ಅಧಿಕಾರಿಗಳ ನಿರ್ಲಕ್ಷ್ಯ; ಗ್ರಾಮಸ್ಥರ ಪ್ರತಿಭಟನೆ
ಚಿಂತಾಮಣಿ: ಕೋರ್ಲಪರ್ತಿ ಗ್ರಾಪಂ ಅಧಿಕಾರಿಗಳು ಜನಸಾಮಾನ್ಯರಿಗೆ ಮೂಲ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದ್ದಾರೆಂದು ಆರೋಪಿಸಿ ತಾಪಂ ಕಚೇರಿಗೆ ಬೀಗ ಜಡಿದು ಯರಮರೆಡ್ಡಿಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ತಾಲೂಕಿನ ಚಿಲಕಲನೇರ್ಪು ಹೋಬಳಿ ಕೋರ್ಲಪರ್ತಿ ಗ್ರಾಪಂ ವ್ಯಾಪ್ತಿಯ ಯರಮರೆಡ್ಡಿಹಳ್ಳಿ ಗ್ರಾಮಸ್ಥರಿಗೆ ಪಂಚಾಯ್ತಿ ಅಧಿಕಾರಿಗಳು ಕುಡಿಯುವ ನೀರು ವ್ಯವಸ್ಥೆಯನ್ನು ಕಳೆದ 6 ತಿಂಗಳಿಂದ ಕಲ್ಪಿಸುವಲ್ಲಿ ವಿಫಲಗೊಂಡಿದ್ದಾರೆಂದು ಆರೋಪಿಸಲಾಯಿತು. ಸಮಸ್ಯೆಗೆ ಸ್ಪಂದಿಸದೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಬೇಜವಾಬ್ದಾರಿ ತನದಿಂದ ವರ್ತಿಸುತ್ತಾ ಜನಸಾಮಾನ್ಯರಿಗೆ ಕಿರಿ ಕಿರಿ ಉಂಟು ಮಾಡುತ್ತಿರುವ ಮದ್ದಿರೆಡ್ಡಿಯವರನ್ನು ಎತ್ತಂಗಡಿ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಭಾಗ್ಯಮ್ಮ, ಪಾರ್ವತಮ್ಮ, ಭಾರತಿ, ಚಿಕ್ಕವೆಂಕಟರವಣಪ್ಪ, ನಾರಾಯಣಪ್ಪ, ನಾರಾಯಣಮ್ಮ, ವೆಂಕಟರಾಯಪ್ಪನಾರೆಪ್ಪ, ಚೌಡರೆಡ್ಡಿ, ಚೌಡಪ್ಪ, ನಾಗೇಂದ್ರ, ನಾಗರಾಯಣಸ್ವಾಮಿ, ವೆಂಕಟರೆಡ್ಡಿ ಭಾಗವಹಿಸಿದ್ದರು.