ರಾಜ ಕಾಲುವೆಯಲ್ಲಿ ಕಟ್ಟಡ ನಿರ್ಮಾಣ
ಕ.ಪ್ರ.ವಾರ್ತೆ ಕೋಲಾರ ಅ. 1
ಕೆರೆ, ಕಲ್ಯಾಣಿ, ಗೋಕುಂಟೆ, ರಾಜಕಾಲುವೆಗಳ ಅಭಿವೃದ್ಧಿಗೆ ಮಹಾತ್ಮಗಾಂಧಿ ಜಯಂತಿಯ ದಿನ ಚಾಲನೆ ನೀಡಿದ ಬೆನ್ನಲ್ಲೇ ಶತಶೃಂಗ ಪರ್ವತಗಳ ಸಾಲಿನಿಂದ ಕೆರೆಗಳಿಗೆ ಮಳೆಗಾಲದ ನೀರು ಹರಿಯಲು ಪೂರ್ವಿಕರು ನಿರ್ಮಿಸಿರುವ ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸುತ್ತಿರುವುದು ಬೆಳಕಿಗೆ ಬಂದಿದೆ.
ಕೋಲಾರ ತಾಲೂಕಿನ ತೇರಹಳ್ಳಿ ಬೆಟ್ಟ ಶತಶೃಂಗ ಪರ್ವತಕ್ಕೆ ಸೇರಿದ್ದಾಗಿದ್ದು, ಬಹುತೇಕ ಪ್ರದೇಶ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ. ರಾಜ್ಯ ಸರ್ಕಾರದ ಕೆರೆ-ಕಲ್ಯಾಣಿ ಯೋಜನೆಯಡಿ ಬುಧವಾರ ಜಿಲ್ಲಾಧಿಕಾರಿ ಡಿ.ಕೆ. ರವಿಯವರು ಕೋಲಾರ ತಾಲೂಕಿನ ಚನ್ನಸಂದ್ರ ಗ್ರಾಪಂ ವ್ಯಾಪ್ತಿಯ ಕಡಗಟ್ಟೂರು ಗ್ರಾಮದಲ್ಲಿ ಪುರಾತನ ಕಲ್ಯಾಣಿಯ ಪುನಶ್ಚೇತನಕ್ಕೆ ಭೂಮಿ ಪೂಜೆ ನೆರವೇರಿಸಿದ ಸಂದರ್ಭದಲ್ಲಿ ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ಮುನೇಗೌಡ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಾಪಣ್ಣ ಅವರು ತೇರಹಳ್ಳಿ ಬೆಟ್ಟದ ಮೇಲಿನ ಅರಣ್ಯ ಇಲಾಖೆಯ ಆಸ್ತಿ ಕಬಳಿಕೆಯಾಗುತ್ತಿದೆ, ಪರಿಶೀಲಿಸಬೇಕೆಂದು ಜಿಲ್ಲಾಧಿಯನ್ನು ಕೋರಿದರು.
ಸ್ಥಳ ಪರಿಶೀಲನೆ: ಜಿಲ್ಲಾಧಿಕಾರಿ ಡಿ.ಕೆ. ರವಿಯವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ನಿವಾಸ್ ಸಫಟ್ ಹಾಗೂ ಇತರ ಅಧಿಕಾರಿಗಳ ಜೊತೆ ತೇರಹಳ್ಳಿ ಬೆಟ್ಟದತ್ತ ಸಾಗಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕೋರಿಕೆ ಮೇರೆಗೆ ಸುಲ್ತಾನ್ ತಿಪ್ಪಸಂದ್ರ ಕೆರೆಯ ಸಮೀಪದ ರಾಜಕಾಲುವೆಯನ್ನು ತೋರಿಸಿ, ಇದು ಅರಣ್ಯ ಇಲಾಖೆಯ ವ್ಯಾಪ್ತಿಗೆ ಸೇರಿದೆ. ಕಾನೂನು ಬಾಹಿರವಾಗಿ ನಗರಸಭೆಯಿಂದ ಹಕ್ಕು ಪತ್ರ ನೀಡಲಾಗಿದೆ, ಮಳೆಯ ನೀರು ಕೆರೆಗಳಿಗೆ ಹರಿಯಲು ನಿರ್ಮಿಸಿರುವ ರಾಜ ಕಾಲುವೆಯಲ್ಲೇ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ದೂರಿದರು.
ಸಿಟ್ಟಾದ ಜಿಲ್ಲಾಧಿಕಾರಿ: ಸುಲ್ತಾನ್ ತಿಪ್ಪಸಂದ್ರ ಬಳಿ ಕಾರನ್ನು ನಿಲ್ಲಿಸಿ ಸ್ಥಳ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ರಾಜ ಕಾಲುವೆ ಒತ್ತುವರಿಗಾಗಿ ಕಲ್ಲು ನೆಟ್ಟಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಕೋಪವನ್ನು ಹೊರ ಹಾಕಿದರು. ಅಲ್ಲಿದ್ದ ಯುವಕರನ್ನು ಪ್ರಶ್ನಿಸಿದಾಗ ಸೂಕ್ತ ಉತ್ತರ ಸಿಗಲಿಲ್ಲ. ಕುಪಿತರಾಗಿ ಇಲ್ಲಿಂದ ಹೊರ ಹೋಗುವಂತೆ ಯುವಕನಿಗೆ ಸೂಚನೆ ನೀಡಿದರು. ಅರಣ್ಯ ಇಲಾಖೆ ಅಧಿಕಾರಿಗಳು ತೋರಿದ ನಕ್ಷೆಯನ್ನು ನೋಡಿದ ನಂತರ ರಾಜ ಕಾಲುವೆಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಕೆಡವಲು ಸೂಚಿಸಿದರು.
ಅಧಿಕಾರಿಗಳಿಗೇ ಅವಾಜ್: ಈ ವಿಚಾರ ತಿಳಿದ ಮಹಿಳೆಯೊಬ್ಬರು ಜಿಲ್ಲಾಧಿಕಾರಿಗಳ ಬಳಿಗೆ ಬಂದು, ಕಟ್ಟಡ ಕೆಡವಲು ನೀವು ಯಾರು, ಇದು ನಮ್ಮ ಸ್ವಂತ ಜಾಗ, ನಮ್ಮಿಷ್ಟ ಬಂದಂತೆ ಕಟ್ಟಡ ಕಟ್ಟುತ್ತೇವೆ ಎಂದು ಡಿಸಿಗೆ ಅವಾಜ್ ಹಾಕಿದರು. ರಾಜ ಕಾಲುವೆ ನಿಮ್ಮ ಸ್ವಂತ ಆಸ್ತಿ ಆಗುವುದು ಹೇಗೆ ಸಾಧ್ಯ. ನಿಮ್ಮ ಬಳಿ ಇರುವ ದಾಖಲೆ ತೋರಿಸಿ, ಕಟ್ಟಡ ನಿರ್ಮಾಕ್ಕೆ ಯಾವುದೇ ಅನುಮತಿ ಇಲ್ಲದೆ ಕಟ್ಟಡ ನಿರ್ಮಿಸುತ್ತಿರುವುದಲ್ಲದೆ ನನ್ನನ್ನೇ ಪ್ರಶ್ನೆ ಮಾಡುತ್ತೀರಾ ಎಂದು ತರಾಟೆಗೆ ತೆಗೆದುಕೊಂಡ ಡಿಸಿ ದಾಖಲೆ ತೋರಿಸುವ ತನಕ ಕಾಮಗಾರಿ ನಡೆಸಬೇಡಿ ಎಂದು ಸೂಚಿಸಿದರಲ್ಲದೆ, ನಿರ್ಮಾಣಗೊಳ್ಳುತ್ತಿದ್ದ ಗೋಡೆಯನ್ನು ಕೆಡವಲು ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಸೂಚನೆಗಾಗಿ ಕಾಯುತ್ತಿದ್ದ ತಹಸೀಲ್ದಾರ್ ನಾಗರಾಜು, ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಗೋಡೆಯನ್ನು ಕೆಡವಿ ಹಾಕಿದರು. ಕೋಲಾರದಲ್ಲಿ ಜನ ನೀರಿಲ್ಲದೆ ಪರದಾಡುತ್ತಿದ್ದಾರೆ, ನೀರು ಹರಿಯಲು ಇರುವ ರಾಜ ಕಾಲುವೆಗಳನ್ನೇ ನುಂಗಿದರೆ ಹೇಗೆ, ಇಂತಹ ಚಟುವಟಿಕೆಗಳಿಗೆ ಬೆಂಬಲ ನೀಡದಂತೆ ಅಲ್ಲಿ ಸೇರಿದ್ದ ಜನರಿಗೆ ಮನವಿ ಮಾಡಿದರು.
ದಾಖಲೆ ಹಿಂದಕ್ಕೆ ಪಡೆದ ಸ್ವಾಮಿ: ತಹಸೀಲ್ದಾರ್ ನಾಗರಾಜು ಸೂಚನೆ ಮೇರೆಗೆ ನಗರಸಭೆ ಆಯುಕ್ತ ಜಗದೀಶ್ ಅವರು ಪೊಲೀಸರ ಸಹಾಯದಿಂದ ಜೆಸಿಬಿ ಮೂಲಕ ಕಟ್ಟಡ ಕೆಡವಲು ಮುಂದಾದರು. ಆದರೆ, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತೇರಹಳ್ಳಿ ಬೆಟ್ಟಕ್ಕೆ ಹೋಗಿ ವಾಪಸ್ ಬರುವ ವೇಳೆಗೆ ಕಟ್ಟಡ ಮಾಲೀಕ ಡಿಸಿಯವರ ಕಾರನ್ನು ತಡೆದು ತಮ್ಮ ಬಳಿ ಇದ್ದ ದಾಖಲೆಗಳನ್ನು ತೋರಿಸಿ, ನಗರಸಭೆಯಿಂದ ಹಕ್ಕು ಪತ್ರ ನೀಡಲಾಗಿದೆ, ಕಟ್ಟಡ ಕಾಮಗಾರಿ ಆರಂಭಿಸಿ ಅನೇಕ ದಿನಗಳಾಗಿದೆ, ಆಗ ತಕರಾರು ಮಾಡದ ಅರಣ್ಯ ಇಲಾಖೆಯವರು ಈಗ ವಿರೋಧ ಮಾಡುತ್ತಿದ್ದಾರೆಂದು ದೂರಿದರು.
ನಾನು ಈ ಜಾಗದ ಸ್ವಾಮಿ, ನನಗೆ ನೋಟಿಸ್ ನೀಡದೆ ಗೋಡೆ ಕೆಡವಿರುವುದು ಸರಿಯಲ್ಲವೆಂದು ತಹಸೀಲ್ದಾರ್ ಜೊತೆ ವಾಗ್ವಾದ ನಡೆಸಿದರು. ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯದಿರುವುದು ಅಪರಾಧ, ನಿಮ್ಮ ಬಳಿ ಇರುವ ದಾಖಲೆಗಳನ್ನು ಪರಿಶೀಲಿಸುತ್ತೇನೆಂದು ಡಿಸಿಯವರಿಂದ ದಾಖಲೆಗಳನ್ನು ಪಡೆದಾಗ, ಕಟ್ಟಡ ಮಾಲೀಕರು ಅವುಗಳನ್ನು ತಹಸೀಲ್ದಾರ್ ಅವರಿಂದ ಕಸಿದುಕೊಂಡು ನಾಳೇ ನಾನೇ ನಿಮ್ಮ ಕಚೇರಿಗೆ ಬಂದು ಜೆರಾಕ್ಸ್ ಪ್ರತಿ ನೀಡುತ್ತೇನೆಂದು ತಿಳಿಸಿದರು. ಈ ಸಂದರ್ಭದಲ್ಲಿ ಮೊದಲು ಡಿಸಿ ಜೊತೆ ಅನುಚಿತವಾಗಿ ವರ್ತಿಸಿದ್ದ ಮಹಿಳೆ ಮತ್ತೆ ಎದುರಾಗಿ ಕಟ್ಟಡ ಮತ್ತೆ ನಿರ್ಮಿಸಿಕೊಡಬೇಕು, ನಾನು ಫೋನ್ ಮಾಡಿದ್ರೆ ಸಾವಿರ ಜನ ಬರ್ತಾರೆ ಎಂದು ದಮಕಿ ಹಾಕಿದಾಗ, ಕಟ್ಟಡ ಮಾಲೀಕ ಪತ್ನಿಗೆ ಸಮಾಧಾನ ಹೇಳಿದರು.
ಕಾರ್ಯಾಚರಣೆ ಸ್ಥಗಿತ: ಡಿಸಿಯವರು ಜಾಗದಿಂದ ನಿರ್ಗಮಿಸಿದ ನಂತರ ಜೆಸಿಬಿಯ ಸದ್ದು ಜೋರಾಗಿ ರಾಜ ಕಾಲುವೆಯಲ್ಲಿ ನಿರ್ಮಾಣವಾಗಿರುವ ಕಟ್ಟಡ ನೆಲ ಸಮವಾಗಬಹುದೆಂದು ಜನತೆ ಕಾಯುತ್ತಿದ್ದರಾದರೂ ಕಾರ್ಯಾಚರಣೆ ಮುಂದುವರೆಸಲು ನಗರಸಭೆ ಧೈರ್ಯ ತೋರಲಿಲ್ಲ. ಹಾಗಾಗಿ ಕಟ್ಟಡದ ಕಾಮಗಾರಿ ಮತ್ತೆ ಮುಂದುವರೆಯಿತು.
ನಗರಸಭೆಯವರು ಒಬ್ಬನೇ ವ್ಯಕ್ತಿಗೆ ಹೆಚ್ಚು ವಿಸ್ತೀರ್ಣದ ಜಾಗವನ್ನು ಮಂಜೂರು ಮಾಡುವುದಾಗಲಿ, ಹಕ್ಕುಪತ್ರ ನೀಡುವುದಕ್ಕಾಗಲಿ ಅವಕಾಶ ಇಲ್ಲ. ಆದರೆ, ರಾಜಕಾಲುವೆಗೆ ಹಕ್ಕುಪತ್ರ ನೀಡಿರುವುದು ಅನುಮಾನಕ್ಕೆ ಎಡೆ ಮಾಡಿದೆ. ಜೊತೆಗೆ ನಗರರಾಭಿವೃದ್ಧಿ ಪ್ರಾಧಿಕಾರದವರು ಅನುಮತಿ ಇಲ್ಲದೆ ಕಟ್ಟುತ್ತಿರುವ ಕಟ್ಟಡ ಗಮನಿಸದೆ ಇರುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ರಾಜ ಕಾಲುವೆಗಳ ಒತ್ತುವರಿ ತೆರವು ಮಾಡಲು ಜಿಲ್ಲಾಧಿಕಾರಿಗಳಿಗೆ ಜನಪ್ರತಿನಿಧಿಗಳು, ಸಾರ್ವಜನಿಕರು ಸಹಕಾರ ನೀಡದಿದ್ದರೆ ಸರ್ಕಾರದ ಆಸ್ತಿ ಇನ್ನಷ್ಟು ಕಬಳಿಕೆ ಆಗುತ್ತದೆ. ಜೊತೆಗೆ ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿರುವ ಜಾಗದಲ್ಲಿ ಯಾವುದೇ ಕಟ್ಟಡ ನಿರ್ಮಿಸಬಾರದೆಂಬ ನಿಯಮವನ್ನು ಉಲ್ಲಂಘಿಸಲಾಗಿದೆ.
ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುವುದು ಎಷ್ಟು ತಪ್ಪೋ ಅದೇ ರೀತಿ ಕಾನೂನು ಬಾಹಿರವಾಗಿ ಹಕ್ಕುಪತ್ರ ನೀಡಿರುವುದು ಮತ್ತು ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಿರುವುದು ತಪ್ಪಾಗಿರುವುದರಿಂದ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಇಲಾಖೆಯವರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಾರೆಂಬುದು ಕಾದು ನೋಡಬೇಕಾಗಿದೆ.