ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಊಟದ ಜೊತೆ ಲಾಠಿ ಏಟು ಫ್ರೀ!

Rashmi Kasaragodu
Updated On : 1 Dec 2013, 1:28 am

 ಎನ್. ವೆಂಕಟೇಶ್
ಚಿಕ್ಕಬಳ್ಳಾಪುರ: ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಯಾರದೋ ಮದುವೆಯಲ್ಲಿ ಪುಗಸಟ್ಟೆ ಊಟ ಮಾಡಲು ಹೋದ ಯುವಕರ ತಂಡ ಕಳ್ಳತನದ ಆರೋಪಕ್ಕೆ ಗುರಿಯಾಗಿ ಪೊಲೀಸರಿಂದ ಹೊಡೆತ ತಿಂದು ಇಕ್ಕಟ್ಟಿಗೆ ಸಿಲುಕಿಕೊಂಡ ಘಟನೆ ನಗರದಲ್ಲಿ ನಡೆದಿದೆ.
ನಗರದ ಕೃಷ್ಣಾ ಟಾಕೀಸ್ ಬಳಿ ಇರುವ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಮದುವೆಯೊಂದು ನಡೆಯುತ್ತಿತ್ತು. ಈ ಅದ್ಧೂರಿ ಮದುವೆಯಲ್ಲಿ ಅಡುಗೆ ತಯಾರಿಸುವ ಜವಾಬ್ದಾರಿ ಹೊತ್ತಿದ್ದ ಅಡುಗೆ ಭಟ್ಟ ತಮಗೆ ಪರಿಚಯವಿದ್ದ ನವೀನ್ ಕುಮಾರ್ ಎಂಬವರನ್ನು ಊಟ ಮಾಡಿಕೊಂಡು ಹೋಗುವಂತೆ ತಿಳಿಸಿದ್ದರು ಎನ್ನಲಾಗಿದೆ. ನವೀನ್ ಕುಮಾರ್ ತನ್ನ ತಮ್ಮ ಅನಿಲ್ ಕುಮಾರ್ ಜತೆಗೆ ಇತರೆ ಸ್ನೇಹಿತರನ್ನೂ ಊಟಕ್ಕೆ ಕರೆದೊಯ್ದಿದ್ದಾರೆ. ರಾತ್ರಿ ಊಟ ಮುಗಿಸಿದ ಎಲ್ಲರೂ ಮದುವೆಯಲ್ಲಿ ಇಸ್ಪೀಟ್ ನಡೆಯುತ್ತಿದೆ ಎಂಬ ವಿಷಯ ತಿಳಿದು ಕಲ್ಯಾಣ ಮಂಟಪದಲ್ಲಿ ಅಡ್ಡಾಡಿದ್ದು ಇವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಇವರನ್ನು ನೋಡಿದ ಮದುವೆಯ ಹಲವರು ವಿವರ ಕೇಳಲು ಮುಂದಾದಾಗ ಅನಿಲ್ ಕುಮಾರ್ ಮತ್ತು ಗೆಳೆಯರು ಹೊರಬರುತ್ತಿದ್ದ ವೇಳೆ ಕಲ್ಯಾಣ ಮಂಟಪದ ಕೊಠಡಿಯೊಂದರ ಬೀಗ ಮುರಿದು ಮೊಬೈಲ್ಗಳು, 120 ಗ್ರಾಂ ಬಂಗಾರ, ಹಣ ಕದಿಯಲಾಗಿದೆ ಎಂದು ಮದುವೆಯಲ್ಲಿದ್ದವರು ಕೂಗಿಕೊಂಡಿದ್ದು ತಕ್ಷಣ ಅಲ್ಲಿದ್ದವರು ಅನಿಲ್ ಕುಮಾರ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಯ್ಯಯ್ಯಪ್ಪನ ದರ್ಶನ: ಅಯ್ಯಪ್ಪಸ್ವಾಮಿ ಮಾಲೆಯನ್ನು ಹಾಕಿಕೊಂಡಿದ್ದ ಅನಿಲ್ ಕುಮಾರ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಮಾಲೆ ತೆಗೆಸಿ ಅಯ್ಯಯ್ಯಪ್ಪನ ದರ್ಶನ ಮಾಡಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಈತನ ಜತೆ ಹೋಗಿದ್ದ ಧನರಾಜು, ನವೀನ್, ಚಾಂದಾಪಾಷಾ, ಅನಿಲ್ಕುಮಾರ್ ಅವರನ್ನು ಠಾಣೆಗೆ ಕರೆಸಿಕೊಂಡು ಕಳ್ಳತನದ ಬಗ್ಗೆ ವಿಚಾರಿಸಿದ್ದಾರೆ. ಆದರೆ, ಎಷ್ಟೇ ವಿಚಾರಿಸಿದರೂ ಕಳುವಾದ ಒಡವೆಗಳ ಬಗ್ಗೆ ಮಾಹಿತಿ ದೊರೆಯದ ಕಾರಣ ಇವರು ಕಳ್ಳರಲ್ಲ ಎಂಬುದು ಮನದಟ್ಟಾಗಿದೆ.
ಕಳ್ಳತನ ಮಾಡಿಲ್ಲ: ನಾವು ಕಳ್ಳತನ ಮಾಡಲು ಹೋಗಿಲ್ಲ. ಆದರೆ, ಪೊಲೀಸರು ವಿಚಾರಣೆ ನೆಪದಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಂದಿದ್ದೇನೆ ಎಂದು ಪೊಲೀಸರ ವಿಚಾರಣೆಗೆ ಗುರಿಯಾದ ಅನಿಲ್ ಕುಮಾರ್ ಅಳಲು ತೋಡಿಕೊಂಡರು. ಈ ನಡುವೆ ನವೀನ್ ಕುಮಾರ್ ಸೇರಿದಂತೆ ಕೆಲ ಹುಡುಗರು ಚಿನ್ನಾಭರಣ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದು, ವಿಚಾರಣೆ ನಡೆಸದೇ ಪೊಲೀಸರು ನಮ್ಮ ಹುಡುಗರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಚಿನ್ನಾಭರಣ ಅಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ವಶಕ್ಕೆ ಪಡೆದಿದ್ದ ಹುಡುಗರನ್ನು ಬಿಟ್ಟಿದ್ದಾರೆ. ಕಲ್ಯಾಣ ಮಂಟಪದಲ್ಲಿ ಒಡವೆಗಳನ್ನು ಕಳೆದುಕೊಂಡ ನಗರೇಶ್ವರ್ ಮತ್ತಿತರರು ನಗರ ಠಾಣೆಗೆ ದೂರು ಕೊಟ್ಟಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.



ಕಲ್ಯಾಣ ಮಂಟಪದಲ್ಲಿ ಕಳ್ಳತನವಾದ ಹಿನ್ನೆಲೆಯಲ್ಲಿ ಐದು ಜನ ಹುಡುಗರನ್ನು ಕರೆಸಿ ವಿಚಾರಣೆ ಮಾಡಿ ಬಿಟ್ಟಿದ್ದೇವೆ. ಮೇಲ್ನೋಟಕ್ಕೆ ಹುಡುಗರು ಕಳ್ಳತನ ಮಾಡಿಲ್ಲ ಗೊತ್ತಾಗಿದ್ದರೂ ತನಿಖೆ ನಡೆಸುತ್ತಿದ್ದೇವೆ.
ಟಿ ಶಿವಸ್ವಾಮಿ, ಸಬ್ ಇನ್ಸ್ ಪೆಕ್ಟರ್ ಅಧೀಕ್ಷಕರು, ನಗರ ಆರಕ್ಷಕ ಠಾಣೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement