ಪರ್ಯಾಯ ಧೋರಣೆಗಳ ವೇದಿಕೆಯಿಂದ ಜಾಥಾ
ಶಿಡ್ಲಘಟ್ಟ: ಸಿಪಿಎಂ ನೇತೃತ್ವದಲ್ಲಿ ಎಡಪಕ್ಷಗಳು ಭಾರತದಾದ್ಯಂತ ಪರ್ಯಾಯ ಧೋರಣೆಗಳ ಬಗ್ಗೆ ಜನಾಂದೋಲನ ಪ್ರಾರಂಭಿಸಿರುವುದಾಗಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ಪಿ. ಮುನಿವೆಂಕಟಪ್ಪ ತಿಳಿಸಿದರು.
ಪಟ್ಟಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ವೇದಿಕೆಗಳನ್ನು ತಿರಸ್ಕರಿಸಿ ಪರ್ಯಾಯ ಧೋರಣೆಗಳ ವೇದಿಕೆ ಬಗ್ಗೆ ಪ್ರಚಾರಾಂದೋಲನ ಜಾಥಾದೊಂದಿಗೆ ಆಗಮಿಸಿ ಮಾತನಾಡಿ, ರಾಷ್ಟ್ರದ ರಾಜಕಾರಣವೆಂದರೆ ಕೇವಲ ಇಬ್ಬರು ವ್ಯಕ್ತಿಯ ರಾಜಕಾರಣವೆಂದು ಬಿಂಬಿಸಿ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಜನರು ಆರಿಸಬೇಕಾದ ಪ್ರಧಾನಿ ಅಭ್ಯರ್ಥಿಯನ್ನು ರಾಜಕೀಯ ಪಕ್ಷಗಳೇ ನಿರ್ಧರಿಸಿ ಬಿಂಬಿಸುತ್ತಿರುವುದು ಅಸಂವಿಧಾನಿಕ. ಪ್ರಚೋದನಕಾರಿ ಭಾಷಣ, ಕೋಮುಸೌಹಾರ್ಧ ಕದಡುವ ಭಾಷಣ ಮಾಡುವ ಬಿಜೆಪಿ ದೇಶದ ನೈಜ ಸಮಸ್ಯೆಯನ್ನು ಮರೆತಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದಲ್ಲಿ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ಜರ್ಜರಿತರಾಗಿದ್ದಾರೆ. ಈ ಸಂದರ್ಭದಲ್ಲಿ ಪರ್ಯಾಯ ನೀತಿ ಅಗತ್ಯವಿದೆ ಎಂದು ಹೇಳಿದರು.
ಭೂಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವುದು. ಕೈಗಾರಿಕೆಗಳನ್ನು ರೂಪಿಸಿ ಹೆಚ್ಚೆಚ್ಚು ಉದ್ಯೋಗಾವಕಾಶ ಸೃಷ್ಟಿಸುವುದು. ಮಹಿಳೆಯರಿಗೆ ಸಮಾನ ಹಕ್ಕನ್ನು ನೀಡುವುದು. ದಲಿತರ, ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವುದು ಮುಂತಾದ ಅಂಶಗಳನ್ನೊಳಗೊಂಡ ರಾಜಕೀಯ ವೇದಿಕೆ ಬಗ್ಗೆ ಜನಾಂದೋಲನ ರೂಪಿಸಲಾಗಿದೆ. ಜಿಲ್ಲೆಯಾದ್ಯಂತ ಸಂಚರಿಸುತ್ತಿದ್ದು, ತಾಲೂಕಿನಲ್ಲಿ ಮೂರು ದಿನಗಳ ಕಾಲ ಜಾಥಾ ನಡೆಸುತ್ತಿರುವುದಾಗಿ ಹೇಳಿದರು. ಅ.8 ರಂದು ಬೆಂಗಳೂರಿನಲ್ಲಿ ಎಡಪಕ್ಷಗಳು ಆಯೋಜಿಸಿರುವ ರ್ಯಾಲಿ ಹಾಗೂ ಬಹಿರಂಗ ಸಭೆಗೆ ಜಿಲ್ಲೆಯಿಂದ 10 ಸಾವಿರ ಮಂದಿ ರೈತರು, ಕೂಲಿಕಾರ್ಮಿಕರು ಪಾಲ್ಗೊಳ್ಳುತ್ತಿರುವುದಾಗಿ ತಿಳಿಸಿದರು.
ರಾಜ್ಯ ಪ್ರಾಂತ್ಯ ರೈತ ಸಂಘದ ತಾಲೂಕು ಸಂಚಾಲಕ ಮಳ್ಳೂರು ಶಿವಣ್ಣ, ಜಿಲ್ಲಾ ಮುಖಂಡ ಬಿ.ಎನ್. ಮುನಿಕೃಷ್ಣಪ್ಪ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀದೇವಮ್ಮ, ಜನವಾದಿ ಮಹಿಳಾ ಸಂಘಟನೆಯ ಮಧುಲತಾ, ಡಿವೈಎಫ್ಐ ಮುಖಂಡ ನರಸಿಂಹಪ್ಪ, ಎಸ್ಎಫ್ಐ ಜಿಲ್ಲಾ ಸಂಚಾಲಕ ಮುನೀಂದ್ರ ಇದ್ದರು.