ಸುದ್ದಿ ಸಂಕ್ಷೇಪ
ಜೆಡಿಎಸ್‌ಗೆ ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಿನಾಮೆ
ಕೋಲಾರ: ಜಿಲ್ಲಾ ಜಾತ್ಯತೀತ ಜನತಾದಳದ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಹಿರಿಯ ಸಹಕಾರಿ, ಡಿಸಿಸಿ ಬ್ಯಾಂಕಿನ ನೂತನ ನಿರ್ದೇಶಕ ಬ್ಯಾಲಹಳ್ಳಿ ಎಂ. ಗೋವಿಂದಗೌಡ ರಾಜಿನಾಮೆ ನೀಡಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜಿನಾಮೆ ಸಲ್ಲಿಸಿರುವ ಅವರು ರಾಜಿನಾಮೆಗೆ ಯಾವುದೇ ಕಾರಣ ತಿಳಿಸಿಲ್ಲವಾದರೂ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜೆಡಿಎಸ್ ಮುಖಂಡರು ನಡೆಸಿದ ಕುತಂತ್ರ ಹಾಗೂ ಅಧ್ಯಕ್ಷ -ಉಪಾಧ್ಯಕ್ಷರ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ತಮ್ಮನ್ನು ನಿರ್ಲಕ್ಷಿಸಿರುವುದರಿಂದ ಬೇಸತ್ತು ಪಕ್ಷಕ್ಕೆ ರಾಜಿನಾಮೆ ನೀಡಿರುವುದಾಗಿ ತಿಳಿದು ಬಂದಿದೆ. ಶುಕ್ರವಾರ ತಮ್ಮ ಬೆಂಬಲಿಗರ ಸಭೆಯಲ್ಲಿ ಮುಂದಿನ ನಿರ್ಧಾರ ಪ್ರಕಟಿಸಲಿದ್ದಾರೆನ್ನಲಾಗಿದೆ. ಈ ನಡುವೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಗೋವಿಂದಗೌಡರಿಗೆ ಬೆಂಬಲ ನೀಡಿರುವ ಕಾಂಗ್ರೆಸ್ ಮುಖಂಡರು ಗೌಡರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಮೂಲಕ ಡಿಸಿಸಿ ಬ್ಯಾಂಕನ್ನು ತಮ್ಮ ವಶಕ್ಕೆ ಪಡೆಯಲು ಪ್ರಯತ್ನ ಮುಂದುವರೆಸಿದ್ದಾರೆ.
ಸಿಎಂ ರಾಜಿನಾಮೆಗೆ ಆಗ್ರಹ
ಗೌರಿಬಿದನೂರು: ರೈತವಿರೋಧಿ ಸರ್ಕಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಕ್ಕರೆ ಸಚಿವರು ಹಾಗೂ ಕೃಷಿ ಸಚಿವರು ತಕ್ಷಣ ರಾಜಿನಾಮೆ ನೀಡಬೇಕೆಂದು ಪ್ರಾಂತ ರೈತಸಂಘ ಮತ್ತು ಡಿವೈಎಫ್‌ಐ ಕಾರ್ಯಕರ್ತರು ಪಟ್ಟಣದ ನಾಗಯ್ಯರೆಡ್ಡಿ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ಈ ಸಂದರ್ಭದಲ್ಲಿ ಸಿಪಿಐಎಂ ಮುಖಂಡ ಸಿದ್ದಗಂಗಪ್ಪಮಾತನಾಡಿದರು. ಸಿ.ಸಿ. ಅಶ್ವತ್ಥಪ್ಪ, ರವಿಚಂದ್ರಾರೆಡ್ಡಿ, ತಿಪ್ಪಣ್ಣ, ಕೇಶವ ಇದ್ದರು.
ಎಂಇಎಸ್ ಅಣಕು ಶವಯಾತ್ರೆ
ಬಾಗೇಪಲ್ಲಿ: ಪ್ರಜಾ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾಗಿರುವ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಕನ್ನಡ ಭಾಷೆ, ಕನ್ನಡಿಗರು ಹಾಗೂ 6 ಕೋಟಿ ಕನ್ನಡಿಗರನ್ನು ಪ್ರತಿನಿಧಿಸುವ ಸರ್ಕಾರದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಕನ್ನಡ ಸೇನೆ ಕರ್ನಾಟಕ ಮತ್ತು ಕರವೇ ಕಾರ್ಯಕರ್ತರು ಪ್ರತ್ಯೇಕವಾಗಿ ಎಂಇಎಸ್ ಶಾಸಕರ ಅಣಕು ಶವಯಾತ್ರೆ ನಡೆಸಿದರು.