ಎಂಇಎಸ್ ಶಾಸಕರ ವಿರುದ್ಧ; ಪ್ರತಿಭಟನೆ
ಚಿಕ್ಕಬಳ್ಳಾಪುರ: ರೈತ ವಿಠಲ ಅರಭಾವಿ ಆತ್ಮಹತ್ಯೆ ಮತ್ತು ಎಂಇಎಸ್ ಶಾಸಕರು ರಾಜ್ಯ ಸರ್ಕಾರದ ವಿರುದ್ಧ ನೀಡಿರುವ ಹೇಳಿಕೆ ಖಂಡಿಸಿ ಕರವೇ ಕಾರ್ಯಕರ್ತರು ರೈತರೊಂದಿಗೆ ಸೇರಿ ಪ್ರತಿಭಟನೆ ನಡೆಸಿದರು. ನಗರದ ಉಪ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ತಹಸೀಲ್ದಾರ್ ನಟೇಶ್ ಅವರಿಗೆ ಮನವಿ ಸಲ್ಲಿಸಿದರು.
ಎಂಇಎಸ್ ಶಾಸಕರು ಕನ್ನಡ ವಿರೋಧಿ ಹೇಳಿಕೆ ನೀಡುತ್ತ ಉದ್ಧಟತನ ಪ್ರದರ್ಶಿಸಿ ಬೆಳಗಾವಿಯಲ್ಲಿ ಕನ್ನಡತನಕ್ಕೆ ಧಕ್ಕೆ ತರುತ್ತಿದ್ದಾರೆ. ರಾಜ್ಯ ಸರ್ಕಾರದ ಶವಯಾತ್ರೆ ಮಾಡುತ್ತಿದ್ದೆವು ಎಂದು ಹೇಳಿಕೆ ನೀಡಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಕನ್ನಡ ಭಾಷೆಗೆ ಅವಮಾನ ಮಾಡುವಂತಹುದು ಇನ್ನೂ ಹೆಚ್ಚಾಗಲಿದ್ದು ಎಂಇಎಸ್ ಶಾಸಕರಿಗೆ ತಕ್ಕ ಪಾಠ ಕಲಿಸಬೇಕೆಂದು ಒತ್ತಾಯಿಸಿದರು. ಅಲ್ಲದೇ ವಿಠಲ ಅರಭಾವಿ ಕುಟುಂಬಕ್ಕೆ ಪರಿಹಾರ, ಬೆಲೆ ಸಮಸ್ಯೆಯಿಂದ ಒದ್ದಾಡುತ್ತಿರುವ ರೈತರಿಗೆ ಅಗತ್ಯವಿರುವ ನೆರವು ನೀಡಬೇಕೆಂದು ಒತ್ತಾಯಿಸಿದರು. ಅಗಲಗುರ್ಕಿ ಚಂದ್ರಶೇಖರ್, ಮಲ್ಲೇಶ್, ಚಲಪತಿ ಇದ್ದರು.