ಕಾಲುಬಾಯಿ ಜ್ವರ; ಸೂಕ್ತ ಪರಿಹಾರಕ್ಕೆ ಆಗ್ರಹ
ಚಿಂತಾಮಣಿ: ಜಾನುವಾರುಗಳು ಕಾಲುಬಾಯಿ ಜ್ವರದಿಂದ ಸಾವನ್ನಪ್ಪುತ್ತಿರುವುದರಿಂದ ರೈತರು ಸಾಲಗಾರರಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದರೂ ಸರ್ಕಾರ ಮೌನವಹಿಸಿದೆ ಎಂದು ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಆರೋಪಿಸಿದರು. ಸುದ್ದಿಗಾರರ ಜೊತೆ ಮಾತನಾಡಿ, ಪಶು ಸಂಗೋಪನೆ ಇಲಾಖೆ ಹಾಗೂ ಹಾಲು ಒಕ್ಕೂಟದ ವೈಫಲ್ಯದಿಂದ ತಾಲೂಕಿನ ನೂರಾರು ಜಾನುವಾರುಗಳು ಕಾಲುಬಾಯಿ ಜ್ವರದಿಂದ ಸಾವನ್ನಪ್ಪಿದ್ದು, ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸದ ಸಚಿವರ ಕಾರ್ಯವೈಖರಿ ವಿರುದ್ಧ ಶಿಕ್ಷಕರು ಪ್ರತಿಭಟನೆ ಹಾಗೂ ಧರಣಿ ಹಮ್ಮಿಕೊಳ್ಳುವ ಮುನ್ನ ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳು ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದರು. ಜನಾರ್ದನರೆಡ್ಡಿ, ನರೇಂದ್ರ, ರಾಮಸುಬ್ಬಾರೆಡ್ಡಿ, ಕೃಷ್ಣಾರೆಡ್ಡಿ, ಕೋಲಾಟಲ ಕೃಷ್ಣಪ್ಪ, ಶ್ರೀನಿವಾಸರೆಡ್ಡಿ ಇದ್ದರು.