ಬೇಡಿಕೆಗಳಿಗೆ ಆಗ್ರಹಿಸಿ ಕಟ್ಟಡ ಕಾರ್ಮಿಕರ ಪ್ರತಿಭಟನೆ
ಕ.ಪ್ರ.ವಾರ್ತೆ ಕೋಲಾರ ಅ. 3
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಪೂರ್ಣಾವಧಿಯಾಗಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಇ.ಓ ರವರನ್ನು ನೇಮಕ ಮಾಡಬೇಕು. ಜಿಲ್ಲಾ ಮಟ್ಟದಲ್ಲಿ ಕಾರ್ಮಿಕರ ನೋಂದಣಿ, ನವೀಕರಣ, ಸೌಲಭ್ಯದ ಅರ್ಜಿಗಳನ್ನು ಸ್ವೀಕರಿಸಲು ಸೌಲಭ್ಯದ ಹಣ ವಿತರಿಸಲು ಅಗತ್ಯ ಸಿಬ್ಬಂದಿ ಮತ್ತು ಸುಸ್ಥಿರ ಕಚೇರಿ ವ್ಯವಸ್ಥೆ ಮಾಡಿ ಸೌಲಭ್ಯಗಳು ತ್ವರಿತವಾಗಿ ಕಾರ್ಮಿಕರಿಗೆ ಸಿಗುವಂತೆ ಮಾಡಬೇಕು, ಪರಿಷ್ಕರಿಸಿದ ಕಟ್ಟಡ ಕಾರ್ಮಿಕರ ಎಲ್ಲಾ ಸೌಲಭ್ಯಗಳನ್ನು ತಕ್ಷಣವೇ ಜಾರಿಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕರ್ನಾಟಕ ರಾಜ್ಯ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಹೆಚ್ಚು ಸದಸ್ಯತ್ವ ಹೊಂದಿರುವ ಸಿ.ಐ.ಟಿ.ಯು ಪ್ರಾತಿನಿಧ್ಯ ನೀಡಬೇಕು. ನರ ಮತ್ತು ಮೆದುಳು ಹಾಗೂ ಹೃದಯ ಸಂಬಂಧಿಸಿದ ಕಾಯಿಲೆಗಳು ಸೇರಿದಂತೆ ಹೊರ ರೋಗಗಳಾಗಿ ಮನೆಯಲ್ಲೇ ದೀರ್ಘಾವಧಿ ಚಿಕಿತ್ಸ್ಸೆಗೆ ಒಳಗಾಗುವ ಕಾರ್ಮಿಕರಿಗೂ ಸೌಲಭ್ಯ ಹಣವನ್ನು ವಿಸ್ತರಿಸಬೇಕೆಂದರು. ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯು ಜಿಲ್ಲಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನೇನಹಳ್ಳಿ ಯಲ್ಲಪ್ಪ, ಮುಖಂಡರಾದ ಹೊಗರಿ ನಾಗರಾಜಪ್ಪ, ಗಡ್ಡಂ ಮುನಿರಾಜು, ಎಂ.ಭೀಮರಾಜ್, ಕೆ.ಎನ್. ಪ್ರಸನ್ನ, ಕಲಿಮೂರ್ತಿ ಮತ್ತಿತರರು ವಹಿಸಿದ್ದರು.