ವಾಲ್ಮೀಕಿ ಜಯಂತಿ: ಪೂರ್ವಭಾವಿ ಸಭೆ
ಚಿಂತಾಮಣಿ: ವಾಲ್ಮೀಕಿ ಜಯಂತಿ ಆಚರಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಹಕರಿಸಬೇಕೆಂದು ತಾಲೂಕು ದಂಡಾಧಿಕಾರಿಗಳಾದ ಎಂ.ಎನ್. ಮಂಜುನಾಥ್ ಕರೆ ನೀಡಿದರು.
ಪಟ್ಟಣದ ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಹಾಋಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ವಿವಿಧ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಸ್ಥಬ್ದ ಚಿತ್ರಗಳನ್ನು ತಯಾರಿಸಿ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕೈ ಜೋಡಿಸಬೇಕೆಂದು ಮನವಿ ಮಾಡಿದರು.
29 ರಂದು ವಾಲ್ಮೀಕಿ ಜಯಂತಿ ದಿನ ಪಟ್ಟಣದ ಬಾಗೇಪಲ್ಲಿ ವೃತ್ತಕ್ಕೆ ವಾಲ್ಮೀಕಿ ವೃತ್ತ ಎಂದು ನಾಮಕರಣ ಮಾಡಲು ಜಿಲ್ಲಾಧಿಕಾರಿಗಳು ಈಗಾಗಲೇ ಅನುಮೋದನೆ ನೀಡಿದ್ದಾರೆ. ನಗರಸಭೆ ಸದಸ್ಯರ ಅನುಮೋದನೆ ಮೇರೆಗೆ ಮತ್ತು ಮಾಜಿ ಶಾಸಕ ಎಂ.ಸಿ. ಸುಧಾಕರ್ ಪರಿಶ್ರಮದಿಂದ ವೃತ್ತಕ್ಕೆ ವಾಲ್ಮೀಕಿ ಜಯಂತಿ ದಿನ ನಾಮಕರಣ ಮಾಡಲು ಸಿದ್ಧತೆ ನಡೆಯುತ್ತಿದೆ ಎಂದರು.
ಶಾಸಕ ಜೆ.ಕೆ. ಕೃಷ್ಣಾರೆಡ್ಡಿ, ವಾಲ್ಮೀಕಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಅಧಿಕಾರಿಗಳು ಹಾಗೂ ನಾಗರಿಕರು ಸಹಕರಿಸಬೇಕೆಂದು ಮನವಿ ಮಾಡಿದರು. ವೃತ್ತ ನಿರೀಕ್ಷಕ ನಂಜಪ್ಪ, ಬಿ.ಇ.ಓ ರಂಗಯ್ಯ, ಸಮಾಜ ಕಲ್ಯಾಣ ಇಲಾಖೆಯ ಮೊಹಮದ್ ಷಫೀಕ್,ನಗರಸಭಾ ಸದಸ್ಯರಾದ ಡಿ. ಸಾದಪ್ಪ, ಶಿವಣ್ಣ ಸುಜಾತಮ್ಮ, ಪ್ರಕಾಶ್, ಸಂಪಂಗಿ ರಾಮಯ್ಯ, ಲಕ್ಷ್ಮಿನಾರಾಯಣ, ಕವ್ವಾಲಿ ವೆಂಕಟರವಣಪ್ಪ, ಅಗ್ರಹಾರ ಮುರಳಿ, ಗೋವಿಂದ್ ಭಾಗವಹಿಸಿದ್ದರು.