ಉದ್ಘಾಟನೆಗೆ ಸಿದ್ಧಗೊಂಡಿರುವ ಸಸ್ಯೋತ್ಥಾನ
ಕೋಲಾರ: ಸುಮಾರು ನೂರು ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಇಲಾಖೆಯವರು ತಾಲೂಕಿನ ಮಡೇರಹಳ್ಳಿಯಲ್ಲಿ ನಿರ್ಮಿಸಿರುವ ಸಸ್ಯೋತ್ಥಾನತ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಬುಧವಾರ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.
ಅರಣ್ಯ ಭೂಮಿಯಲ್ಲಿ ಸ್ವಾಭಾವಿಕವಾಗಿ ಬೆಳೆದಿರುವ ಸ್ಥಳೀಯ ಗಿಡಗಳ ಜೊತೆಗೆ ಖಾಲಿ ಇರುವ ಜಾಗದಲ್ಲೂ ಅದೇ ತಳಿಯ ಗಿಡಗಳನ್ನು ಬೆಳೆಸುವ ಮೂಲಕ ಅರಣ್ಯ ಇಲಾಖೆಯವರು ಮಡೇರಹಳ್ಳಿ ನರ್ಸರಿಯನ್ನು ಸಸ್ಯಕಾಶಿಯಾಗಿ ಪರಿವರ್ತಿಸಿದ್ದು, ಜಿಲ್ಲಾಧಿಕಾರಿಗಳು ತಮ್ಮ ಜೊತೆ ಎಸ್ಪಿ ಡಾ. ರಾಮ್ನಿವಾಸ್ ಸಪಟ್ ಅವರೊಂದಿಗೆ ಸುಮಾರು 3 ರಿಂದ 4 ಕಿಮೀ ಸುತ್ತಾಡಿ ಅಭಿವೃದ್ಧಿ ಕಾರ್ಯಗಳ ಮಾಹಿತಿ ಪಡೆದರು.
ಮಡೇರಹಳ್ಳಿ ನರ್ಸರಿಗೆ ಹೊಂದಿಕೊಂಡಿರುವ ಬೆಟ್ಟ-ಗುಡ್ಡಗಳ ಸಾಲಿನಲ್ಲಿ ಬೆಳೆದಿರುವ ಹೊನ್ನೆ, ಆಲ, ಹಿಪ್ಪೆ, ಮಾವು, ಹಲಸು, ನೆರಳೆ ಮುಂತಾದ ಮರಳನ್ನು ಕಂಡು ಖುಷಿಪಟ್ಟ ಜಿಲ್ಲಾಧಿಕಾರಿಗಳು, ಕೋಲಾರದಲ್ಲಿ ಇಷ್ಟೆಲ್ಲ ಸಸ್ಯ ಸಂಪತ್ತು ಇದ್ದರೂ ಅರಣ್ಯ ಇಲ್ಲವೆಂದು ಹೇಳುವುದು ಏಕೆ ಎಂದು ಡಿಎಫ್ಒ ಮುನೇಗೌಡರನ್ನು ಪ್ರಶ್ನಿಸಿದರು.
ನರ್ಸರಿ ಪ್ರದೇಶದಲ್ಲಿ ವನ್ಯ ಜೀವಿಗಳು ಹೆಚ್ಚಾಗಿವೆ. ತೋಳ, ಚಿರತೆಗಳು ಈ ಪ್ರದೇಶದಲ್ಲಿ ಹೆಚ್ಚಾಗಿ ಕಾಣುತ್ತವೆ. ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿಗಾಗಿ ಮಿನಿ ಟ್ಯಾಂಕ್ಗಳ ನಿರ್ಮಾಣ ಮಾಡಲಾಗಿದೆ. ಬೇವಿನ ಗಿಡಗಳನ್ನು ಬೆಳೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸುಮಾರು 15 ಸಾವಿರ ಗಿಡಗಳನ್ನು ಬೆಳೆಯಲಾಗಿದೆ. ಅತ್ಯಂತ ಸುಂದರವಾಗಿ ನಿರ್ಮಿಸಿರುವ ಸಸ್ಯೋತ್ಥಾನದ ಉದ್ಘಾಟನೆಗಾಗಿ ಎಲ್ಲಾ ರೀತಿಯ ಸಿದ್ಧತೆ ನಡೆದಿದ್ದು ಅರಣ್ಯ ಸಚಿವರು ಸಮ್ಮತಿಸಿದ್ದು ದಿನಾಂಕ ಶೀಘ್ರವೇ ಗೊತ್ತುಪಡಿಸುವುದಾಗಿ ಡಿಎಫ್ಒ ಮುನೇಗೌಡ ತಿಳಿಸಿದರು.
ಅರಣ್ಯ ಇಲಾಖೆ ಸಹಾಯಕ ಸಂರಕ್ಷಣಾಧಿಕಾರಿ ಪಾಪಣ್ಣ, ತಹಸೀಲ್ದಾರ್ ನಾಗರಾಜು, ನಗರಸಭೆ ಮಾಜಿ ಸದಸ್ಯ ತ್ಯಾಗರಾಜು ಅರಣ್ಯ ಸಿಬ್ಬಂದಿ ಇದ್ದರು.