಲ್ ಇನ್ಸೆಪೆಕ್ಟರ್ ಶಿವಕುಮಾರ್ ಹಾಗೂ ಇಲಾಖೆಯ ಸಿಬ್ಬಂದಿಯೊಂದಿಗೆ ಸರಗಳ್ಳತನಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾಗಿದ್ದ ಸುದ್ದಿಗಾರರೊಂದಿಗೆ ಮಾತನಾಡಿ, ದೂರುದಾರರು ತಮಗೆ ತಿಳಿದಿರುವಷ್ಟು ಮಾಹಿತಿ ನೀಡಿದಲ್ಲಿ ತನಿಖೆಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆ ರೂಪಿಸುತ್ತೇವೆ ಎಂದರು.
ಕಳ್ಳರನ್ನು ಹಿಡಿಯಲು ಕೊಂಚ ಸಮಯ ಬೇಕಾಗುತ್ತದೆ. ತನಿಖೆಗಾಗಿ ತಂಡವನ್ನು ರಚನೆ ಮಾಡಲಾಗಿದೆ. ಸೂಕ್ಷ್ಮ ಸ್ಥಳಗಳಲ್ಲಿ ಗಸ್ತು ಹೆಚ್ಚಿಸಲಾಗಿದೆ. ಚಿತಾ ಗಸ್ತು ಪೊಲೀಸ್ ಸಿಬ್ಬಂದಿಯನ್ನು ಚುರುಕುಗೊಳಿಸಲಾಗುವುದು, ಜನತೆಯಲ್ಲಿ ಭಯ ಹೋಗಲಾಡಿಸುವುದಕ್ಕೆ ಮತ್ತು ಕಳ್ಳರ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವಾರ್ಡಿನಲ್ಲಿ ಸಭೆಗಳನ್ನು ನಡೆಸುವುದಾಗಿ ತಿಳಿಸಿದರು.
ದುಷ್ಕರ್ಮಿಗಳನ್ನು ಪತ್ತೆ ಮಾಡಲು ಜನತೆಯ ಸಹಕಾರ ಅಗತ್ಯ. ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಹಕಾರದ ಮೂಲಕ ಕಾರ್ಯಾಚರಣೆ ತೀವ್ರಗೊಳಿಸುತ್ತೇವೆ. ತನಿಖಾ ತಂಡ ಈಗಾಗಲೇ ಎಲ್ಲ ಕಡೆ ಶೋಧ ಆರಂಭಿಸಿದ್ದು ಆದಷ್ಟು ಬೇಗನೆ ಆರೋಪಿಗಳನ್ನು ಹಿಡಿಯುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು.