ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಮ್ಮ ಊರು ಕಳಪೆ ಕಾಮಗಾರಿಗಳ ತವರು

Rashmi Kasaragodu
Updated On : 4 Oct 2013, 12:25 pm

ಎನ್. ವೆಂಕಟೇಶ್
ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರ ನಗರದ ಬಹುತೇಕ ಕಡೆ ಕಳಪೆ ಕಾಮಗಾರಿಗಳು ಕಂಡು ಬರುತ್ತಿದ್ದು ಸಹಜವಾಗಿ ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರತಿ ವರ್ಷ ಸರ್ಕಾರದ ಕಡೆಯಿಂದ ನಾನಾ ಯೋಜನೆ, ಕಾರ್ಯಕ್ರಮಗಳ ಮೂಲಕ ನಗರಸಭೆಗೆ ಕೋಟ್ಯಂತರ ರು. ಅನುದಾನದ ಹೊಳೆಯೇ ಹರಿದು ಬಂದಿದೆ. ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಿದ್ದರೆ ಜನರ ಬಹಳಷ್ಟು ಸಮಸ್ಯೆಗಳು ಇಷ್ಟೊತ್ತಿಗಾಗಲೇ ದೂರವಾಗುತ್ತಿದ್ದವು. ಜಿಲ್ಲಾ ಕೇಂದ್ರದ ಸ್ಥಾನಮಾನವನ್ನು ಪಡೆದುಕೊಂಡಿರುವುದಕ್ಕೆ ತಕ್ಕಂತೆ ನಗರ ಅಭಿವೃದ್ಧಿಯನ್ನು ಕಾಣುತ್ತಿತ್ತು. ಆದರೆ, ಇಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ, ಅವ್ಯವಸ್ಥೆ, ನಿರ್ಲಕ್ಷ್ಯದಿಂದ ಸರ್ಕಾರದ ಕೋಟ್ಯಂತರ ರು. ಅನುದಾನ ಸಮರ್ಪಕವಾಗಿ ಬಳಕೆಯಾಗದೇ ಎಲ್ಲೆಡೆ ಕಳಪೆ ಕಾಮಗಾರಿಗಳ ದರ್ಶನವಾಗುತ್ತಿದೆ.
ಕಳಪೆ ಗುಣಮಟ್ಟ: ಇಲ್ಲಿ ಅನುದಾನಕ್ಕೆ ಯಾವುದೇ ಕೊರತೆಯೆ ಇಲ್ಲದಿದ್ದರೂ ಅಭಿವೃದ್ಧಿ ಕೆಲಸಗಳು ಆಮೆಗತಿಯಲ್ಲಿ ಸಾಗುತ್ತಿವೆ. ಚರಂಡಿ, ರಸ್ತೆ ನಿರ್ಮಾಣ ಸೇರಿದಂತೆ ನಗರಸಭೆಯಿಂದ ನಡೆಯುವ ಯಾವುದೇ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ನಮ್ಮ ಊರು ಕಳಪೆ ಕಾಮಗಾರಿಗಳಿಗೆ ತವರೂರು ಎಂದೆಲ್ಲಾ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.
ಕುಸಿತವೇ ನಿದರ್ಶನ: ಚಿಕ್ಕಬಳ್ಳಾಪುರ ನಗರ 31 ವಾರ್ಡುಗಳನ್ನು ಹೊಂದಿದೆ. ಯಾವುದೇ ವಾರ್ಡಿಗೆ ಹೋದರೂ ಕಳೆದ ಒಂದು ವರ್ಷದ ಹಿಂದೆ ಕೈಗೊಂಡ ಕಾಮಗಾರಿಗಳೇ ದುಸ್ಥಿತಿಯಲ್ಲಿರುವುದು ಕಂಡು ಬರುತ್ತವೆ. ಚರಂಡಿಗೆ ಹಾಕಿರುವ ಸಿಮೆಂಟ್ ಕಿತ್ತು ಬಂದು ಜಲ್ಲಿ ಕಲ್ಲುಗಳು ಹೊರ ಬಂದಿರುವುದು. ಜತೆಗೆ ಚರಂಡಿಯ ಮೇಲೆ ರಸ್ತೆಗಾಗಿ ಹಾಕಿರುವ ಕಾಂಕ್ರಿಟ್ ಕುಸಿದು ಹೋಗಿರುವುದು ಕಣ್ಣಿಗೆ ಗೋಚರವಾಗುತ್ತದೆ. ನಗರದ ಸೆಂಥ್ ಜೋಸೆಫ್ ಕಾನ್ವೆಂಟ್ ಶಾಲೆಯ ಮುಂಭಾಗದ ರಸ್ತೆ, ಗರ್ಲ್ಸ್ ಸ್ಕೂಲ್ ರೋಡ್, ಸಾಧುಮಠ, ಕೋಟೆ ರಸ್ತೆ, ವೇಣುಗೋಪಾಲಸ್ವಾಮಿ ರಸ್ತೆ, ಪ್ರಗತಿ ಗ್ರಾಮೀಣ ಬ್ಯಾಂಕ್ ರಸ್ತೆ ಸೇರಿದಂತೆ ಹಲವೆಡೆ ರಸ್ತಗೆ ಹಾಕಿರುವ ಕಾಂಕ್ರಿಟ್ನಲ್ಲಿ ಹೊಂಡಗಳು ಬಿದ್ದಿವೆ. ರಸ್ತೆಗಳಲ್ಲಿ ಅಡ್ಡಾಡುವ ನಗರಸಭೆ ಸಿಬ್ಬಂದಿ ಮತ್ತು ಜನಪ್ರತಿನಿಧಿಗಳು ಹೊಂಡಗಳು ರಾರಾಜಿಸುತ್ತಿದ್ದರೂ ತಲೆ ಕೆಡಿಸಿಕೊಳ್ಳುವ ಗೋಜಿಗೆ ಹೋಗಿಲ್ಲ. ಸಾರ್ವಜನಿಕರೇ ಅಲ್ಲಲ್ಲಿ ಹೊಂಡಗಳ ಸುತ್ತ ಎಚ್ಚರಿಕೆಗೆ ಅಡ್ಡಲಾಗಿ ಕಲ್ಲುಗಳನ್ನಿಟ್ಟಿದ್ದಾರೆ.
ವರ್ಷದಲ್ಲಿ ಹಾಳು: ನಗರಸಭಾ ಸದಸ್ಯರ ಆಯ್ಕೆ ಚುನಾವಣೆ ನಡೆಯುವುದರ ಪೂರ್ವ ಹದಗೆಟ್ಟಿದ್ದ ರಸ್ತೆಗಳ ಸಮಸ್ಯೆಯನ್ನು ಹೋಗಲಾಡಿಸಲು ತುರ್ತು ರಸ್ತೆ ಡಾಂಬರು ಕಾರ್ಯವನ್ನು ಕೈಗೊಂಡು ಹಣವನ್ನು ತ್ವರಿತವಾಗಿ ಖರ್ಚು ಮಾಡಲಾಯಿತಾದರೂ ರಸ್ತೆಗಳು ಈಗ ಯಥಾ ದುಸ್ಥಿತಿಯಲ್ಲಿಯ ಇವೆ.ಚೆಲ್ಲಾಪಿಲ್ಲಿಯಾಗಿ ಹರಡಿರುವ ಜಲ್ಲಿ ಕಲ್ಲುಗಳ ಜತೆಗೆ ರಸ್ತೆಗಳು ಗುಂಡಿಗಳಿಂದ ತುಂಬಿ ತುಳುಕಾಡುತ್ತಿವೆ. ಡಾಂಬರು ಕಿತ್ತು ಬಂದು ಹಿಂದೆ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲಾಯಿತೇ ಎಂಬ ಅನುಮಾನ ಕಾಡುತ್ತದೆ. ಪ್ರಮುಖವಾಗಿ ಕಳೆದೊಂದು ವಾರದಲ್ಲಿ ಸುಮಾರು 5 ವಾಹನಗಳು ಸಂಚರಿಸುವ ಸಂದರ್ಭದಲ್ಲಿ ಅವುಗಳು ಚಕ್ರಗಳು ಪ್ರಮುಖ ಡಾಂಬರು ರಸ್ತೆಗಳಲ್ಲಿಯೇ ಸಿಲುಕಿಕೊಂಡಿದ್ದು ಸಂಚಾರ ವ್ಯತ್ಯಯದಿಂದ ಜನರು ತೀವ್ರ ತೊಂದರೆ ಅನುಭವಿಸಬೇಕಾಯಿತು.  
ಕಳೆದ ನಾಲ್ಕೈದು ವರ್ಷಗಳಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಹೇಳುವಂತೆಯೇ ಇಲ್ಲ. ಈಗ ಅವುಗಳ ಕುರುಹುಗಳು ಕಾಣಿಸುವುದಿಲ್ಲ. ಕೇವಲ ನಗರಸಭೆ ಕಡತಗಳಲ್ಲಿ ಮಾತ್ರ ಕಾಮಗಾರಿಗೆ ಬಂದ ಅನುದಾನ, ಖರ್ಚಿನ ವಿವರಗಳು ಸಿಗುತ್ತವೆ. ಇಷ್ಟೇ ಅಲ್ಲಾ, ಬೀದಿ ದೀಪಗಳಿಗೂ ಕಳಪೆ ಗುಣಮಟ್ಟದ ಸ್ಪರ್ಶವನ್ನು ನೀಡಲಾಗಿದೆ. ಹೈಮಾಸ್ಟ್ ದೀಪಗಳು ಮತ್ತು ಸಾಕಷ್ಟು ಬೀದಿ ದೀಪಗಳು ಉರಿಯುತ್ತಲೇ ಇಲ್ಲ. ಕೆಲ ದಿನಗಳು ಮಾತ್ರ ಕಾರ್ಯ ನಿರ್ವಹಿಸಿ ಕೆಟ್ಟು ಹೋಗುತ್ತಿವೆ. ಕೇವಲ ದುರಸ್ತಿ ನಡೆಯುತ್ತಿದೆ.
ಸಾರ್ವಜನಿಕರ ದೂರು: ನಗರದ ಪ್ರಮುಖ ವಾರ್ಡುಗಳಲ್ಲಿ ಇತ್ತೀಚೆಗೆ ಶಾಸಕ ಸುಧಾಕರ್ ನಗರ ಪ್ರದಕ್ಷಿಣೆ ಕೈಗೊಂಡ ಸಂದರ್ಭದಲ್ಲಿ ಬಹುತೇಕ ಮಂದಿ ನಗರದಲ್ಲಿ ನಡೆದಿರುವ ಕಳಪೆ ಕಾಮಗಾರಿಗಳ ಬಗ್ಗೆಯೇ ದೂರನ್ನು ಸಲ್ಲಿಸಿದ್ದರು. ಕಳಪೆ ಗುಣಮಟ್ಟದಲ್ಲಿ ನಿರ್ಮಾಣವಾಗಿರುವ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ ಎಂದು ಕಿಡಿಕಾರಿದ್ದರು.ಅಲ್ಲದೇ ಜಿಲ್ಲೆಗೆ ಸಚಿವರು ಬಂದಾಗಲೆಲ್ಲಾ ಅವರ ಮುಂದೆ ಜನರು ಇದೇ ರಾಗ ಹಾಡುತ್ತಾರೆ. ಇನ್ನು ಜಿಲ್ಲಾಧಿಕಾರಿಗಳ ಕಿವಿಯಲ್ಲೂ ಊದುತ್ತಾರೆ. ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಸರ್ವಾಂಗೀಣ ಪ್ರಗತಿ ಕಾಣಬೇಕು. ಕೇವಲ ಅನುದಾನವನ್ನು ಖರ್ಚು ಮಾಡಿದರೆ ಸಾಲದು, ಕೆಲಸ ಒಳ್ಳೆಯ ಗುಣಮಟ್ಟದಿಂದ ಕೂಡಿರಬೇಕೆನ್ನುವ ಜನರು, ಮುಂದಿನ ದಿನಗಳಲ್ಲಿ ಕಳಪೆ ಕಾಮಗಾರಿಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement