ಆಟೋ ಚಾಲಕರ ಕಾರ್ಯ ಶ್ಲಾಘನೀಯ: ಎನ್. ಭಾಸ್ಕರ್
ಗೌರಿಬಿದನೂರು: ಗಡಿಭಾಗದಲ್ಲಿ ತೆಲುಗು ಭಾಷೆ ಪ್ರಾಬಲ್ಯವಿದ್ದು ಕನ್ನಡ ಭಾಷೆಯ ಉಳಿವಿಗಾಗಿ ಆಟೋ ಚಾಲಕರ ಕಾರ್ಯ ಶ್ಲಾಘನೀಯ ಎಂದು ತಾಲೂಕು ದಂಡಾಧಿಕಾರಿ ಎನ್. ಭಾಸ್ಕರ್ ಅಭಿಪ್ರಾಯಪಟ್ಟರು. ಡಾ.ಎಚ್. ನರಸಿಂಹಯ್ಯ ಆಟೋ ನಿಲ್ದಾಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ತಾಲೂಕಿನ ಜನತೆಗೆ ಕನ್ನಡದ ಬಗ್ಗೆ ಅರಿವು ಮೂಡಿಸುವಲ್ಲಿ ತಮ್ಮದೆ ಆದ ಕಾರ್ಯ ನಿರ್ವಹಿಸುತ್ತಿರುವ ಆಟೋ ಚಾಲಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಜಲತಜ್ಞ ಕೆ.ನಾರಾಯಣಸ್ವಾಮಿ ಮಾತನಾಡಿ, ಕನ್ನಡ ಪುಸ್ತಕ ಹಾಗೂ ಕನ್ನಡ ಪತ್ರಿಕೆಗಳನ್ನು ಕೊಂಡು ಓದಿದಾಗ ಕನ್ನಡ ಭಾಷೆ ಉಳಿಸಲು ಸಾಧ್ಯ ಎಂದು ಸಲಹೆಯಿತ್ತರು. ಪುರಸಭೆ ಮುಖ್ಯ ಅಧಿಕಾರಿ ಹನುಮಂತೇಗೌಡ ಮಾತನಾಡಿದರು. ವೆಂಕಟರವಣ, ರಾಮಕೃಷ್ಣ, ಕೃಷ್ಣಮೂರ್ತಿ, ರಘು, ಅರುಣ್, ನರಸಿಂಹಮೂರ್ತಿ, ಸಲೀಮ್, ಇಬ್ರಾಹಿಂ, ರಾಜು, ಶ್ರೀಧರ್ ಇದ್ದರು.