ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕನ್ನಡಿಗರ ಸೇವೆಗೆ ಬದ್ಧ: ಸಚಿವ ಕೆ.ಎಚ್. ಮುನಿಯಪ್ಪ

Rashmi Kasaragodu
Updated On : 1 Dec 2013, 1:24 am

ಕೋಲಾರ: ಗಡಿ ಹಾಗೂ ಗ್ರಾಮೀಣ ಭಾಗದ ಜನತೆಗೆ ಕನ್ನಡ ಬಗ್ಗೆ ಅರಿವು ಮೂಡಿಸಬೇಕು. ಕರ್ನಾಟಕದಲ್ಲಿರುವ ಪ್ರತಿಯೊಬ್ಬರು ಕನ್ನಡವನ್ನು ಕಲಿಯುವ ಮೂಲಕ ಕರ್ನಾಟಕದ ವೈಭವ ಹೆಚ್ಚಿಸಬೇಕೆಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು. ನರಸಾಪುರದಲ್ಲಿ ಕರ್ನಾಟಕ ರಕ್ಷಣಾ ಸಮಿತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ 58ನೇ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ರಕ್ಷಣ ಸಮಿತಿ, ನರಸಾಪುರ ಹೋಬಳಿ ಘಟಕ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕೈಗಾರಿಕೆಗಳಿಗೆ ಜಿಲ್ಲೆಯ ಸ್ಥಳೀಯರಿಗೆ ಮೊದಲು ಅವಕಾಶ ನೀಡಬೇಕಾಗಿ ಉದ್ಯಮಿಗಳಿಗೆ ಸೂಚಿಸಲಾಗಿದೆ ಎಂದರು. ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಚೀ.ನಾ. ರಾಮು ನರಸಾಪುರ ಹೋಬಳಿ ಘಟಕ, ಹೋಬಳಿ ಆಟೋ ಘಟಕ, ಗ್ರಾಮ ಘಟಗಳನ್ನು ಉದ್ಘಾಟಿಸಿ, ಮಾತನಾಡಿ, ಕನ್ನಡ ಭಾಷೆ ಗೌರವಯುತವಾಗಿರಲಿ ಅನ್ಯಭಾಷೆ ಬದುಕಿಗೆ ದಾರಿದೀಪವಗಲಿ ಎಂದು ಅಭಿಪ್ರಾಯ ಪಟ್ಟರು.


ವಿಶ್ವ ಏಡ್ಸ್ ದಿನಾಚರಣೆ: ಜಾಥಾ ಉದ್ಘಾಟನೆ


ಚಿಕ್ಕಬಳ್ಳಾಪುರ: ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಸ್ಥಳೀಯ ಸ್ವಯಂ ಸೇವಾ ಸಂಘ - ಸಂಸ್ಥೆಗಳು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಲಯನ್ಸ್ ಸಂಸ್ಥೆಗಳಿಂದ 2013ರ ವಿಶ್ವ ಏಡ್ಸ್ ದಿನಾಚರಣೆಯ ಜಾಥಾ ಆಯೋಜಿಸಲಾಗಿದೆ. ಜಾಥಾ ಉದ್ಘಾಟನೆಯನ್ನು ಡಿ.1 ರಂದು ಬೆಳಗ್ಗೆ 10.30ಕ್ಕೆ ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಗೂ ಸಮಾರಂಭದ ಉದ್ಘಾಟನೆಯನ್ನು ಬೆಳಗ್ಗೆ 11ಕ್ಕೆ ನಗರದ ನಂದಿ ರಂಗ ಮಂದಿರ ಆವರಣ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೆರವೇರಿಸಲಿದ್ದು,ಅಧ್ಯಕ್ಷತೆಯನ್ನು ಸ್ಥಳೀಯ ಶಾಸಕ ಡಾ.ಕೆ. ಸುಧಾಕರ್ ವಹಿಸಲಿದ್ದಾರೆ. ಕೇಂದ್ರ ಸಚಿವರಾದ ಡಾ.ಎಂ. ವೀರಪ್ಪ ಮೊಯಿಲಿ ಹಾಗೂ ಕೆ.ಎಚ್. ಮುನಿಯಪ್ಪ, ವಿಧಾನಸಭೆ ಉಪಸಭಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಭಾಗವಹಿಸುವರು.

ಸನ್ಮಾನ

ಕೋಲಾರದ ಬೆಂಗಳೂರು ವಿವಿ ಸ್ನಾತಕೋತ್ತರ ಕೇಂದ್ರದಲ್ಲಿ ಬುಧವಾರ ಕೇಂದ್ರ ಸಾಹಿತ್ಯ ಅಕಾಡಮಿ ಯುವಪ್ರಶಸ್ತಿ ಪುರಸ್ಕೃತ ಲಕ್ಕೂರು ಆನಂದ ಅವರನ್ನು ಸನ್ಮಾನಿಸಲಾಯಿತು.


ಕಾನೂನು ಸಲಹೆಗಾರರ ನೇಮಕಕ್ಕೆ ಅರ್ಜಿ ಆಹ್ವಾನ

ಚಿಕ್ಕಬಳ್ಳಾಪುರ: ಕಂದಾಯ ಇಲಾಖೆಯ ಭೂ ಸ್ವಾಧೀನ ಮತ್ತಿತರೆ ನ್ಯಾಯಾಲಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೆ ಸೂಕ್ತ ಸಲಹೆ ನೀಡುವ ಸಲುವಾಗಿ ಕಾನೂನು ಸಲಹೆಗಾರರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಪ್ರತಿ ಜಿಲ್ಲೆಗೆ ಒಂದು ಕಾನೂನು ಸಲಹೆಗಾರರ ಹುದ್ದೆಯನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಜಿಲ್ಲಾಡಳಿತ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ಪೂರ್ಣ ವಿವರಗಳೊಂದಿಗೆ ಅರ್ಜಿಗಳನ್ನು ಡಿ.15 ರೊಳಗಾಗಿ ಮೊಹರು ಮಾಡಿದ ಲಕೋಟೆಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕಾಗಿದೆ. ಅರ್ಜಿದಾರರು ಕಾನೂನು ಪದವೀಧರರಾಗಿರುವ (ಎಲ್ಎಲ್ಬಿ) ಕಂದಾಯ ಇಲಾಖೆಯ ನಿವೃತ್ತ ವಿಶೇಷ ಜಿಲ್ಲಾಧಿಕಾರಿಗಳು, ನಿವೃತ್ತ ತಹಸೀಲ್ದಾರರು, ನಿವೃತ್ತ ಉಪತಹಸೀಲ್ದಾರರು, ನಿವೃತ್ತ ಸಿವಿಲ್ನ್ಯಾಯಾಧೀಶರಾಗಿರಬೇಕು ವೇತನ ನಿಗಧಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಎಲ್ಲಾ ಜಾತಿಗೂ ಒಂದೇ ಸ್ಮಶಾನಕ್ಕೆ ಡಿಸಿ ಸಲಹೆ

ಕೋಲಾರ: ಜಿಲ್ಲೆಯಲ್ಲಿ ಸ್ಮಶಾನಗಳಿಗೆ ಜಾಗ ಗುರುತಿಸಿ ಸತ್ತವರ ಅಂತ್ಯ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಕೋಲಾರ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಸ್ಮಶಾನಕ್ಕೆ ಸರ್ಕಾರಿ ಜಾಗ ಇಲ್ಲವೆ ಖಾಸಗಿಯವರಿಂದ ಭೂಮಿ ಖರೀದಿ ಮಾಡಿ ಜಾಗ ಮೀಸಲಿಡುವುದಕ್ಕೆ ಎಲ್ಲಾ ತಹಸೀಲ್ದಾರ್ಗಳು, ಉಪ ತಹಸೀಲ್ದಾರ್ಗಳು ಗಮನ ನೀಡಬೇಕೆಂದು ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದರು. ನಗರದ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದಲ್ಲಿ ಅವರು ಗುರುವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಅನೇಕ ಹಳ್ಳಿಗಳಲ್ಲಿ ಸ್ಮಶಾನಕ್ಕೆ ಜಾಗ ಇಲ್ಲದಿರುವುದರಿಂದ ಅಂತ್ಯ ಸಂಸ್ಕಾರಕ್ಕೆ ತೊಂದರೆ ಆಗುತ್ತಿದೆ. ಸರ್ಕಾರಿ ಜಾಗ ಹುಡುಕಲು ಪ್ರಥಮ ಆದ್ಯತೆ ನೀಡಿ, ಒಂದು ವೇಳೆ ಸರ್ಕಾರಿ ಭೂಮಿ ಸಿಗದಿದ್ದರೆ ಖಾಸಗಿ ಜಮೀನು ಖರೀದಿಗೆ ಪ್ರಯತ್ನಿಸುವಂತೆ ಸೂಚಿಸಿದರು.


ಬಂಗಾರಪೇಟೆ: ಕಾಡಾನೆ ಕಾಟಕ್ಕೆ ಇನ್ನೂ ಕೊನೆ ಇಲ್ಲ

ಬಂಗಾರಪೇಟೆ; ಕಳೆದ ವಾರದಿಂದ ರೈತರಿಗೆ, ಅರಣ್ಯ ಇಲಾಖೆ ಅಧಿಕಾರಿಗಳ ನಿದ್ದೆ ಕೆಡೆಸಿರುವ ಗಜಪಡೆ ಈಗ ಆಂಧ್ರಪ್ರದೇಶದ ಹಾಗೂ ತಮಿಳುನಾಡಿನ ಗಡಿ ಭಾಗವಾದ ಬತ್ತಲಹಳ್ಳಿ ಸುತ್ತಮುತ್ತಲಿನ ಮಲ್ಲಪ್ಪನ ಬೆಟ್ಟದಲ್ಲಿ ಠಿಕಾಣಿ ಹೂಡಿದೆಯಾದರೂ ಇದುವರೆಗೂ ರೈತರಿಗೆ ಮತ್ತು ಅವರು ಬೆಳೆದಿರುವ ಬೆಳೆಗಳಿಗೆ ಯಾವುದೇ ಹಾನಿ ಮಾಡಿಲ್ಲ. ಅಲ್ಲದೆ ಕಾಡಾನೆಗಳನ್ನು ಓಡಿಸಲು ಹೆದುರುವಂತಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ವಾರದಿಂದ ಎಡೆಬಿಡದೆ ಅವಿರತ ಪ್ರಯತ್ನದಲ್ಲಿದ್ದಾರೆ. ಆಂಧ್ರದ ಕಡೆ ಆನೆಗಳನ್ನು ಓಡಿಸಲು ಸಿಬ್ಬಂದಿ ಮುಂದಾದರೆ ಗಡಿಯಲ್ಲಿ ಆಂಧ್ರ ಅರಣ್ಯ ಸಿಬ್ಬಂದಿ ಕಾವಲು ಕಾಯುತ್ತಿದ್ದು ಮತ್ತೆ ರಾಜ್ಯದತ್ತ ಸಾಗಿಸಲು ಮುಂದಾಗಿರುವುದರಿಂದ ರಾಜ್ಯ ಅರಣ್ಯ ಸಿಬ್ಬಂದಿಗೆ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿದೆ. ಈಗಗಾಲೇ ಸಣ್ಣಪುಟ್ಟ ಬೆಳೆ ನಾಶವಾಗಿದ್ದು ಅವುಗಳನ್ನು ಸರ್ವೆ ಮಾಡಿ ತ್ವರಿತವಾಗಿ ಇಲಾಖೆಯಿಂದ ರೈತರಿಗೆ ನಷ್ಟ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಕಲಿಕಾ ಕೇಂದ್ರಗಳ ಪ್ರಗತಿ, ಪುನಶ್ಚೇತನ ಕಾರ್ಯಕ್ರಮ


ಟೇಕಲ್: ಕಲಿಕಾ ಕೇಂದ್ರಗಳ ಪ್ರಗತಿ ಮತ್ತು ಪುನಶ್ಚೇತನ ಕಾರ್ಯಕ್ರಮಗಳನ್ನು ಎರಡನೇ ಹಂತವಾಗಿ ಹಮ್ಮಿಕೊಳ್ಳಲಾಗುತ್ತಿದ್ದು ಸಾಕ್ಷರ ಭಾರತದ ಕಾರ್ಯಕ್ರಮದಡಿಯಲ್ಲಿ ಲೋಕಶಿಕ್ಷಣ ಕೇಂದ್ರಗಳು ಕೆಲಸ ನಿರ್ವಹಿಸುತ್ತದೆಂದು ಲೋಕ ಶಿಕ್ಷಣ ಕೇಂದ್ರದ ತಾಲೂಕು ಸಂಯೋಜಕರಾದ ಷಣ್ಮುಗಯ್ಯ ತಿಳಿಸಿದರು.
 ಕೆ.ಜಿ. ಹಳ್ಳಿ ಗ್ರಾ.ಪಂ.ನಲ್ಲಿ ಹೋಬಳಿ ಹಂತದ ಕ್ಲಸ್ಟರ್ ಸಭೆಅಧ್ಯಕ್ಷತೆ ವಹಿಸಿ ಮಾತನಾಡಿದರು. ಇನ್ನು ಮುಂದೆ ಲೋಕ ಶಿಕ್ಷಣ ಕೇಂದ್ರಗಳು ಪ್ರತಿ ಕ್ಲಸ್ಟರನಲ್ಲಿ ಬೆಳಿಗ್ಗೆ 8 ರಿಂದ 12, ಸಂಜೆ 4 ರಿಂದ 8 ರವರೆಗೆ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ಪ್ರೇರಕರು 20ಕ್ಕೂ ಹೆಚ್ಚು ಕಲಿಕಾರ್ಥಿಗಳನ್ನು ಗುರುತಿಸಿ ಕಲಿಕೆಯನ್ನು ಪ್ರಗತಿಪಡಿಸಬೇಕು ಎಂದು ಅವರು ವಿವರಿಸಿದರು.


ಖಾಲಿ ಇರುವ ಉದ್ಯೋಗ ವರದಿ ನೀಡಲು ಸೂಚನೆ

ಚಿಕ್ಕಬಳ್ಳಾಪುರ: 1959ರ ಉದ್ಯೋಗ ವಿನಿಮಯ ಕೇಂದ್ರಗಳ (ಖಾಲಿ ಹುದ್ದೆಗಳ ಕಡ್ಡಾಯ ಅಧಿಸೂಚನೆ) ಅಧಿನಿಯಮ ಸೆಕ್ಷನ್ 5 (1) ಹಾಗೂ 1960 ಉದ್ಯೋಗ ವಿನಿಮಯ ಕೇಂದ್ರಗಳ (ಖಾಲಿ ಹುದ್ದೆಗಳ ಕಡ್ಡಾಯ ಅಧಿಸೂಚನೆ) ನಿಮಯಗಳ ನಿಯಮ (6) ಮೇರೆಗೆ ಸಾರ್ವಜನಿಕ ವಲಯ, ಕೇಂದ್ರ, ರಾಜ್ಯ ಸರ್ಕಾರದ ಇಲಾಖೆಗಳು, ಕಚೇರಿಗಳು, ಸಂಸ್ಥೆಗಳು, ಕೇಂದ್ರ, ರಾಜ್ಯ, ಅರೆ ಸರ್ಕಾರಿ ಸ್ಥಾಪನೆಗಳು ಅಂದರೆ ಮಂಡಳಿಗಳು ನಿಗಮಗಳು, ಉದ್ಯಮಗಳು ಮತ್ತು ಸ್ಥಳೀಯ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳ ಶಾಸನಬದ್ಧ ಉದ್ಯೋಗ ವರದಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಕ್ಕೆ ತ್ರೈಮಾಸಿಕವಾಗಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಯಾವುದೇ ಕಾರಣಕ್ಕೆ ಶಾಸನಬದ್ದಧ ತ್ರೈಮಾಸಿಕ ಉದ್ಯೋಗ ವರದಿಯನ್ನು ನಿಖರ ಮಾಹಿತಿಯೊಡನೆ ನಿಗಧಿಪಡಿಸಿದ ಅವಧಿಯಲ್ಲಿ ಸಲ್ಲಿಸಲು ವಿಫಲರಾದಲ್ಲಿ ಸಂಬಂಧಪಟ್ಟ ಸಂಸ್ಥೆ, ಕಚೇರಿಯ ಮುಖ್ಯಸ್ಥರು ಕಾನೂನು ಕ್ರಮಕ್ಕೆ ಒಳಗಾಗಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



'ಕನ್ನಡ ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ'

ಗೌರಿಬಿದನೂರು: ಕನ್ನಡ ಭಾಷೆ ಉಳಿದರೆ ಕನ್ನಡ ನಾಡು, ಸಂಸ್ಕೃತಿ ಉಳಿಯುತ್ತದೆ ಎಂದು ಕನ್ನಡ ಚಿತ್ರ ನಟ ಶಿವರಾಜ್ ಕುಮಾರ್ ತಿಳಿಸಿದರು.ಪಟ್ಟಣದಲ್ಲಿ ಏರ್ಪಡಿಸಿದ್ದ ರಾಜ್ಯೋತ್ಸವದಲ್ಲಿ ಮಾತನಾಡಿ, ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವ, ತೆಲುಗು ಭಾಷೆಯ ಪ್ರಭಾವಕ್ಕೆ ಒಳಗಾಗಿರುವ ಈ ಭಾಗದಲ್ಲಿ ಜನರ ಕನ್ನಡಾಭಿಮಾನಕ್ಕೆ ಅಭಿನಂದನೀಯ ಎಂದು ಸಂತಸ ವ್ಯಕ್ತಪಡಿಸಿದರು. ಸಂಗೀತ ನಿರ್ದೇಶಕ ವಿ. ಮನೋಹರ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಂ. ರವಿನಾರಾಯಣರೆಡ್ಡಿ, ಜಿಪಂ ಸದಸ್ಯ ಸಿ.ಆರ್. ನರಸಿಂಹಮೂರ್ತಿ, ಪಿಎಸ್ಐ ಮಹೇಶ್ ಕುಮಾರ್, ಗೋಪಿನಾಥ್ ಇದ್ದರು. ಕಾರ್ಯಕ್ರಮದಲ್ಲಿ ಕರವೇ ಜಿ.ಎನ್. ಅಶ್ವತ್ಥನಾರಾಯಣ ಮತ್ತಿತರರು ಕಾರ್ಯಕ್ರಮದ ಸಂಘಟಕ ಜಿ. ಬಾಲಾಜಿಯನ್ನು ಸನ್ಮಾನಿಸಿದರು. ಪತ್ರಿಕೆಗಳನ್ನು ಹಂಚುವ ಹುಡುಗರಿಗೆ ಉಚಿತ ಸೈಕಲ್ ಹಂಚಲಾಯಿತು


ಕನ್ನಡ ರಾಜ್ಯೋತ್ಸವ


ಗೌರಿಬಿದನೂರಿನಲ್ಲಿ ಕೆಎಸ್ಆರ್ಟಿಸಿ ಘಟಕದಿಂದ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಸನ್ಮಾನ.


ಮಕ್ಕಳು ಹೆಚ್ಚಾಗಿ ಕ್ರೀಡೆಗಳಲ್ಲಿ ಭಾಗವಹಿಸಲು ಮನವಿ

ಚಿಕ್ಕಬಳ್ಳಾಪುರ: ಚಿಕ್ಕ ವಯಸ್ಸಿನಿಂದಲೇ ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಬುದ್ದಿ ಮತ್ತಷ್ಟು ಚುರುಕುಗೊಳ್ಳುತ್ತದೆ ಎಂದು ಆದಿಚುಂಚನಗಿರಿ ಮಠದ ಶ್ರೀ ಸಿದ್ದೇಶ್ವರನಾಥ ಸ್ವಾಮೀಜಿ ತಿಳಿಸಿದರು. ನಗರದ ಹೊರವಲಯದ ಅಗಲಗುರ್ಕಿ, ಬಿಜಿಎಸ್ ಜ್ಞಾನಗಂಗೋತ್ರಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಮಾತನಾಡಿ, ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವಂತೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡಬೇಕು. ಈ ಜವಾಬ್ದಾರಿ ಶಾಲೆಯ ಶಿಕ್ಷಕರು ಮತ್ತು ಪೋಷಕರ ಮೇಲಿದೆ. ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುತ್ತಲ್ಲದೇ ಬುದ್ದಿ, ಕೌಶಲ್ಯವನ್ನು ಹೆಚ್ಚಿಸುತ್ತದೆ ಎಂದರು. ಪ್ರೊ. ಶಿವರಾಮರೆಡ್ಡಿ ಮಾತನಾಡಿದರು. ಪುಟ್ಟ ಮಾದಯ್ಯ, ಅಂತಾರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್, ಶಾಲೆಯ ಪ್ರಾಂಶುಪಾಲ ಎಚ್.ಬಿ. ರಮೇಶ್ ಇದ್ದರು.


ಮುಳಬಾಗಲಲ್ಲಿ ಶಿಲಾಯುಗ ಕುರುಹುಗಳು ಪತ್ತೆ

ಕೋಲಾರ: ಜಿಲ್ಲೆಯ ಮುಳಬಾಗಲು ತಾಲೂಕಿನ ಅಂಜನಾದ್ರಿ ಬೆಟ್ಟದ ತಪ್ಪಲಿನ ದಕ್ಷಿಣ ಭಾಗದಲ್ಲಿ ಶಿಲಾಯುಗದ ಕುರುಹುಗಳು ಪತ್ತೆಯಾಗಿವೆ. ಇತಿಹಾಸ ಸಂಶೋಧಕ ಅರಿವು ಡಾ.ಜಿ. ಶಿವಪ್ಪ ಮತ್ತು ಪ್ರೊ. ರುದ್ರೇಶ್ ಬಿ .ಅದರಂಗಿ ಅವರು ಕ್ಷೇತ್ರ ಕಾರ್ಯ ಮಾಡಿದಾಗ ಈ ಶಿಲಾಯುಗದ ಕುರುಹುಗಳು ಪತ್ತೆಯಾಗಿದೆ. ಮುಳಬಾಗಲು ತಾಲೂಕಿನ ಅರಹಳ್ಳಿ, ಕೆರಸಮಂಗಲ, ಕುರುಬರಹಳ್ಳಿ, ನಾಗನಹಳ್ಳಿ, ಎನ್. ವೆಂಕಟಾಪುರ, ಬೂಡದೇರು ಮೊದಲಾದ ಕಡೆ ಈಗಾಗಲೆ ಶಿಲಾಯುಗದ ಕುರುಹುಗಳು ಪತ್ತೆಯಾಗಿದ್ದು ಇವುಗಳ ಸಾಲಿಗೆ ಮುಳಬಾಗಲು ಅಂಜನಾದ್ರಿ ಬೆಟ್ಟವೂ ಸೇರಿದೆ. ಇದು ನವಶಿಲಾಯುಗದ ವಸತಿ ಸ್ಥಳವಾಗಿದ್ದು ಆದಿ ಮಾನವನ ನೆಲೆ ಮತ್ತು ಅವನು ಬಳಸುತ್ತಿದ್ದ ಶಿಲಾಯುಧಗಳು, ಮಡಿಕೆಗಳು ಇದಾಗಿರಬಹುದೆಂದು ಇತಿಹಾಸಕಾರ ಡಾ. ಶಿವಪ್ಪ ತಿಳಿಸಿದ್ದಾರೆ.


ವಿವಿಧ ವೇತನಗಳ  ಮಂಜೂರಾತಿ ಪತ್ರ ವಿತರಣೆ


ಬಂಗಾರಪೇಟೆ: ಸಾರ್ವಜನಿಕರು ತಮ್ಮ ಕೆಲಸಗಳಿಗೆ ವಿನಾಕಾರಣ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಪಿಂಚನಿ ಅದಾಲತ್ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು ಇದನ್ನು ಅರ್ಹ ಪಲಾನುಭವಿಗಳು ಬಳಸಿಕೊಂಡು ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು. ಇಲ್ಲಿನ ರಂಗಮಂದಿರದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಪಿಂಚನಿ ಅದಾಲತ್ ಕಾರ್ಯಕ್ರಮದಲ್ಲಿ ಅರ್ಹ ಪಲಾನುಭವಿಗಳಿಗೆ ಮಂಜುರಾತಿ ಪತ್ರ ವಿತರಿಸಿ ಮಾತನಾಡಿ,  ಕ್ಷೇತ್ರದಲ್ಲಿ ಕುಡಿಯುವ ನೀರಿನ ಅಭಾವ ಬಾರದಂತೆ ತಡೆಯಲು ರು. 22.5 ಕೋಟಿ ಹಣ ಮಂಜೂರಾಗಿದ್ದು, ಹಂತ ಹಂತವಾಗಿ ನೀರಿನ ಸಮಸ್ಯೆ ನೀಗಿಸುವುದಾಗಿ ಹೇಳಿದರು.

ಖಾಸಗಿ ಶಾಲೆಗಳಿಗೆ ಮೊರೆ ಕಳವಳ: ಸಿದ್ದಿಕ್ ಪಾಷ


ಮುಳಬಾಗಲು: ಸರ್ಕಾರಿ ಶಾಲೆಗಳನ್ನು ಕಡೆಗಣಿಸಿ ಖಾಸಗಿ ಶಾಲೆಗಳತ್ತ ಪಾಲಕರು ಮುಖ ಮಾಡುತ್ತಿರುವುದು ವಿಷಾದನೀಯ ಸಂಗತಿ ಎಂದು ಡಿಸಿಆರ್ಇ ಕೋಲಾರ ಪೊಲೀಸ್ ಇನ್ಸ್ಪೆಕ್ಟರ್ ಸಿದ್ದಿಕ್ ಪಾಷ ಎಂದರು.ಪಟ್ಟಣದ ತಾತಿಪಾಳ್ಯದಲ್ಲಿ ಬುಧವಾರ ಕರ್ನಾಟಕ ಉರ್ದು ಅಕಾಡೆಮಿ ಬೆಂಗಳೂರು, ರೋಷನ್ ಎಜುಕೇಷನ್ ಮತ್ತು ಹೆಲ್ತ್ ಕೇರ್ ಟ್ರಸ್ಟ್ ಅವರ ಸಂಯುಕ್ತಾಶ್ರಯದಲ್ಲಿ ಉರ್ದು ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರ್ನಾಟಕ ಉರ್ದು ರಿಜಿಸ್ಟ್ರಾರ್ ಅಜ್ಮತ್ ಉಲ್ಲಾ ಸಾಬ್, ನರೇಂದ್ರ ಬಾಬು ಮಾತನಾಡಿದರು.
ರೋಷನ್ ಟ್ರಸ್ಟ್ ಅಧ್ಯಕ್ಷ ಎಂ. ಜಬೀಬುಲ್ಲಾ ಉತ್ತಮ ಸೇವೆ ಸಲ್ಲಿಸುತ್ತಿರುವ ಉರ್ದು ಶಾಲೆಯ ಶಿಕ್ಷಕರಿಗೆ ಸನ್ಮಾನ ಮಾಡಿದರು. ಟ್ರಸ್ಟ್ ಕಾರ್ಯದರ್ಶಿ ಕೊಲದೇವಿ ರಿಯಾಜ್ ಉರ್ದು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಿ, ಪ್ರತಿ ಮಗುವು ಶಿಕ್ಷಣ ಪಡೆಯಬೇಕು ಹಾಗೂ ಶಿಕ್ಷಣದಿಂದ ವಂಚಿತರಾಗ ಕೂಡದು ಎಂದರು.



ಹಿಂದುಳಿದ, ಅಲ್ಪಸಂಖ್ಯಾತರ
ತಾಲೂಕು ಅಧಿಕಾರಿಗೆ ಮುತ್ತಿಗೆ


ಚಿಂತಾಮಣಿ: ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದೆ ಕಾಲಹರಣ ಮಾಡುತ್ತಿರುವ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ತಾಲೂಕು ಅಧಿಕಾರಿಗೆ ಮುತ್ತಿಗೆ ಹಾಕಿ ಬೆವರಳಿಸಿದ ಪ್ರಸಂಗ ನಗರದಲ್ಲಿ ನಡೆದಿದೆ.
ಅಲೆಮಾರಿ ಜನಾಂಗದವರ ವಸತಿ ನಿರ್ಮಿಸಲು ಸರ್ಕಾರಕ್ಕೆ 131 ಅರ್ಜಿಗಳನ್ನು ಹಾಕಲಾಗಿತ್ತು. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅರ್ಜಿಗಳನ್ನು ಸೂಕ್ತ ಕಾಲಕ್ಕೆ ಜಿಲ್ಲಾ ಕಚೇರಿಗೆ ಕಳುಹಿಸದೇ ವಿಳಂಬ ದೋರಣೆ ಅನುಸರಿಸುತ್ತಿದ್ದ ಅಧಿಕಾರಿ ಕಾಜಾಗೆ ಅಲೆಮಾರಿ ಜನಾಂಗದ ನೂರಾರು ವಸತಿ ಹೀನ ಅರ್ಜಿದಾರರು ಕಚೇರಿಗೆ ನುಗ್ಗಿ ತರಾಟೆಗೆ ತೆಗೆದುಕೊಂಡರು. ನಂತರ ತಾಲೂಕು ಅಧಿಕಾರಿ ಕಾಜಾ ಅಲೆಮಾರಿ ಜನಾಂಗದ ಅರ್ಜಿದಾರರ ಕ್ಷಮೆ ಯಾಚಿಸಿ, ಕೂಡಲೇ ಅರ್ಜಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.


ಸಂಗೀತ ಕಾರ್ಯಕ್ರಮ

ಚಿಂತಾಮಣಿ ತಾಲೂಕಿನ ಶ್ರೀಕ್ಷೇತ್ರ ಕೈವಾರದ ಶ್ರೀ ಯೋಗಿನಾರೇಯಣ ಮಠದ ನಾದಸುಧಾರಸ ಸಾಂಸ್ಕೃತಿಕ ವೇದಿಕೆಯಲ್ಲಿ ಬೆಂಗಳೂರಿನ ವಿದ್ವಾನ್ ಸಾಯಿತೇಜಸ್ ಚಂದ್ರಶೇಖರ್ರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪಿಟೀಲ್ ವಿದ್ವಾನ್ ಅರ್ಜುನ್ ದಿನಕರ್, ಮೃದಂಗ ವಿದ್ವಾನ್ ಜಿ.ಎಸ್.ನಾಗರಾಜ್, ಮೋರ್ಚಿಂಗ್ ವಿದ್ವಾನ್ ಕೆ.ಕೆ. ಭಾನುಪ್ರಕಾಶ್ ಇದ್ದರು.

'ಅಕ್ಕ' ಕನ್ನಡ ಧಾರಾವಾಹಿಗೆ ಈಗ ಕೋರ್ಟಿನ ಕಡಿವಾಣ

ಇದೇ ಸೋಮವಾರ ಡಿಸೆಂಬರ್ ಎರಡರಿಂದ ರಾತ್ರಿ ಎಂಟೂವರೆಗೆ ಈಟೀವಿಯಲ್ಲಿ ಪ್ರಸಾರವಾಗಬೇಕಿದ್ದ ಅಕ್ಕ  ಕನ್ನಡ ಧಾರಾವಾಹಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಖ್ಯಾತ ಲೇಖಕಿ ಹಾಗೂ ಕಿರುತೆರೆ ನಿರ್ಮಾಪಕಿ-ನಿರ್ದೇಶಕಿ ರೇಖಾರಾಣಿ ಅವರ ಕಣ್ಮಣಿ ಎಂಬ ಕತೆಯನ್ನು ಕದ್ದು ಅಕ್ಕ ಧಾರಾವಾಹಿ ನಿರ್ಮಿಸಲಾಗಿದೆ ಎಂದು ನೀಡಲಾಗಿದ್ದ ದೂರನ್ನು ಪರಿಶೀಲಿಸಿದ ಸಿವಿಲ್ಕೋರ್ಟ್ ನಂ.10ರ ನ್ಯಾಯಾಧೀಶರು ಶುಕ್ರವಾರ ಅಕ್ಕ ಧಾರಾವಾಹಿಗೆ      ತಡೆಯಾಜ್ಞೆ ನೀಡಿದ್ದಾರೆ. ಮುಂದಿನ ವಿಚಾರಣೆ ನಡೆದು ವಿವಾದ ಇತ್ಯರ್ಥ ಆಗುವವರೆಗೆ ಧಾರಾವಾಹಿಯು ಪ್ರಸಾರವಾಗುವಂತಿಲ್ಲ ಎಂದು ಕೋರ್ಟು ಆದೇಶ ನೀಡಿದೆ. ಇದು ತಮ್ಮದೇ ಕತೆಯ ಕೃತಿಚೌರ್ಯ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಹೇಳಿಕೆ ನೀಡಿರುವ  ರೇಖಾ ರಾಣಿ ಇದಕ್ಕೆ ನೇರ ಕಾರಣ ಪ್ರಸ್ತುತ ಚಾನಲ್ನ ಧಾರಾವಾಹಿ ವಿಭಾಗದ ಮುಖ್ಯಸ್ಥರು ಎಂದು ಆರೋಪ ಹೊರಿಸಿದ್ದಾರೆ.


ಬ್ಯಾಂಕಾಕ್ನಲ್ಲಿ 'ನಿನ್ನಿಂದಲೇ' ಚಿತ್ರದ ಶೂಟಿಂಗ್ ಬ್ಯಾನ್

ಪುನೀತ್ ರಾಜ್ಕುಮಾರ್ ಅಭಿನಯದ 'ನಿನ್ನಿಂದಲೇ' ಚಿತ್ರದ ಶೂಟಿಂಗಿಗೆ ವಿಘ್ನ. ಆದರೆ ಹಾಗಂತ ಅದು ಶಾಶ್ವತ ವಿಘ್ನ ಅಲ್ಲ ಬಿಡಿ. ಅದೇನಿದ್ದರೂ ಕೇವಲ 'ಎಮರ್ಜೆನ್ಸಿ' ವಿಘ್ನ. ಬ್ಯಾಂಕಾಕ್ನಲ್ಲಿ ಚಿತ್ರದ ಚಿತ್ರೀಕರಣ ನಡೆಸಲು ನಿನ್ನಿಂದಲೇ ಚಿತ್ರತಂಡ ಯೋಜನೆ ಮಾಡಿತ್ತು. ಅದರಂತೆ ಶೂಟಿಂಗ್ ಕೂಡ ಎರಡು ದಿನದ ಹಿಂದೆ ಶುರುವಾಗಿತ್ತು. ಆದರೆ ಮೊನ್ನೆ ಇದ್ದಕ್ಕಿದ್ದಂತೆ ಬ್ಯಾಂಕಾಕ್ ನಗರದಲ್ಲಿ ರಾಜಕೀಯ ಕಾರಣಗಳಿಗಾಗಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಚಿತ್ರೀಕರಣಕ್ಕೆ ಯಾವ ತೊಂದರೆ ಇಲ್ಲದಿದ್ದರೂ ಸಾರ್ವಜನಿಕ ಸಭೆಗಳು, ಮೆರವಣಿಗೆಗಳ ಕಾರಣ ಚಿತ್ರೀಕರಣ ನಡೆಸುವುದು ಸುಲಭವಾಗಿರಲಿಲ್ಲ. ಈ ಕಾರಣಕ್ಕಾಗಿ ನಿನ್ನಿಂದಲೇ ಚಿತ್ರತಂಡ ಎರಡು ದಿನಗಳ ಕಾಲ ಶೂಟಿಂಗ್ ನಿಲ್ಲಿಸಬೇಕಾಗಿತ್ತು. ಅದರಂತೆ ಎರಡು ದಿನಗಳ ಬ್ರೇಕ್ನ ನಂತರ ಈಗ ಮತ್ತೆ ನಿನ್ನಿಂದಲೇ ಶುರುವಾಗಿದೆ.


ಅವರು ಹೇಳಿದ್ದು
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಲು ಬಿಎಸ್ವೈ ಶಕ್ತಿ ಬೇಕು. ಶೀಘ್ರವೇ ಕೇಂದ್ರದ ವರಿಷ್ಠರು ಅವರನ್ನು ಬಿಜೆಪಿ ಸೇರಿಸಿಕೊಳ್ಳುತ್ತಾರೆ. ಅವರು ಕೂಡ ಪಕ್ಷಕ್ಕೆ ಮರಳುವ ಸೂಚನೆ ನೀಡಿದ್ದಾರೆ.
ಟಿ  ಕೆ.ಎಸ್. ಈಶ್ವರಪ್ಪಮಾಜಿ ಡಿಸಿಎಂ


ಒಳಮರ್ಮ

ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ವೈ ಇಲ್ಲದೆ ನನಗೂ ಗೆಲ್ಲಲಾಗಿಲ್ಲ. ಲೋಕಸಭೆ ಚುನಾವಣೆಯಲ್ಲೂ ಅದೇ ಪರಿಸ್ಥಿತಿ ಮರುಕಳಿಸದಿರಲೆಂದು ಮುನ್ನೆಚ್ಚರಿಕೆ ವಹಿಸುತ್ತಿದ್ದೇವೆ ಎಂದು ಹೇಳಿದಂತಿದೆ!

ಪ್ರಧಾನ ಸಂಪಾದಕರಿಗೆ ಟ್ವೀಟ್ ಮಾಡಿ
@VishweshwarBhat


ನಮ್ಮ ಕಚೇರಿ ವಿಳಾಸ

ಮನೆ ನಂ.1456, 'ಶ್ರೀನಿವಾಸ' 4ನೇ ಕ್ರಾಸ್,  ಪಿ.ಸಿ. ಬಡಾವಣೆ, ಕೋಲಾರ-563101 ಮೊ: 99869-32985, 08152- 401635

ಓದುಗರಲ್ಲಿ ಮನವಿ
ನೀವು ಕನ್ನಡಪ್ರಭ ಪತ್ರಿಕೆಗೆ ಚಂದಾದಾರರಾಗಬೇಕೆ? ಸಂಪರ್ಕಿಸಿ ದೂರವಾಣಿ
9483515456

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement