ಹಲವು ಬೇಡಿಕೆಗಳಿಗೆ ಆಗ್ರಹಿಸಿ ಕಟ್ಟಡ ಕಾರ್ಮಿಕರ ಪ್ರತಿಭಟನೆ
ಬಂಗಾರಪೇಟೆ: ಕಟ್ಟಡ ನಿರ್ಮಾಣ ಕಾರ್ಮಿಕರ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಟ್ಟಡ ಕಾರ್ಮಿಕರು ಗುರುವಾರ ಪಟ್ಟಣದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ಕೇಂದ್ರ ಸರ್ಕಾರ ಕಾರ್ಮಿಕರಿಗಾಗಿ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಅವು ಕಾರ್ಯರೂಪಕ್ಕೆ ಬಂದಿಲ್ಲ ಕೂಡಲೆ ರಾಜ್ಯ ಸರ್ಕಾರ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಕಲ್ಯಾಣ ಮಂಡಳಿಗೆ ಪೂರ್ಣಾವಧಿ ಕಾರ್ಯನಿವಾಂಹಕ ಅಧಿಕಾರಿ ರವರನ್ನು ನೇಮಿಸಿ ನಿರಂತರವಾಗಿ ಕಲ್ಯಾಣ ಮಂಡಳಿಗಳ ಸಭೆಯನ್ನು ಹಮ್ಮಿಕೊಳ್ಳಬೇಕು, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಮಿಕರ ನೋಂದಣಿ,ನವೀಕರಣ ಸೌಲಭ್ಯಗಳ ಅರ್ಜಿ ಸ್ವೀಕರಿಸಲು ಕಚೇರಿ ಪ್ರಾರಂಭಿಸಬೇಕು, 1.2.13ರಿಂದ ಕಲ್ಯಾಣ ಮಂಡಳಿ ತೀರ್ಮಾನದ ಅಧಿಸೂಚನೆ ಪರಿಷ್ಕರಿಸಿದ ಕಟ್ಟಡ ಕಾರ್ಮಿಕರಿಗೆ ಎಲ್ಲಾ ಸೌಲಭ್ಯಗಳನ್ನು ತಕ್ಷಣವೇ ಜಾರಿಯಾಗಬೇಕು, ಕಾರ್ಮಿಕರ ಕಷ್ಟಕಾಲಕ್ಕೆ ನೆರವಾಗಲು ಇರುವ ಕಲ್ಯಾಣ ನಿಧಿಯನ್ನು ಕಲ್ಯಾಣ ಮಂಟಪಗಳನ್ನು ಕಟ್ಟಲು ಬಳಸಬಾರದು, ಕಟ್ಟಡ ಕಾರ್ಮಿಕರ ಕೌಶಲ್ಯತೆಯನ್ನು ಹೆಚ್ಚಿಸಲು ಹೈದರಾಬಾದ್ ಮಾದರಿಯಲ್ಲಿ ಬೆಂಗಳೂರಿನಲ್ಲಿ ಕೌಶಲ್ಯ ತರಬೇತಿ ಕೇಂದ್ರವನ್ನು ಪ್ರಾರಂಬಿಸಬೇಕು, ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ ಪಿಂಚಣಿ ಮೊತ್ತವನ್ನು ಕನಿಷ್ಠ ಪಕ್ಷ ಒಂದುಸಾವಿರಕ್ಕೆ ಹೆಚ್ಚಳ ಮಾಡಬೇಕು, ಎಲ್ಲಾ ಕಾರ್ಮಿಕರಿಗೆ ತಕ್ಷಣವೇ ರಾಷ್ಟ್ರೀಯ ಸ್ವಸ್ಥಾನ ಭೀಮಾ ಯೋಜನೆಗೆ ಒಳಪಡಿಸಿ ಅವರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಬೇಕು, ಸರ್ಕಾರದ ಸಹಾಯದೊಂದಿಗೆ ಕಟ್ಟಡ ಕಾರ್ಮಿಕರಿಗೆ ವಸತಿ ಯೋಜನೆಯನ್ನು ಜಾರಿಗೊಳಿಸಬೇಕು ಮತ್ತಿತರೆ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ಮಾಡಿದರು. ಪ್ರತಿಭಟನೆಯಲ್ಲಿ ಕಾರ್ಮಿಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ಚಂದ್ರಪ್ಪ, ಮಾದಮಂಗಲ ಶ್ರೀನಿವಾಸ್, ರಾಮ,ನಾಗಮ್ಮ, ವೆಂಕಟರಾಜು, ಹನುಮಪ್ಪ ಮತ್ತಿತರರು ಇದ್ದರು.