ಸರ್ಕಾರದ ಪ್ರತಿಕೃತಿ ದಹಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಕೋಲಾರ ನ.28
ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡಬೇಕು. ರೈತ ವಿಠಲ್ ಭೀಮಪ್ಪ ಸಾವಿಗೆ ಕಾರಣರಾಗಿರುವ ಸಕ್ಕರೆ ಸಚಿವ ಪ್ರಕಾಶ್ ಹುಕ್ಕೇರಿ ಅವರನ್ನು ತಕ್ಷಣ ಸಚಿವ ಸಂಪುಟದಿಂದ ಹೊರ ಹಾಕಬೇಕೆಂದು ಒತ್ತಾಯಿಸಿ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ನೇತೃತ್ವದ ರಾಜ್ಯ ರೈತ ಸಂಘದ ಜಿಲ್ಲಾ ಘಟಕದಿಂದ ಸರ್ಕಾರದ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ನಗರದ ಕಾಲೇಜು ಸರ್ಕಲ್‌ನಲ್ಲಿ ರೈತ ಸಂಘದ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಚಿತ್ರವಿರುವ ಪ್ಲೆಕ್ಸ್‌ಗೆ ಬೆಂಕಿ ಹಚ್ಚೆ ರೈತ ಸಾವಿಗೆ ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘದ ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ನಾರಾಯಣಗೌಡ, ರೈತರ ಹಿತ ಕಾಪಾಡಲು ಯಾವುದೇ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ, ಚುನಾವಣೆ ಸಮಸ್ಯೆಯಲ್ಲಿ ರೈತರ ಮೂಗಿಗೆ ತುಪ್ಪ ಸವರಿದ್ದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮತ್ತೆ ತನ್ನ ರೈತ ವಿರೋಧಿ ನೀತಿಯನ್ನು ಪ್ರದರ್ಶಿಸಿರುವುದಕ್ಕೆ ರೈತನ ಸಾವೇ ಸಾಕ್ಷಿ ಎಂದು ಆರೋಪಿಸಿದರು.
ರೈತನ ಸಾವಿನ ಮೇಲೆ ರಾಜಕೀಯ ಮಾಡುವುದನ್ನು ಬಿಟ್ಟು, ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡು ಸತ್ತ ರೈತ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು, ರೈತನ ಮಗನಿಗೆ ಒಂದು ಸರ್ಕಾರಿ ಉದ್ಯೋಗ ನೀಡಬೇಕೆಂದು ಆಗ್ರಹಿಸಿದರು.
ಮೂರಂಡಹಳ್ಳಿ ಶಿವಾರೆಡ್ಡಿ, ಹುಲ್ಕುರು ಹರೀಕುಮಾರ್, ಬಂಗೋದಿ ನಾಗರಾಜ ಗೌಡ, ಮುನೇಗೌಡ, ತೆರ್ನಹಳ್ಳಿ ವೆಂಕಿ, ಆಂಜಿನಪ್ಪ, ಭಕ್ತನ್, ಮಹೇಶ್ ಕುಮಾರ್, ಪುರುಷೋತ್ತಮ್, ಕಾರಿ ವಿಶ್ವನಾಥ್, ಕ್ಯಾಸಂಬಳ್ಳಿ ಪ್ರತಾಪ್, ರಂಜಿತ್ ಕುಮಾರ್, ಸಾಗರ್, ಹೆಬ್ಬಣಿ ಆನಂದ್, ನೀಲಟೂರು ರಮೇಶ್, ಗಂಗಾಧರ್, ಮಾಸ್ತಿ ಬಾಬು, ಆಮರನಾರಾಯಣ ಸ್ವಾಮಿ, ಈಕಂಬಹಳ್ಳಿ ಮಂಜುನಾಥ್, ರಹಮಾನ್, ಮಂಜುನಾಥ್‌ರೆಡ್ಡಿ ಇದ್ದರು.