ಹರಿಜನೋದ್ಧಾರಕ್ಕೆ ಪಣ ತೊಟ್ಟಿದ್ದ ಬೌರಿಂಗ್ ಪೇಟೆ ಜನತೆ
ಬಂಗಾರಪೇಟೆ: ಅವಿನ್ನೂ ಸ್ವಾತಂತ್ರ್ಯದ ಕನಸು ಕಾಣುತ್ತಿದ್ದ ದಿನಗಳು. ಮಹಾತ್ಮ ಗಾಂಧಿಜಿ ಅಸ್ಪೃಶ್ಯತೆ ಹೋಗಲಾಡಿಸಲು ಹರಿಜನೋದ್ದಾರದ ಸಂಕಲ್ಪ ತೊಟ್ಟಿದ್ದರು. ಅದಕ್ಕೆ ಬಂಗಾರಪೇಟೆ ಅಂದಿನ(ಬೌರಿಂಗ್ ಪೇಟೆ) ಜನರು ಸ್ಪಂದಿಸಿದ್ದ ರೀತಿ ಕಂಡು ಗಾಂಧಿಜಿಯೇ ಬೆರಗಾಗಿದ್ದರು.
1936ರಲ್ಲಿ ಬೌರಿಂಗ್ ಪೇಟೆಯ ನಿವಾಸಿಗರೆಲ್ಲಾ ಸೇರಿ ಪಟ್ಟಣದ 4,000 ಹರಿಜನರಿಗೆ ಉತ್ತಮ ವಸತಿ ನಿರ್ಮಿಸಿ ಕೊಡಲು ರು. 1,600 ಹಣವನ್ನು ಸಂಗ್ರಹಿಸಿದ್ದರು. ಪುರಸಭೆಯವರು ಮನೆಗಳಿಗೆ ವಿವೇಶನ ನೀಡಿ ಕಟ್ಟಡದ ಸಾಮಾನು ಉಚಿತವಾಗಿ ನೀಡಿದ್ದರು. ಇತರರಂತೆ ಹರಿಜನರಿಗೆ ಕಾಲೋನಿಯಲ್ಲಿ ಬಾವಿ, ವಿದ್ಯುತ್ ದೀಪ, ರಸ್ತೆ ವ್ಯವಸ್ಥೆ ನಿರ್ಮಾಣ ಮಾಡುವ ಕಾರ್ಯ ಸಾಗಿತ್ತು.
1936 ಮೇ 31ರಂದು ಬೌರಿಂಗ್ ಪೇಟೆಯ ಕಿಂಗ್ ಎಡ್ವರ್ಡ್ ಹಾಲ್ಗೆ ಮಹಾತ್ಮ ಗಾಂಧಿಜಿ, ಕಸ್ತೂರ ಬಾ, ಸರೋಜಿನಿ ನಾಯ್ಡು, ಸರ್ದಾರ್ ವಲ್ಲಭಾಯ್ ಪಟೇಲ್, ಡಾ. ನಾಯರ್ ಭೇಟಿ ನೀಡಿ ಸಾರ್ವಜನಿಕರ ಸಭೆ ನಡೆಸಿದ್ದರು.
ಮೆಚ್ಚುಗೆ: ಈ ಸಂದರ್ಭದಲ್ಲಿ ಬಂಗಾರಪೇಟೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ರಾಜ ಎಚ್. ಆದಿನಾರಾಯಣಶೆಟ್ಟಿ ಹರಿಜನರ ಉದ್ಧಾರಕ್ಕಾಗಿ ಪುರ ನಿವಾಸಿಗಳು ಕೈಗೆತ್ತಿಕೊಂಡಿರುವ ಯೋಜನೆಗಳನ್ನು ತಿಳಿಸಿದರು. ಇದನ್ನು ಕೇಳಿ ಗಾಂಧಿಜಿ ಸಂತೋಷಭರಿತರಾಗಿ ಪುರದ ನಿವಾಸಿಗಳಿಂದ ನಡೆದಿರುವ ಸಾಮಾಜಿಕ ಬದಲಾವಣೆಯ ಕೆಲಸಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲೇ ಪುರ ನಿವಾಸಿಗರು ಗಾಂಧಿಜಿಗೆ ನೀವು ದೇಶಕ್ಕಾಗಿ ಮಾಡುತ್ತಿರುವ ತ್ಯಾಗ ಅಸಾಧ್ಯವಾದದ್ದು. ತಮಗೆ ಅತ್ಯಂತ ಪ್ರಿಯಕರವಾದ ಹರಿಜನೋದ್ಧಾರ ಕಾರ್ಯದಲ್ಲಿ ನಮಗೆ ಸ್ಥಿರವಾದ ಅಭಿರುಚಿ ಇದ್ದು ಈ ಕಾರ್ಯದಲ್ಲಿ ತೊಡಗಿದ್ದೇವೆ. ಹರಿ ಜನರ ಸ್ಥಿತಿ ಉತ್ತಮಗೊಳಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ ಎಂದು ಭರವಸೆ ನೀಡಿದ್ದರು. ಅಲ್ಲದೆ ಗಾಂಧಿಜಿ ಸತ್ಕಾರ್ಯಗಳಿಗೆ ಪಟ್ಟಣ ನಿವಾಸಿಗರು ಸಹಾಯಧನವಾಗಿ ರು. 285 ನಿಧಿ ನೀಡಿದ್ದರು.
ಸ್ವಾತಂತ್ರ್ಯ ಹೋರಾಟ: ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದ ಎಚ್. ಆದಿನಾರಾಯಣಶೆಟ್ಟರ ಪುತ್ರ ರಾಜಾ ವೆಂಕಟಾಚಲಪತಿ ಇಷ್ಟು ವಿಚಾರಗಳನ್ನು ಕನ್ನಡಪ್ರಭ ಮುಂದೆ ಬಿಚ್ಚಿಟ್ಟರು. ತಮ್ಮ ತಂದೆ ಆದಿನಾರಾಯಣಶೆಟ್ಟರು ವ್ಯಾಪಾರಸ್ಥರಾಗಿದ್ದರೂ ಗಾಂಧಿಜಿ ಸ್ವಾತಂತ್ರ್ಯಕ್ಕಾಗಿ ಹೋರಾಟದ ಕಿಚ್ಚನ್ನು ಹಚ್ಚಿದ ಪರಿಯಿಂದ ಪ್ರೇರಿತರಾಗಿ ವ್ಯಾಪಾರ ಬಿಟ್ಟು ಗಾಂಧಿಜಿ ಕಾಂಗ್ರೆಸ್ ಪಕ್ಷ ಸೇರಿದರು. ಈ ವೇಳೆ ಹಲವರು ವಿರೋಧ ವ್ಯಕ್ತಪಡಿಸಿದರು ಲೆಕ್ಕಿಸದೆ ಗಾಂಧಿಜಿ ಜತೆ ಒಡನಾಟ ಬೆಳೆಸಿಕೊಂಡು ಮೂರು ಬಾರಿ ಜೈಲು ಸೇರಿದ್ದರು. ತಂದೆಗೆ ತಕ್ಕಮಗನಂತೆ ತಮ್ಮ ತಂದೆ ಆದಿನಾರಾಯಣಶೆಟ್ಟರ ಜತೆ ಮಗ ರಾಜಾ ವೆಂಕಟಾಚಲಪತಿ ಸಹ ತಮ್ಮ 10ನೇ ವಯಸಿಗೆ ಅಪ್ಪನೊಟ್ಟಿಗೆ ಕೂಡಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು.
ತಿರಸ್ಕರಿಸಿದರು: ರಾಜಾ ಆದಿನಾರಾಯಣಶೆಟ್ಟಿ ಈ ಭಾಗದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಸ್ವಾತಂತ್ರ್ಯ ನಂತರ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ತಾಲೂಕಿನ ಕೆ.ಸಿ. ರೆಡ್ಡಿ ಸಂಪುಟದಲ್ಲಿ ಆದಿನಾರಾಯಣಶೆಟ್ಟಿರವರಿಗೆ ಮಂತ್ರಿ ಸ್ಥಾನ ನೀಡಲು ಮುಂದಾಗಿದ್ದರು, ಆದರೆ ಇದನ್ನು ನಯವಾಗಿಯೇ ಶಟ್ಟರು ನಿರಾಕರಿಸಿದ್ದರು. ಅಲ್ಲದೆ ಸರ್ಕಾರದಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಗುತ್ತಿದ್ದ ಎಲ್ಲಾ ಸೌಲಭ್ಯಗಳನ್ನು ನಿರಾಕಿಸಿದರು ಎಂದು ಅವರ ಮಗ ವೆಂಕಟಾಚಲಪತಿ ಹೇಳಿದರು. ಆದರೆ ಸ್ವಾತಂತ್ರ್ಯ ನಂತರ ನಮ್ಮ ಕುಟುಂಬವನ್ನು ಯಾರು ಗುರುತಿಸಿಲ್ಲ ಎಂಬ ನೋವು ಅವರನ್ನು ಕಾಡುತ್ತಿದೆ.
ಕೆ. ರಮೇಶ್