ಮುಸುಕುಧಾರಿಗಳಿಂದ ದರೋಡೆ
ಕೆಜಿಎಫ್: ಮಧ್ಯರಾತ್ರಿ ಮನೆ ಬಾಗಿಲನ್ನು ಮುರಿದು ಒಳ ಪ್ರವೇಶಿಸಿದ 6 ಮಂದಿ ಮುಸುಕುದಾರರು ಮನೆಯಲ್ಲಿದ್ದವರನ್ನು ಬೆದರಿಸಿ ಬೀರುವಿನಲ್ಲಿಟ್ಟಿದ್ದ ಲಕ್ಷಾಂತರ ನಗದು ಸೇರಿದಂತೆ ಸುಮಾರು 25 ಲಕ್ಷಕ್ಕೂ ಹೆಚ್ಚು ಚಿನ್ನ ಮತ್ತು ಬೆಳ್ಳಿ ಒಡವೆಗಳನ್ನು ದೋಚಿಕೊಂಡು ಹೋಗಿರುವ ಘಟನೆ ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೇತಮಂಗಲ ಗ್ರಾಮದ ಎ.ಡಿ.ಕಾಲೋನಿ ನಿವಾಸಿ ಗಂಟ್ಲಾರೆಡ್ಡಿ ಎಂಬುವರು ಎಟಿಬಿ ಇಟ್ಟಿಗೆ ಕಾರ್ಖಾನೆಯ ಮಾಲೀಕರಾಗಿದ್ದು ಇವರು ತಮ್ಮ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಊಟ ಮಾಡಿ ಮಲಗಿಕೊಂಡಿದ್ದು ಮಧ್ಯ ರಾತ್ರಿ ಮನೆಯ ಬಾಗಿಲು ಮುಂದೆ ಅಳವಡಿಸಿದ್ದ ಗ್ರಿಲ್ನ ಬೀಗ ಮತ್ತು ಬಾಗಲಿಗೆ ಹಾಕಿದ್ದ ಡೋರ್ಲಾಕ್ ಮುರಿದು ಒಳ ಪ್ರವೇಶಿಸಿದ 6 ಮಂದಿ ಮುಸುಕುಧಾರಿಗಳು (ದರೋಡೆಕೋರರು) ಮನೆಯಲ್ಲಿ ಮಲಗಿದ್ದವರನ್ನು ರಾಡ್, ಚಾಕು ಹಾಗೂ ಇತರೆ ಆಯುಧಗಳನ್ನು ತೋರಿಸಿ ಕಿರುಚಿಕೊಂಡರೆ ನಿಮೆಲ್ಲರನ್ನು ಸಾಯಿಸಿಬಿಡುವುದಾಗಿ ಬೆದರಿಸಿ ಮನೆಯಲ್ಲಿದ್ದ ಬೀರುವಿನ ಲಾಕರ್ನಲ್ಲಿಟ್ಟಿದ್ದ 3.20 ಲಕ್ಷ ನಗದು, ಸುಮಾರು 750 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ 6 ಕೆಜಿ ಬೆಳ್ಳಿ ಆಭರಣಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾರೆ.
6 ಮಂದಿ ದರೋಡೆಕೋರರ ಪೈಕಿ 5 ಮಂದಿ ಮುಖಕ್ಕೆ ಮಂಕಿ ಟೋಪಿಯನ್ನು ದರಿಸಿದ್ದು ಮತ್ತೊಬ್ಬನು ಟವಲ್ನಿಂದ ಮುಖಕ್ಕೆ ಸುತ್ತಿಕೊಂಡಿದ್ದು ಎಲ್ಲರು ತೆಲುಗು ಭಾಷೆಯನ್ನು ಮಾತನಾಡುತ್ತಿದ್ದರು ಎಂದು ತಿಳಿಸಲಾಗಿದೆ. ಮನೆಯ ಮಾಲೀಕ ಗಂಟ್ಲಾರೆಡ್ಡಿ ಅವರು ಕೂಡಲೇ ಪೊಲೀಸ್ ಕಂಟ್ರೋಲ್ ರೂಂ 100ಕ್ಕೆ ಕರೆ ಮಾಡಿ ನಡೆದ ಘಟನೆಯ ಬಗ್ಗೆ ವಿಷಯ ತಿಳಿಸಿದ್ದು ಕೂಡಲೇ ಬೇತಮಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ದೂರು ದಾಖಲಿಸಿಕೊಂಡಿದ್ದಾರೆ.
ಅದೇ ರೀತಿ ಕೆಜಿಎಫ್ ಎಸ್ಪಿ ಡಾ. ರೋಹಿಣಿಕಟೋಚ್ ಸೆಫಟ್, ಡಿವೈಎಸ್ಪಿ ಹೆಚ್.ಪಿ. ರಾಜಣ್ಣ, ವೃತ್ತನಿರೀಕ್ಷಕ ವೆಂಕಟಾಚಲಪತಿ, ಲಕ್ಷ್ಮೀನಾರಾಯಣ, ಪಿಎಸ್ಐ ಸುರೇಶ್, ಶ್ವಾನದಳ ಸಿಬ್ಬಂದಿ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ತನಿಖೆಯನ್ನು ಕರೈಗೊಂಡಿದ್ದಾರೆ.
ಘಟನೆಯಿಂದ ಬೆಚ್ಚಿಬಿದ್ದ ಗ್ರಾಮಸ್ಥರು: ಪೊಲೀಸ್ ಠಾಣಾ ಸಮೀಪವೇ ಇಂತಹ ದರೋಡೆ ಪ್ರಕರಣ ನಡೆದಿರುವ ಸುದ್ದಿ ಮುಂಜಾನೆ ಬೇತಮಂಗಲ ಗ್ರಾಮದಲ್ಲಿ ಹರಡುತ್ತಿದ್ದಂತೆ ವಿಷಯ ತಿಳಿದು ಗ್ರಾಮಸ್ಥರು ಬೆಚ್ಚಿಬಿದ್ದು ಭೀತಿಗೊಂಡಿದ್ದಾರೆ. ಮಧ್ಯ ರಾತ್ರಿ ದರೋಡೆಕೋರರು ಮನೆಗಳಿಗೆ ನುಗ್ಗಿ ಮನೆಯಲ್ಲಿದ್ದ ಬೆಲೆ ಬಾಳುವ ವಸ್ಥುಗಳನ್ನು ದೋಚಿಕೊಂಡು ಹೋಗಲು ಮುಂದಾಗುತ್ತಿದ್ದಾರೆ ಈ ಸಂದರ್ಭದಲ್ಲಿ ಮನೆಯಲಿದ್ದವರು ಕಿರುಚಿಕೊಂಡಾಗ ಮತ್ತು ವಿರೋಧಿಸಿದಾಗ ಅಂತಹವರನ್ನು ಹತ್ಯೆ ಮಾಡಲು ಹಿಂಜಿರಿಯುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರಿಂದ ತಪ್ಪಿಸಿಕೊಳ್ಳಲು ಯಾವುದೇ ಕ್ರಮಕ್ಕೆ ಮುಂದಾಗದೆ ಅಸಹಾಯಕರಾಗಬೇಕಿಗಿದೆ. ಇಂತಹ ದರೋಡೆ ಪ್ರಕರಣಗಳನ್ನು ಮತ್ತು ಮನೆಗಳ್ಳತನ ಪ್ರಕರಣಗಳನ್ನು ತಡೆಯಲು ಮತ್ತು ಕಳ್ಳರನ್ನು ಬಂಧಿಸಲು ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಬೇತಮಂದಲ ಗ್ರಾಮಸ್ಥರಲ್ಲಿ ಕೇಳಿಬರುತ್ತಿದೆ.