'ಗ್ರಾಮೀಣ ಕಲೆ, ಸಂಸ್ಕೃತಿ ದಿನೇ ದಿನೆ ಮಾಯ'
ಬಂಗಾರಪೇಟೆ: ಇಂದಿನ ವೇಗ ಪ್ರಪಂಚದಲ್ಲಿ ಪಟ್ಟಣ ಮಕ್ಕಳು ಗ್ರಾಮೀಣ ಕಲೆ ಸಂಸ್ಕೃತಿಯನ್ನು ಮರೆಯುವಂತಾಗಿದ್ದು ಗ್ರಾಮೀಣ ಸೊಗಡನ್ನು ಪರಿಚಯಿಸುವ ಚಟುವಟಿಕೆಗಳು ನಿರಂತರವಾಗಿ ಸಾಗಬೇಕು ಆಗಲೇ ನಮ್ಮ ತನ ಉಳಿಯಲು ಸಾಧ್ಯ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ತಿಮ್ಮಾಪುರ ಗ್ರಾಮದಲ್ಲಿ ನಡೆಯಲಿರುವ ಎನ್.ಎಸ್.ಎಸ್. ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಹಿಂದೆ ಎಲ್ಲಾ ಮಕ್ಕಳಿಗೆ ಗ್ರಾಮೀಣ ಸೊಗಡು ಬಗ್ಗೆ ಅರಿವಿತ್ತು. ಆದರೆ ವಿದ್ಯಾರ್ಥಿಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಸೇವಾ ಶಿಬಿರಗಳನ್ನು ನಡೆಸುವುದರಿಂದ ಸಾಧ್ಯವಾಗಲಿದೆ. ಸೇವಾ ಶಿಬಿರಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ದೈಹಿಕ ಜೊತೆ ಮಾನಸಿಕವಾಗಿಯೂ ಸದೃಡರಾಗುವರು ಶಿಬಿರಗಳು ಮಕ್ಕಳ ಶಾಲೆದಿನಗಳಲ್ಲಿ ನಾಯಕತ್ವ ಗುಣಗಳನ್ನು ಮತ್ತು ಸೇವಾ ಮನೋಭಾವ ಬೆಳೆಸುವುದು ಆದ್ದರಿಂದ ವಿದ್ಯಾರ್ಥಿಗಳು ಸೇವಾ ಕಾರ್ಯಕ್ರಮಗಳಲ್ಲಿ ತಪ್ಪದೆ ಪಾಲ್ಗೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಂದು ಕೋರಿದರು.
ತಿಮ್ಮಾಪುರ ಗ್ರಾಮ ಹಲವು ಸೌಲಭ್ಯಗಳಿಂದ ವಂಚಿತವಾಗಿದೆ ಈ ಗ್ರಾಮಕ್ಕೆ ಸಕಲ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ಸಮುದಾಯ ಭವನವನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.ಏಳು ದಿನಗಳ ಕಾಲ ಗ್ರಾಮದಲ್ಲಿ ಮಕ್ಕಳಿಂದ ಗ್ರಾಮವನ್ನು ಸ್ವಚ್ಛತೆಗೊಳಿಸುವುದು, ಶಾಲಾ ಕಾಂಪೌಂಡಿಗೆ ಗೇಟ್ ಅಳವಡಿಸುವುದು ಪರಿಸರ ಬಗ್ಗೆ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲು ಸಸಿ ನಡೆವುದು ಮತ್ತು ಆರೋಗ್ಯವನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿವಳಿಕೆ ಮೂಡಿಸಲಾಗುವುದು.
ಕಾಲೇಜಿನ ಪ್ರಾಂಶುಪಾಲ ಡಿ.ಇ. ವೆಂಕಟರಾಜು ಅಧ್ಯಕ್ಷತೆ ವಹಿಸಿದ್ದರು. ಬಿ.ವಿ. ಮಹೇಶ್, ಸಂಪಂಗಿರೆಡ್ಡಿ, ಕೃಷ್ಣಮೂರ್ತಿ, ಎಸ್.ಎ. ಪಾರ್ಥಸಾರಥಿ, ಇಒ ಜಗದೀಶ್ ಇದ್ದರು.