ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಲಬೆರಕೆ ಆಹಾರ: 8 ವಿದ್ಯಾರ್ಥಿನಿಯರು ಅಸ್ವಸ್ಥ

Rashmi Kasaragodu
Updated On : 2 Oct 2013, 1:55 am

ಕನ್ನಡಪ್ರಭ ವಾರ್ತೆ, ಕೋಲಾರ, ಅ.1
ಸರ್ಕಾರಿ ಹಾಸ್ಟೆಲ್‌ಗಳಲ್ಲಿನ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ಅನೇಕ ವರ್ಷಗಳಿಂದ ಹತ್ತಾರು ಪ್ರತಿಭಟನೆಗಳು ನಡೆಯುತ್ತಿದ್ದರೂ ಬಡ ಮಕ್ಕಳ ಸಂಕಷ್ಟ ನಿವಾರಣೆ ಆಗುತ್ತಿಲ್ಲ.
ನಗರದ ಇಟಿಸಿಎಂ ಆಸ್ಪತ್ರೆಯ ಮುಂಭಾಗದಲ್ಲಿನ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿ ಮೂಲ ಸೌಕರ್ಯ ಹಾಗೂ ಗುಣಮಟ್ಟದ ಆಹಾರ ಸಮಸ್ಯೆಯಿಂದಾಗಿ ಅನೇಕ ಸಾರಿ ವಿದ್ಯಾರ್ಥಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದಿದ್ದರೂ ಬದಲಾವಣೆ ತರಲು ಸಾಧ್ಯವಾಗಿಲ್ಲ.
ಮಕ್ಕಳಿಗೆ ಸ್ನಾನಕ್ಕಾಗಿ ಬಿಸಿ ನೀರು ಒದಗಿಸಲು ಅಳವಡಿಸಲಾಗಿದ್ದ ಸೋಲಾರ್ ಉಪಕರಣ ಮಂಗ ಮಾಯವಾಗಿದೆ. ಶುದ್ಧವಾದ ನೀರು ಪೂರೈಕೆ ಇಲ್ಲದೆ ಮಕ್ಕಳು ಕಲುಷಿತ ನೀರು ಸೇವನೆ ಮಾಡಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಸರ್ಕಾರ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದ್ದರೂ ಬಡ ಮಕ್ಕಳ ಗೋಳು ತಪ್ಪಿಲ್ಲ.
ಈ ಹಾಸ್ಟೆಲ್‌ನಲ್ಲಿ ಕೋಲಾರ ಜಿಲ್ಲೆಯವರು ಮಾತ್ರವಲ್ಲದೆ ಆಂಧ್ರ ಪ್ರದೇಶದ ಮಕ್ಕಳು ಇದ್ದಾರೆ. ಬಹುತೇಕರು ಕೂಲಿ ಕಾರ್ಮಿಕರ ಮಕ್ಕಳೇ ಆಗಿದ್ದಾರೆ.
ಹಾಸ್ಟೆಲ್‌ನಲ್ಲಿ ನಡೆದದ್ದೇನು?: ಕಳೆದ ರಾತ್ರಿ ಪ್ರೌಢಶಾಲೆಯಲ್ಲಿ ಓದುತ್ತಿರುವ 8 ಮಕ್ಕಳು ಟೋಮೆಟೋ ಬಾತ್ ಸೇವನೆ ಮಾಡಿದ್ದರು. ಊಟ ಸರಿ ಇಲ್ಲಲಿಲ್ಲವೆಂಬ ಕಾರಣಕ್ಕೆ ಮೆಟ್ರಿಕ್ ನಂತರದ ಹಾಸ್ಟೆಲ್‌ಗೆ ಹೋಗಿ ಅಲ್ಲಿ ಚಿತ್ರಾಹ್ನ ತಿಂದಿದ್ದರು.
ಮಂಗಳವಾರ ಬೆಳಿಗ್ಗೆ ಮತ್ತೆ ಅಡುಗೆಯವರು ನೀಡಿದ ಟೋಮೆಟೋ ಬಾತ್ ಸೇವಿಸಿದ್ದ 8 ಮಕ್ಕಳು ವಾಂತಿ ಮಾಡಿಕೊಂಡು ಅಸ್ವಸ್ಥರಾದರು.
ತಕ್ಷಣ ಮೆಟ್ರಿಕ್ ನಂತರದ ಹಾಸ್ಟೆಲ್‌ನಲ್ಲಿದ್ದ ಎಬಿವಿಪಿಯ ಕಾರ್ಯಕರ್ತೆಯೊಬ್ಬರ ವಿಷಯ ತಿಳಿದು ತಮ್ಮ ಮುಖಂಡರನ್ನು ಕರೆಸಿಕೊಂಡು ಅಡುಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ವಾರ್ಡನ್ ಕರೆಸಿಕೊಳ್ಳುವುದಕ್ಕೆ ವಿಫಲರಾಗಿ ಕಡೆಗೆ ತಾವೇ ಸಮೀಪದ ಜಿಲ್ಲಾ ಆಸ್ಪತ್ರೆಗೆ ಮಕ್ಕಳನ್ನು ಸೇರಿಸಿ ಚಿಕಿತ್ಸೆ ಕಲ್ಪಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ನಾಗರಾಜ್  ಮಕ್ಕಳ ಸ್ಥಿತಿ ಗಮನಿಸಿ ಬೇಸರ ವ್ಯಕ್ತಪಡಿಸಿದರಲ್ಲದೆ, ವಾರ್ಡನ್‌ಗೆ ದೂರವಾಣಿ ಮುಖೇನ ಮಾತನಾಡಿ, ತರಾಟೆಗೆ ತೆಗೆದುಕೊಂಡರು.
ವಾಂತಿಯಿಂದ ಬಳಲಿದ್ದ ಮಕ್ಕಳಿಗೆ ತಹಸೀಲ್ದಾರ್ ನಾಗರಾಜ್ ತಮ್ಮ ಸ್ವಂತ ಹಣದಲ್ಲಿ ತಿಂಡಿ ವ್ಯವಸ್ಥೆ ಮಾಡಿದರಲ್ಲದೆ, ವೈದ್ಯರನ್ನು ಭೇಟಿ ನೀಡಿ ಉತ್ತಮ ಚಿಕಿತ್ಸೆ ನೀಡುವಂತೆ ಮನವಿ ಮಾಡಿದರು. ಪ್ರತಿದಿನ ಒಂದಲ್ಲ ಒಂದು ಸಮಸ್ಯೆಯಿಂದ ವಿದ್ಯಾರ್ಥಿಗಳು ನರಳುತ್ತಿದ್ದಾರೆಂದು ಎಬಿವಿಪಿ ಮುಖಂಡರು ಆರೋಪಿಸಿದರು. ಅಡುಗೆಯವರು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಸ್ವಚ್ಛತೆ ಇಲ್ಲವೇ ಇಲ್ಲ, ಕುಡಿಯಲು ಶುದ್ಧವಾದ ನೀರು ಒದಗಿಸಿಲ್ಲ ಎಂದು ಆರೋಪಗಳ ಸುರಿಮಳೆಗರೆದರು.
ವಾರ್ಡನ್ ಭರವಸೆ: ಆಸ್ಪತ್ರೆಗೆ ಬಂದ ವಾರ್ಡನ್ ವಿರುದ್ಧ ಮುಖಂಡರು ಕೆಂಡಕಾರಿದರು. ಇನ್ನು ಮುಂದೆ ಈ ರೀತಿಯ ತಪ್ಪು ಆಗುವುದಿಲ್ಲವೆಂದು ವಾರ್ಡನ್ ಭರವಸೆ ನೀಡಿದರು. ತಕ್ಷಣ ಹಾಸ್ಟೆಲ್‌ಗೆ ಮಿನರಲ್ ವಾಟರ್ ವ್ಯವಸ್ಥೆ ಮಾಡಿಸಿದರಲ್ಲದೆ, ಗುಣಮುಖರಾಗಿದ್ದ 8 ವಿದ್ಯಾರ್ಥಿನಿಯರನ್ನು ತಮ್ಮ ಜೊತೆ ಹಾಸ್ಟಲಲ್ಗೆ ಕರೆತಂದು ಆರೈಕೆ ಮಾಡಲಾರಂಭಿಸಿದರು.
ಜೊತೆಗೆ ಬಂದಿದ್ದ ಎಬಿವಿಪಿ ಮುಖಂಡರು,ಹಾಸ್ಟೆಲಲ್ನಲ್ಲಿ ಇನ್ನು ಮುಂದೆ ಸಮಸ್ಯೆಗಳು ಕಾಣಿಸಿದಲ್ಲಿ, ವಿದ್ಯಾರ್ಥಿನಿಯರು ದೂರು ನೀಡಿದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಗುಣಮುಖರಾದ ವಿದ್ಯಾರ್ಥಿನಿಯರಾದ 6ನೇ ತರಗತಿಯ ಆಂಧ್ರ ಪ್ರದೇಶದ ಪ್ರೋದಟೂರಿನ ಮೌನಿಕ, 10ನೇ ತರಗತಿಯ ಚಿತ್ತೂರು ಜಿಲ್ಲೆಯ ಪರಮನೇರು ಊರಿನ ಮಮತ, ಮುಳಬಾಗಿಲು ತಾಲೂಕಿನ ಕುರುಬರಹಳ್ಳಿಯ 10ನೇ ತರಗತಿಯ ಸುಮ, 8ನೇ ತರಗತಿಯ ಶ್ರೀನಿವಾಸಪುರ ತಾಲೂಕಿನ ಕೃಪಾ, 10ನೇ ತರಗತಿಯ ಚಿಂತಾಮಣಿ ತಾಲೂಕಿನ ಅಮೃತ, ತಮಿಳುನಾಡನ ಬೈರಿಕೆಯ ಸಹನ, ಕೋಲಾರ ತಾಲೂಕಿನ ಪಾರ್ವತಿ, ಹೊಸಕೋಟೆಯ ಸ್ವಾತಿ ಅವರುಗಳು ಹಾಸ್ಟೆಲ್‌ನಲ್ಲಿ ನಮಗೆ ಗುಣಮಟ್ಟದ ಆಹಾರ ನೀಡುತ್ತಿಲ್ಲ, ನಮ್ಮ ಊರುಗಳಲ್ಲಿ ಶಾಲೆಗಳು ಸರಿಯಾಗಿ ಇಲ್ಲದಿರುವುದರಿಂದ ನಾವಿಲ್ಲಗೆ ಬಂದಿದ್ದು, ವಾರ್ಡನ್ ಮತ್ತು ಅಡುಗೆ ಸಿಬ್ಬಂದಿ ಅಸಹಕಾರ ಹೆಚ್ಚಾಗಿದೆ ಎಂದರು.
ಮಕ್ಕಳ ಆರೋಪ ನಿರಾಕರಿಸಿರುವ ವಾರ್ಡನ್ ಮಂಜುಳಾ ಅವರು, ತಮ್ಮನ್ನು ಹಾಸ್ಟೆಲ್‌ನಿಂದ ಹೊರ ಹಾಕಲು ಕಾಣದ ಕೈಗಳು ಪ್ರಯತ್ನಿಸುತ್ತಿವೆ. ಮಕ್ಕಳಿಗೆ ಸಣ್ಣ ಪುಟ್ಟ ಸಮಸ್ಯೆಗಳು ಇರಬಹುದು. ಕಲಬೆರಕೆ ಆಹಾರ ನೀಡುವಷ್ಟು ಕೆಟ್ಟವರು ಇಲ್ಲಿ ಯಾರು ಇಲ್ಲ. ಸಮಸ್ಯೆ ಏನಾದರೂ ಇದ್ದರೆ ನನ್ನ ಬಳಿ ಹೇಳಿ ಪರಿಹಾರ ಕಂಡುಕೊಳ್ಳುವ ಬದಲು ಸಮಸ್ಯೆ ಹೆಚ್ಚು ಮಾಡುತ್ತಿದ್ದಾರೆಂದು ವಿದ್ಯಾರ್ಥಿಗಳ ವಿರುದ್ಧ ಹರಿಹಾಯ್ದರು.
ಹಾಸ್ಟೆಲ್‌ನಲ್ಲಿ 28ಕ್ಕೂ ಹೆಚ್ಚು ಮಕ್ಕಳು ಇದ್ದಾರೆ. ಅವರಿಗೆ ಏನೂ ಆಗಿಲ್ಲ. ಈ ಮಕ್ಕಳು ಮಾತ್ರ ವಾಂತಿ ಮಾಡಿಕೊಂಡಿದ್ದಾರೆ. ಇನ್ನು ಮುಂದೆ ಎಚ್ಚರಿಕೆ ವಹಿಸಿ ಮಕ್ಕಳಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇನೆಂದು ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement