ಶಂಕರಪ್ಪ-ಗೋವಿಂದಗೌಡರ ನಡುವೆ ಸಮರ
ಕ.ಪ್ರ.ವಾರ್ತೆ ಕೋಲಾರ ನ.30
ರಾಜ್ಯ ಹೈಕೋರ್ಟ್ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯ ಮತ ಎಣಿಕೆಗೆ ತಡೆಯಾಜ್ಞೆ ನೀಡಿದ್ದರೂ ಯಾವುದೇ ಅಳುಕಿಲ್ಲದೆ ಆಡಳಿತಾರೂಢ ಕಾಂಗ್ರೆಸ್ ಅಭ್ಯರ್ಥಿ ಬ್ಯಾಲಹಳ್ಳಿ ಎಂ. ಗೋವಿಂದಗೌಡ ಹಾಗೂ ಜೆಡಿಎಸ್ ಪಕ್ಷದ ಕೆ.ವಿ. ಶಂಕರಪ್ಪ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿ ಚುನಾವಣೆ ಎದುರಿಸಿದರು.
ಶನಿವಾರ ಮಧ್ಯಾಹ್ನ ಚುನಾವಣೆ ನಿಗಧಿಯಾಗಿತ್ತು. ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಬ್ಯಾಲಹಳ್ಳಿ ಗೋವಿಂದಗೌಡ, ನೀಲಕಂಠೇಗೌಡ ಹಾಗೂ ಜೆಡಿಎಸ್ನಿಂದ ಹಿರಿಯ ವಕೀಲ ಕೆ.ವಿ. ಶಂಕರಪ್ಪ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ಸಿನಿಂದ ಜೆಡಿಎಸ್ಗೆ ಹಾರಿದ್ದ ಕೆ.ವಿ. ನಾಗರಾಜು ಮತ್ತು ಸರ್ಕಾರದಿಂದ ಡಿಸಿಸಿ ಬ್ಯಾಂಕಿಗೆ ನಾಮಕರಣಗೊಂಡಿರುವ ಹನುಮಂತೇಗೌಡ ಉಮೇದುವಾರಿಕೆ ಸಲ್ಲಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಇಬ್ಬರು ಕಣದಲ್ಲಿ ಉಳಿದರೆ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನೀಲಕಂಠೇಗೌಡ ಕಾಂಗ್ರೆಸ್ ಮುಖಂಡರ ಮಾತಿಗೆ ಮಣಿದು ನಾಮಪತ್ರ ಹಿಂದಕ್ಕೆ ಪಡೆದು ಜೆಡಿಎಸ್ಗೆ ರಾಜಿನಾಮೆ ನೀಡಿ ಕಾಂಗ್ರೆಸ್ ಸೇರಿದ ಬ್ಯಾಲಹಳ್ಳಿ ಗೋವಿಂದಗೌಡರಿಗೆ ಬೆಂಬಲ ಸೂಚಿಸಿದರು. ಡಿಸಿಸಿ ಬ್ಯಾಂಕಿನಲ್ಲಿ ನಡೆದ ಮತದಾನದಲ್ಲಿ 15 ಮಂದಿ ಚುನಾಯಿತ ನಿರ್ದೇಶಕರು ಹಾಗೂ ಸರ್ಕಾರದ ಮೂವರು ನಾಮ ನಿರ್ದೇಶಕರು ಪಾಲ್ಗೊಂಡಿದ್ದರು. ಕೋಲಾರ ಉಪ ವಿಭಾಗಾಧಿಕಾರಿ ಮಂಜುನಾಥ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಸರ್ಕಾರದ ಮೂವರು ನಾಮ ನಿರ್ದೇಶಕರಿಗೆ ಮತದಾನದ ಹಕ್ಕು ನೀಡದಂತೆ ಜೆಡಿಎಸ್ನ ನಾಗನಾಳ ಸೋಮಣ್ಣ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದ ಹಿನ್ನಲೆಯಲ್ಲಿ ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಿ.ಎಸ್. ಪಾಟೀಲ್ ಅವರು ನ.30ರಂದು ಚುನಾವಣೆ ನಡೆಸಬಹುದು ಆದರೆ, ಸರ್ಕಾರದಿಂದ ನಾಮಕರಣಗೊಂಡಿರುವ ಮೂವರು ನಿರ್ದೇಶಕರ ಮತಗಳನ್ನು ಪ್ರತ್ಯೇಕ ಮತಪಟ್ಟಿಗೆಯಲ್ಲಿ ಹಾಕಿಸಬೇಕು. ಉಳಿದ 15 ಮತಗಳನ್ನು ಮತ್ತೊಂದು ಪೆಟ್ಟಿಗೆಯಲ್ಲಿ ಹಾಕಿಸಿ ಭದ್ರಪಡಿಸಬೇಕು. ಚುನಾವಣೆ ಬಳಿಕ ಮತ ಎಣಿಕೆ ಮಾಡದಂತೆ ಆದೇಶ ನೀಡಿದ್ದರು.
ಹೈಕೋರ್ಟಿನ ಆದೇಶದಂತೆಯೇ ಶನಿವಾರ ಚುನಾವಣೆ ನಡೆಸಲಾಗಿದೆ. ಡಿ.4 ರಂದು ಹೈಕೋರ್ಟಿನ ಮುಂದೆ ಪ್ರಕರಣ ವಿಚಾರಣೆಗೆ ಬರಲಿದ್ದು ಅಂದು ಮತ ಎಣಿಕೆಗೆ ಯಾವ ಆದೇಶ ನೀಡುತ್ತಾರೋ ಕಾದು ನೋಡಬೇಕಾಗಿದೆ. ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ರೋಚಕ ಘಟ್ಟ ತಲುಪಿದ್ದು ಮತ ಎಣಿಕೆಗೆ ತಡೆಯಾಜ್ಞೆ ನೀಡಿರುವುದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿಗರಲ್ಲಿ ಕುತೂಹಲದ ಜೊತೆಗೆ ತಳಮಳ ಉಂಟಾಗಿದೆ.