ಮನೆಗೆಲಸ ಮಾಡದ ತಪ್ಪಿಗೆ ಬರೆ
ಬಾಗೇಪಲ್ಲಿ: ಮನೆ ಕೆಲಸ ಸರಿಯಾಗಿ ಮಾಡಲಿಲ್ಲ ಎಂಬ ಕಾರಣಕ್ಕೆ 10 ವರ್ಷದ ಬಾಲಕಿಯೊಬ್ಬಳ ಎರಡೂ ಕೈಗಳಿಗೆ ಬರೆ ಹಾಕಿರುವ ಘಟನೆ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ನಡೆದಿದೆ.
ತಂದೆ ತಾಯಿ ಇಲ್ಲದ ಬಾಲಕಿ ಸುರೇಖಾ ಅಕ್ಕ-ಭಾವ ಜೊತೆಯಲ್ಲಿ ವಾಸವಾಗಿದ್ದಳು. ಅಕ್ಕ ಸುರೇಖಾಲ ಶಾಲೆ ಬಿಡಿಸಿ ಮನೆಯಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದಳು. ದಿನ ನಿತ್ಯ ಹೊಡೆಯುವುದು, ಬಡೆಯುವುದು ಸಾಮಾನ್ಯವಾಗಿತ್ತು ಎನ್ನಲಾಗಿದೆ.
ಮನೆಯಲ್ಲಿ ಕಸ ಹೊಡೆಯಲ್ಲಿಲ್ಲ ಎಂಬ ನೆಪ ಹೇಳಿ ಅಕ್ಕ ಚಾಕು ಕಾಯಿಸಿ ಕೈಗಳನ್ನು ಸುಟ್ಟಿದ್ದಾಳೆ. ಈ ವಿಷಯವನ್ನು ಸಮೀಪದ ಮನೆಯವರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎ.ಜಿ. ಸುಧಾಕರ್‌ರವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅವರು ಕೌಟುಂಬಿಕ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಗಂಗಮ್ಮ, ವೀರಮ್ಮ, ಮಹಿಳಾ ಸಾಂತ್ವಾನ ಕೇಂದ್ರ ಅಧಿಕಾರಿ ಸುಶೀಲಮ್ಮ ಮತ್ತು ವನಜಾಕ್ಷಿಯವರಿಗೆ ಬಾಲಕಿಯ ಮನೆಗೆ ಭೇಟಿ ನೀಡಲು ಸೂಚಿಸಿದ್ದಾರೆ. ಗಾಯಗೊಂಡು ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಸಿಬ್ಬಂದಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎ.ಜಿ. ಸುಧಾಕರ್ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ಬಾಲಕಿಯ ಆರೋಗ್ಯ ವಿಚಾರಿಸಿದ ನಂತರ ಮಾತನಾಡಿ, ಮನೆಯಲ್ಲಿ ಕೆಲಸ ಮಾಡಿಲ್ಲ ಎಂದು ಆರೋಪಿಸಿ ಚಾಕು ಕಾಯಿಸಿ ಎರಡೂ ಕೈಗಳನ್ನು ಸುಡಲಾಗಿದೆ. ಬಲಗೈಗೆ ತೀವ್ರ ಗಾಯವಾಗಿದ್ದು ಬಾಲಕಿ ತೀವ್ರ ಜ್ವರದಿಂದ ಬಳಲುತ್ತಿದ್ದಾಳೆ. ಆರೋಗ್ಯ ಹತೋಟಿಗೆ ಬಂದ ಮೇಲೆ ಬಾಲಕಿಯ ಸಂಬಂಧಿಕರ ಜೊತೆಗೆ ಚರ್ಚಿಸಿ ಬಾಲಕಿಯನ್ನು ಶಾಲೆಗೆ ಕಳುಹಿಸುವುದಾಗಿ ಮತ್ತು ಪ್ರಕರಣದ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.