ಕ್ಯಾಟ್ಫಿಶ್ ಹೊಂಡಕ್ಕೆ ದಾಳಿ
ಚಿಕ್ಕಬಳ್ಳಾಪುರ: ಅನೇಕ ಬಾರಿ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದರೂ ಹಲವೆಡೆ ಅಕ್ರಮವಾಗಿ ಕ್ಯಾಟ್ ಫಿಶ್ ಸಾಕುತ್ತ ಕದ್ದು ಮುಚ್ಚಿ ಮಾರಾಟ ಮಾಡುತ್ತಿರುವುದು ನಿಂತಿಲ್ಲ. ಇದಕ್ಕೆ ನಿದರ್ಶನವಾಗಿ ವ್ಯಾಪಕವಾಗಿ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಉಪ ವಿಭಾಗಾಧಿಕಾರಿ ಶಾಂತಲಾ ನೇತೃತ್ವದ ಅಧಿಕಾರಿಗಳ ತಂಡ ಕ್ಯಾಟ್ ಫಿಶ್ ಸಾಕಾಣಿಕೆಯ ಹೊಂಡವನ್ನು ನಾಶಪಡಿಸಿದೆ.
ತಾಲೂಕಿನ ಗೊಲ್ಲಹಳ್ಳಿಯ ರೈತ ಮುನೇಗೌಡರವರ ಜಮೀನಿನಲ್ಲಿ ಕ್ಯಾಟ್ ಫಿಶ್ ಸಾಕಾಣಿಕೆಯ ಸರದಾರ ಮಹಮದ್ ಹುಸೇನ್ ಸಾಬ್ ಲಕ್ಷಾಂತರ ರು. ಬಂಡವಾಳ ಹಾಕಿ ಅಕ್ರಮವಾಗಿ ನಿರ್ಮಿಸಿದ್ದ ಹೊಂಡದಲ್ಲಿ ಕ್ಯಾಟ್ ಫಿಶ್ಗಳನ್ನು ಕದ್ದು ಮುಚ್ಚಿ ಸಾಕಾಣಿಕೆ ಮಾಡುತ್ತಿದ್ದರು. ಈ ಬಗ್ಗೆ ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡು ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಕ್ಯಾಟ್ ಫಿಶ್ ಸಾಕುತ್ತಿರುವುದು ಕಂಡು ಬಂದಿದೆ. ಅಧಿಕಾರಿಗಳು ಹೊಂಡಗಳನ್ನು ನಾಶಪಡಿಸಿದರು. ಅಲ್ಲದೇ ಕಾನೂನು ಬಾಹಿರವಾಗಿ ಕ್ಯಾಟ್ ಫಿಶ್ ಸಾಕುವುದಕ್ಕೆ ಸಹಕಾರ ನೀಡದಂತೆ ಸಂಬಂಧಪಟ್ಟ ರೈತನಿಗೆ ಎಚ್ಚರಿಕೆ ನೀಡಲಾಯಿತು. ಈ ನಡುವೆ ಮಹಮದ್ ಹುಸೇನ್ ಸಾಬ್ ತಾಲೂಕಿನ ಹಾರೋಬಂಡೆ ಸಮೀಪ ಹಿಂದೆ ಈ ದಂಧೆಯನ್ನು ನಡೆಸುತ್ತಿದ್ದ. ಆಗ ತಾಲೂಕು ಆಡಳಿತ ಹೊಂಡಗಳನ್ನು ತೆರವುಗೊಳಿಸಿ ಕ್ಯಾಟ್ ಫಿಶ್ಗಳನ್ನು ನಾಶ ಮಾಡಿತ್ತು. ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆಯನ್ನೂ ನೀಡಿತ್ತು. ಆದರೆ, ಇಲ್ಲಿ ತನ್ನ ದಂಧೆ ನಿಲ್ಲಿಸಿದ ಹುಸೇನ್ ಸಾಬ್ ಗೊಲ್ಲಹಳ್ಳಿಯಲ್ಲಿ ಮತ್ತೆ ನಡೆಸುತ್ತಿದ್ದ. ಇದೀಗ ಅಕ್ರಮವಾಗಿ ಕ್ಯಾಟ್ ಫಿಶ್ ಸಾಕುತ್ತಿರುವುದರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ತಹಸೀಲ್ದಾರ್ ನಟೇಶ್, ಡಿವೈಎಸ್ಪಿ ದೇವಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಬಾಲಾಜಿ ಸಿಂಗ್, ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.