ಪಠ್ಯೇತರ ಸ್ಪರ್ಧೆಗಳಿಗೆ ಶಿಕ್ಷಕರ ಸಂಖ್ಯೆ ಇಳಿಕೆಗೆ ಅಸಮಾಧಾನ
ಕ.ಪ್ರ.ವಾರ್ತೆ ಕೋಲಾರ ನ.30
ಶಾಲಾ ಶಿಕ್ಷಕರಿಗೆ ಭೋದನೆಯ ಜತೆಗೆ ಪಠ್ಯೇತರ ಚಟುವಟಿಕೆಗಳು ಅಗತ್ಯವೆಂಬ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಸಹಪಠ್ಯ ಚಟುವಟಿಕೆಗಳ ಕಾರ್ಯಕ್ರಮಕ್ಕೆ ಶಿಕ್ಷಕರ ಹಾಜರಾತಿ ಅತ್ಯಂತ ವಿರಳವಾಗಿದ್ದರಿಂದ ಕಾರ್ಯಕ್ರಮ ಕಳೆಗುಂದಿತು.
ಕೋಲಾರ ತಾಲೂಕಿನಲ್ಲಿ ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳ 1380 ಶಿಕ್ಷಕ ಶಿಕ್ಷಕಿಯರಿದ್ದು ಸ್ಪರ್ಧೆಗಳಿಗೆ ಕೇವಲ 18 ಮಂದಿ ಮಾತ್ರ ಭಾಗವಹಿಸಿದ್ದರು. ಸ್ಪರ್ಧಿಗಳು, ತೀರ್ಪುಗಾರರು ಸೇರಿದಂತೆ ಕಾರ್ಯಕ್ರಮದಲ್ಲಿ ಕೇವಲ 39 ಮಂದಿ ಹಾಜರಿದುದ್ದನ್ನು ಗಮನಿಸಿದ ಮುಖ್ಯ ಅತಿಥಿ ಹಾಗೂ ಕಾರ್ಯಕ್ರಮದ ಉದ್ಘಾಟಕರಾಗಿದ್ದ ಕೋಲಾರ ನಗರದ ನೂತನ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ರುದ್ರಪ್ಪ ಅಸಮಾಧಾನ ವ್ಯಕ್ತಪಡಿಸಿ ಇಂತಹ ಕಾರ್ಯಕ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಬರುವಂತಾಗಬೇಕೆಂದರು.
ಸರ್ಕಾರ ಈ ಕಾರ್ಯಕ್ರಮಕ್ಕೆ ಅಗತ್ಯ ಸಂಪನ್ಮೂಲ ಒದಗಿಸಿದೆ. ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಆಯೋಜಿಸಬೇಕಾಗಿತ್ತು ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇನ್ನಿತರ ಮುಖ್ಯ ಅತಿಥಿಗಳ ಅಭಿಪ್ರಾಯವೂ ಆಗಿತ್ತು.
ನಳಂದ ವಿದ್ಯಾಲಯದ ಪ್ರಾಂಶುಪಾಲ ಹನುಮಪ್ಪ ಮಾತನಾಡಿ ಶಿಕ್ಷಕರಿಗೆ ಹೆಚ್ಚಿನ ಪ್ರಯೋಜನಕಾರಿಯಾದ ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯುವಂತಾಗಬೇಕು, ಪ್ರತಿಯೊಬ್ಬ ಶಿಕ್ಷಕರು ಆಸಕ್ತ ಕಲೆಗಳನ್ನು ಅಳವಡಿಸಿಕೊಂಡು ಅದನ್ನು ಪಾಠದೊಂದಿಗೆ ತೆಗೆದುಕೊಂಡು ಹೋದಾಗ ಮಾತ್ರ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿ ಪಾಠ-ಪ್ರವಚನ ಮಾಡಲು ಸಾಧ್ಯವೆಂದರು.
ಶಿಕ್ಷಣ ಸಂಯೋಜಕ ಹಾಗೂ ಪಠ್ಯೇತರ ಚಟುವಟಿಕೆಗಳ ನೋಡೆಲ್ ಅಧಿಕಾರಿ ರಾಮಚಂದ್ರಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ವಿಷಯ ಪರೀಕ್ಷಕರಾದ ಬಾಬು ಜನಾರ್ದನ ನಾಯ್ಡು, ಮಲ್ಲಿಕಾರ್ಜುನಾಚಾರಿ, ಇಸಿಓ ರಜನಿ, ಶಿಕ್ಷಕರ ಸಂಘದ ಪ್ರತಿನಿಧಿಗಳಾದ ನಾಗರಾಜ್, ವೆಂಕಟಶಿವಪ್ಪ, ನಂಜುಂಡೇಗೌಡ, ಮುಖ್ಯ ಶಿಕ್ಷಕ ರಾಮಚಂದ್ರಪ್ಪ, ನಳಂದ ವಿದ್ಯಾಲಯದ ಕಾರ್ಯದರ್ಶಿ ಪ್ರವೀಣ್ ರಾಜು ಇದ್ದರು. ರಾಮಪ್ರಸಾದ್ ನಿರೂಪಿಸಿ, ಶಿಕ್ಷಕ ನಾರಾಯಣಪ್ಪ ಸ್ವಾಗತಿಸಿ, ಗೋಪಾಲಕೃಷ್ಣ ವಂದಿಸಿದರು.
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದವರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ಶಿಕ್ಷಕರು ಜಿಲ್ಲಾ ಮಟ್ಟದ ಸ್ಪರ್ಧೆಗಳಿಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಆಶುಭಾಷಣ ಸ್ಪರ್ಧೆ- ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸಿ.ಎಲ್. ಶ್ರೀನಿವಾಸಲು, ಗಾಯನ ಸ್ವರ್ಧೆ-ವೇಮಗಲ್ ಸರ್ಕಾರಿ ಪಿಯು ಕಾಲೇಜಿನ ಬಿ. ಎಲಿಜೆಬತ್, ಪ್ರಬಂಧ ಸ್ಪರ್ಧೆ-ರಾಜಕಲ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸಿ. ಪದ್ಮಾವತಿ, ಚಿತ್ರಕಲೆ- ಬಾಲಕರ ಪಿಯು ಕಾಲೇಜಿನ ಕೆ.ವಿ. ಕಾಳಿದಾಸ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ಗಾಯನ ಸ್ಪರ್ಧೆ-ತೊಟ್ಲಿ ಶಾಲೆಯ ಆರ್.ಸುಗುಣಾ, ಆಶುಭಾಷಣ ಸ್ಪರ್ಧೆ- ಗಾಂಧಿನಗರ ಶಾಲೆಯ ಕೆ.ವಿ.ಪರಮೇಶ್, ಪ್ರಬಂಧ ಸ್ಪರ್ಧೆ- ಸೋಮೇನಹಳ್ಳಿ ಶಾಲೆಯ ಸವಿತ, ಕಲಿಕೋಪಕರಣ ತಯಾರಿಕೆ ಸ್ಪರ್ಧೆ- ಯಳಚಿಪುರ ಶಾಲೆಯ ಜಗನ್ನಾಥ್, ಚಿತ್ರಕಲೆ-ಹಳೆ ಮಾಧ್ಯಮಿಕ ಶಾಲೆಯ ಆಜಿರಾ ಭಾನು ಆಯ್ಕೆಯಾಗಿದ್ದಾರೆ.