ಆತ್ಮಹತ್ಯೆಯಲ್ಲ, ನಿರ್ಲಕ್ಷ್ಯದಿಂದ ಕೊಲೆ: ಆರೋಪ
ಚಿಕ್ಕಬಳ್ಳಾಪುರ: ಕಬ್ಬಿಗೆ ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ಕೈಗೊಂಡ ಧರಣಿ ಸಂದರ್ಭದಲ್ಲಿ ಸಂಭವಿಸಿದ ರೈತ ವಿಠಲ ಅರಭಾವಿ ಸಾವು ಆತ್ಮಹತ್ಯೆಯಲ್ಲ ಬದಲಿಗೆ ವಿಳಂಬ, ನಿರ್ಲಕ್ಷ್ಯ ಧೋರಣೆಯಿಂದ ಸರ್ಕಾರವೇ ಪರೋಕ್ಷವಾಗಿ ಮಾಡಿದ ಕೊಲೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಆಕ್ರೋಶ ವ್ಯಕ್ತಪಡಿಸಿದೆ. ರೈತ ವಿಠಲ ಅರಭಾವಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ರೈತರು, ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟು ಶಿಡ್ಲಘಟ್ಟ ವೃತ್ತದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮೊದಲು ಸಕ್ಕರೆ ಸಚಿವ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ ಮಾತನಾಡಿ, ರೈತಪರ ಆಡಳಿತ ನಡೆಸುತ್ತೇವೆ ಎನ್ನುವ ಸರ್ಕಾರಕ್ಕೆ ಇನ್ನಷ್ಟು ಮಂದಿ ರೈತರು ಸಾಯಬೇಕು. ಕಳೆದ ಕೆಲ ದಿನಗಳಿಂದಲೂ ಬೆಳಗಾವಿಯಲ್ಲಿ ಕಬ್ಬಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ಒಕ್ಕೂರಲಿನಿಂದ ಒತ್ತಾಯಿಸಿ ಪ್ರತಿಭಟಿಸುತ್ತಿದ್ದರೂ ಸ್ಪಂದಿಸದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತ ವಿಠಲ ಅರಭಾವಿ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆಯೇ ಎಚ್ಚೆತ್ತುಕೊಳ್ಳಬಹುದಾಗಿತ್ತಲ್ಲವೇ. ಈಗ ಎಷ್ಟೇ ಪರಿಹಾರ ನೀಡಿದರೂ ಸಾವನ್ನಪ್ಪಿದ ರೈತನ ಜೀವ ಬರುತ್ತದೆಯೇ ಎಂದು ಕಿಡಿಕಾರಿದರು.
ಸರ್ಕಾರಗಳು ರೈತ ವಿರೋಧಿ ನೀತಿಗಳನ್ನು ಅನುಸರಿಸಿಕೊಂಡು ನಡೆಸುತ್ತಿರುವ ಆಡಳಿತಗಳ ನಡುವೆ ಬೆಳೆ ಮತ್ತು ಬೆಲೆ ಸಮಸ್ಯೆಯಿಂದ ಆರ್ಥಿಕ ನಷ್ಟವನ್ನು ಅನುಭವಿಸಿ ರೈತರು ಸಾಲಗಾರರಾಗುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರುವ ಸಾಲವನ್ನು ತೀರಿಸಲಾಗದ ಕಾರಣ, ತಮ್ಮ ನೆರವಿಗೆ ಬರಬೇಕೆಂದು ಒತ್ತಾಯಿಸಿದರೂ ಸರ್ಕಾರಗಳು ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದು ವಿಧಿಯಿಲ್ಲದೇ ರೈತರು ಆತ್ಮಹತ್ಯೆಗೆ ಶರಣಾಗಾಗುವಂತಹ ಘಟನೆಗಳು ನಡೆಯುತ್ತಿದ್ದು ಇನ್ನೂ ಮುಂದೆಯಾದರೂ ಇಂತಹ ದುರ್ಘಟನೆಗಳು ನಡೆಯದಿರಲು ಸರ್ಕಾರ ರೈತಪರ ದಿಟ್ಟ ನಿರ್ಧಾರಗಳನ್ನು ಕೈಗೊಂಡು ಅನ್ನದಾತನನ್ನು ಉಳಿಸಬೇಕೆಂದರು. ರೈತ ಸಂಘದ ಲಕ್ಷ್ಮೀನಾರಾಯಣರೆಡ್ಡಿ, ಕೇಶವ, ಧರ್ಮೇಶ್, ನಾರಾಯಣಸ್ವಾಮಿ, ಶ್ರೀನಿವಾಸ್ ನಾಯ್ಡು, ವೆಂಕಟೇಶ್ ಇದ್ದರು.
ಸರ್ಕಾರದ ನಿರ್ಲಕ್ಷ್ಯಕ್ಕೆ ಖಂಡನೆ: ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ರೈತ ವಿಠಲ ಅರಭಾವಿ ಸಾವಿಗೆ ಕಾರಣವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಟೀಕಿಸಿದೆ. ರೈತಪರ ಮೊಸಳೆ ಕಣ್ಣೀರು ಸುರಿಸದೆ ಜವಾಬ್ದಾರಿಯನ್ನು ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಕ್ಕರೆ ಸಚಿವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಮೃತ ರೈತನ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮುನಿಕೃಷ್ಣಪ್ಪ ಎಚ್ಚರಿಕೆ ನೀಡಿದ್ದಾರೆ.