ಕಾಲೇಜಿಗೆ ಗೈರು: ಕೇಳಿದ್ದಕ್ಕೆ ಮನೆ ಬಿಟ್ಟು ಹೋದ ವಿದ್ಯಾರ್ಥಿ
ಕೆಜಿಎಫ್: ಕಾಲೇಜಿಗೆ ಗೈರುಹಾಜರಾಗುತ್ತಿರುವ ಬಗ್ಗೆ ವಿದ್ಯಾರ್ಥಿಯನ್ನು ಪ್ರಶ್ನಿಸಿದ್ದಕ್ಕೆ ಮನೆ ಬಿಟ್ಟು ಹೋಗಿರುವ ಬಗ್ಗೆ ತಡವಾಗಿ ದೂರು ದಾಖಲಾಗಿದೆ.
ಬೆಮೆಲ್ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ವಿ. ನಗರ ನಿವಾಸಿ ನೀಲಮೇಗನ್ ಎಂಬುವರ ಮಗ ಅಮರನಾಥ್ ಸ್ಥಳೀಯ ಕಾಲೇಜುವೊಂದರಲ್ಲಿ 2ನೇ ಬಿ.ಕಾಂ ವ್ಯಾಸಾಂಗ ಮಾಡುತ್ತಿದ್ದು ಕಾಲೇಜಿನ ತರಗತಿಗಳಿಗೆ ಹಾಗೂ ಪರೀಕ್ಷೆಗೆ ಗೈರುಹಾಜರಾಗುತ್ತಿರುವ ಬಗ್ಗೆ ತಂದೆ ನೀಲಮೇಗನ್ ಅವರ ಗಮನಕ್ಕೆ ಬಂದಿತ್ತು.
ಈ ಬಗ್ಗೆ ಮಗ ಅಮರನಾಥ್ನನ್ನು ಪ್ರಶ್ನಿಸಿದ್ದರು. ಅಷ್ಟಕ್ಕೆ ಒಂದು ಬ್ಯಾಗನ್ನು ತನ್ನ ಸ್ನೇಹಿತನಿಗೆ ಕೊಟ್ಟು ಬರುವುದಾಗಿ ತಿಳಿಸಿ ಕಳೆದ ತಿಂಗಳು 29 ರಂದು ಮನೆಬಿಟ್ಟು ಹೋದವನು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ. ತನ್ನ ಸ್ನೇಹಿತರ, ಪರಿಚಯಸ್ಥರ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಿದರೂ ಪತ್ತೆಯಾಗದ ಕಾರಣ ತಮ್ಮ ಮಗನನ್ನು ಪತ್ತೆ ಮಾಡಿ ಕೊಡುವಂತೆ ನೀಲಮೇಗನ್ ಬೆಮೆಲ್ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇಂದು ಪ್ರತಿಭಟನೆ
ಚಿಂತಾಮಣಿ: ಹಿಂದು ಸಮಾಜ ಜಾತಿ ಪದ್ಧತಿ ಬಗ್ಗೆ ಸಾಹಿತಿ ಯು.ಆರ್. ಅನಂತಮೂರ್ತಿ ವಿತಂಡ ವಾದ ಮಂಡಿಸುತ್ತಾ ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದರಿಂದ ಅವರನ್ನು ಕೂಡಲೇ ಗಡಿಪಾರು ಮಾಡುವಂತೆ ಆಗ್ರಹಿಸಿ ಶನಿವಾರ ತಾಲೂಕು ಕಚೇರಿ ಮುಂಭಾಗದಲ್ಲಿ ಬ್ರಾಹ್ಮಣರ ಸಂಘ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಹೇಳಿದೆ. ಪಟ್ಟಣದ ಬ್ರಾಹ್ಮಣರ ಯುವಕರ ಟ್ರಸ್ಟ್ನಿಂದ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದೆಂದು ಅಧ್ಯಕ್ಷ ಉಮಾಶಂಕರ್ ತಿಳಿಸಿದ್ದಾರೆ.
ಸಂಘಕ್ಕೆ ಆಯ್ಕೆ
ಚಿಕ್ಕಬಳ್ಳಾಪುರ: ತಾಲೂಕಿನ ಕೊಳವನಹಳ್ಳಿ ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ಎಂ. ರಾಮಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೆ.ಎಸ್. ದ್ಯಾವಪ್ಪ, ಎಂ. ಶಿವಕುಮಾರ್, ಕೆ.ಎಂ. ನಾರಾಯಣಪ್ಪ, ಪಿ. ಕೃಷ್ಣಪ್ಪ, ಪಾರ್ವತಮ್ಮ, ಟಿ.ಸಿ. ಹನುಮಪ್ಪ ಮತ್ತು ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕರು ಮತ್ತು ನಂದಿಯ ತಾಂತ್ರಿಕ ಸೇವಾ ಕೇಂದ್ರದ ರೇಷ್ಮೆ ಕೃಷಿ ವಿಸ್ತರಣಾಧಿಕಾರಿಗಳು ನಿರ್ದೇಶಕರಾಗಿದ್ದಾರೆ ಎಂದು ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಚ್. ಕೃಷ್ಣಪ್ಪ ತಿಳಿಸಿದ್ದಾರೆ.