ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸ್ವಚ್ಛತೆ ಕಾಪಾಡಲು ಸಾರ್ವಜನಿಕರು ಮುಂದಾಗಿ

Rashmi Kasaragodu
Updated On : 3 Oct 2013, 1:00 am

ಚಿಕ್ಕಬಳ್ಳಾಪುರ: ಮೂಲ ಸೌಕರ್ಯ ಒದಗಿಸುವುದರ ಜತೆಗೆ ನೈರ್ಮಲ್ಯ ಕಾಪಾಡಲು ಮೊದಲ ಒತ್ತು ಕೊಟ್ಟಿದ್ದು ಕ್ಷೇತ್ರದಲ್ಲಿ ಮುಂದಿನ 5 ವರ್ಷಗಳಲ್ಲಿ ಎಲ್ಲಾ ಮನೆಗಳು ಶೌಚಾಲಯ ಸೌಲಭ್ಯ ಹೊಂದುವಂತೆ ಮಾಡಲಾಗುವುದು ಎಂದು ಶಾಸಕ ಕೆ. ಸುಧಾಕರ್ ಭರವಸೆ ನೀಡಿದರು.
ನಗರಸಭಾ ಕಚೇರಿಯಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ, ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮ ಮತ್ತು ನಗರಸಭೆ ಕಚೇರಿಯ ಆವರಣದಲ್ಲಿ ಎಸ್ಎಫ್ಸಿ 2010-11 ನೇ ಸಾಲಿನಲ್ಲಿ ರು. 7.5 ಲಕ್ಷ ಅನುದಾನದಲ್ಲಿ ನಿರ್ಮಿಸಿರುವ ಶೌಚಾಲಯ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯದ ದೃಷ್ಟಿಯಿಂದ ಸುತ್ತಮುತ್ತಲಿನ ನೈರ್ಮಲ್ಯ ಕಾಪಾಡಬೇಕು. ಶೇ.80 ರಷ್ಟು ಜನರು ಶೌಚಾಲಯದ ಸಮಸ್ಯೆ ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ನೈರ್ಮಲ್ಯ ಕಾಪಾಡಲು ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ಕೊಟ್ಟಿದೆ.ನಗರ ಪ್ರದೇಶಗಳಲ್ಲಿ ರು. 20 ಸಾವಿರ ಮತ್ತು ಗ್ರಾಮೀಣ ಪ್ರದೇಶಗಳಿಗೆ ರು. 10 ಸಾವಿರ ಆರ್ಥಿಕ ನೆರವನ್ನು ಶೌಚಾಲಯ ನಿರ್ಮಿಸಲು ನೀಡುತ್ತಿದ್ದು ಜನರು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ನಗರೋತ್ಥಾನ 2 ನೇ ಹಂತದಲ್ಲಿ ರು. 30 ಕೋಟಿ ಬಿಡುಗಡೆಯಾಗಿದ್ದು ರಸ್ತೆಗಳು ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವುದು. ಆದಷ್ಟು ಬೇಗ ಜಕ್ಕಲಮಡಗು ಜಲಾಶಯದಿಂದ ನೀರನ್ನು ಸರಬರಾಜು ಮಾಡಲು ಮನೆಗಳಿಗೆ ಪೈಪ್ ಲೈನ್ ಸಂಪರ್ಕ ಕಲ್ಪಿಸಲಾಗುವುದು ಎಂದರು.
ಗುಣಮಟ್ಟ ಪರಿಶೀಲನೆ: ನಗರಸಭೆಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಕ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಜ್ಯಾಮಿಟ್ರಿ ಬಾಕ್ಸ್ಗಳ ಗುಣಮಟ್ಟದ ಬಗ್ಗೆ ಖುದ್ದು ಪರಿಶೀಲನೆ ನಡೆಸಿದ ಶಾಸಕ ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದರು.
ಕಳಪೆ ಗುಣಮಟ್ಟದ ಜ್ಯಾಮಿಟ್ರಿ ಬಾಕ್ಸ್ ನೀಡಲಾಗುತ್ತಿದೆ ಎಂದರು. ವಿದ್ಯಾರ್ಥಿ ನಿಲಯಗಳಿಗೆ ನೀಡುತ್ತಿರುವ ಯುಪಿಎಸ್ಗಳ ಬಗ್ಗೆಯೂ ಮಾಹಿತಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ರುದ್ರಮುನಿ, 2010-11 ನೇ ಸಾಲಿನಲ್ಲಿ ಖರೀದಿಸಿದ್ದ ವಸ್ತುಗಳನ್ನು ಈಗ ನೀಡಲಾಗುತ್ತಿದೆ ಎಂದು ತಿಳಿಸಿದಾಗ ಅಸಮಾಧಾನ ವ್ಯಕ್ತಪಡಿಸಿದರು. ಮಾಧ್ಯಮ ಶಿಕ್ಷಣ ಅಭಿಯಾನ ಜಿಲ್ಲಾ ಸಮನ್ವಯಾಧಿಕಾರಿ ಮಂಜುನಾಥ್, ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರಣಾಧಿಕಾರಿ ಜಗನ್ನಾಥ್, ನಗರಸಭೆ ಸಿಬ್ಬಂದಿಉಪಸ್ಥಿತರಿದ್ದರು.
ಶಾಸಕರಿಗೆ ಬೆಂಕಿ: ನಗರಸಭೆಯಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಗಳನ್ನು ಸಮರ್ಪಿಸಿ ಜ್ಯೋತಿ ಬೆಳಗಿಸುವ ಸಂದರ್ಭದಲ್ಲಿ ಶಾಸಕರ ಬಟ್ಟೆಗೆ ಬೆಂಕಿ ತಗುಲಿದ ಘಟನೆ ನಡೆಯಿತು.
ಜ್ಯೋತಿ ಬೆಳಗಿಸಿದ ಶಾಸಕರಿಂದ ಮೇಣದ ಬತ್ತಿಯನ್ನು ಪಡೆದ ನಗರಸಭೆ ಸಿಬ್ಬಂದಿ ಆರಿಸಲು ಯತ್ನಿಸಿದರೂ ಅದು ಆರಲಿಲ್ಲ. ಆದರೆ, ಇದನ್ನು ನೋಡದೇ ಹಾಗೆಯೇ ನಿಂತುಕೊಂಡಿದ್ದು ಶಾಸಕರ ಅಂಗಿಗೆ ಬೆಂಕಿ ತಗುಲಿ ಹೊತ್ತಿಕೊಂಡಿತ್ತು. ತಕ್ಷಣ ಎಚ್ಚೆತ್ತುಕೊಂಡ ಶಾಸಕರು ಬೆಂಕಿಯನ್ನು ಆರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement