'ರಾಜಿ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥವಾಗಲಿ'
ಕೆಜಿಎಫ್: ದೇಶದ ನ್ಯಾಯಾಲಯಗಳಲ್ಲಿ ಕೌಟಂಬಿಕ ಕಲಹ ಸೇರಿದಂತೆ ಇತರೆ ವಿವಿಧ ಒಟ್ಟು 14 ಲಕ್ಷ ಪ್ರಕರಣಗಳಿದ್ದು, ಸಣ್ಣಪುಟ್ಟ ವಿಷಯಗಳಿಗೆ ಸಂಬಂಧಿಸಿ ಪೊಲೀಸ್ ಠಾಣೆಗಳು ಮತ್ತು ನ್ಯಾಯಾಲಯಗಳ ಮೆಟ್ಟಿಲು ಹತ್ತುವ ನಾಗರಿಕರಿಗೆ ಪೊಲೀಸ್ ಅಧಿಕಾರಿಗಳು ಹಾಗೂ ವಕೀಲರು ರಾಜಿ ಸಂದಾನ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಬೇಕು ಎಂದು ಕೋಲಾರ ಜಿಲ್ಲಾ ಹಿರಿಯ ನ್ಯಾಯಾಧೀಶರಾದ ರೇಣುಕಾಪ್ರಸಾದ್ ಅವರು ತಿಳಿಸಿದರು.
ಕೆಜಿಎಫ್ ಸಿವಿಲ್ ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಅಧಿಕಾರಿಗಳ ಹಾಗೂ ವಕೀಲರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೋಲಾರ ಜಿಲ್ಲಾ ಮತ್ತು ತಾಲೂಕು ಮಟ್ಟದ ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಮುಂಬರುವ ನವೆಂಬರ್ 23 ರಂದು ನಡೆಯಲಿರುವ ಲೋಕಾದಲತ್ ಕಾರ್ಯಕ್ರಮ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಕುಟುಂಬಕ್ಕೆ ಸಂಬಂಧಿಸಿದ ಸಣ್ಣಪುಟ್ಟ ಪ್ರಕರಣಗಳನ್ನು ಪೊಲೀಸರು ಮತ್ತು ವಕೀಲರು ಸಾರ್ವಜನಿಕರಿಗೆ ರಾಜಿ ಸಂದಾನದ ಮೂಲಕ ಸಮಸ್ಯೆಬಗೆಹರಿಸುವ ಪ್ರಯತ್ನಕ್ಕೆ ಮುಂದಾಗಲು ಸಲಹೆ ನೀಡಿದರು.
ಇದೇ ವೇಳೆ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಮತ್ತು ವಕೀಲರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಕೆಜಿಎಫ್ ಸಿವಿಲ್ ನ್ಯಾಯಾಧೀಶರಾದ ಮಮದಾಪುರ, ಆರ್.ಪಿ. ನಂದೀಶ್, ಬಸವರಾಜಪ್ಪ ವಕೀಲರಾದ ಎಸ್.ಎನ್. ರಾಜಗೋಪಾಲಗೌಡ, ಶ್ರೀನಿವಾಸ್, ರಾಜನ್, ಪೊಲೀಸ್ ಉಪರಕ್ಷಣಾಧಿಕಾರಿ ವಿವೇಕನಂದ, ವೃತ್ತನಿರೀಕ್ಷಕ ಲಕ್ಷ್ಮೀನಾರಾಯಣ, ಪಿಎಸ್ಐಗಳಾದ ಎಲ್. ಆಂಜಪ್ಪ, ಮಾರ್ಕೊಂಡಪ್ಪ, ಸುರೇಶ್ ಇದ್ದರು.