ಗಂಧದ ಮರ ಸಾಗಿಸುವಲ್ಲಿ ಕಳ್ಳರ ವಿಫಲ ಯತ್ನ
ಕೆಜಿಎಫ್: ಕೆಜಿಎಫ್ನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯ ಆವರಣದಲ್ಲಿರುವ ಗಂಧದ ಮರವನ್ನು ರಾತ್ರಿ ಕಳ್ಳರು ಕಟಾವು ಮಾಡಿ ಸಾಗಿಸುವಲ್ಲಿ ವಿಫಲಯತ್ನ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣಾ ಸಮೀಪವೇ ಇರುವ ಎಸ್ಬಿಎಂ ಬ್ಯಾಂಕ್ನ ಹಿಂಭಾಗದ ಗಂಧದ ಮರವನ್ನು ರಾತ್ರಿ ಕಳ್ಳರು ಕಟಾವು ಮಾಡಿ ಮರವನ್ನು ಸಾಗಿಸುವಾಗ ಕಾವಲುಗಾರ ಅಟ್ಟಿಸಿಕೊಂಡು ಹೋಗಿದ್ದು ಅವರನ್ನು ಕಂಡು ಮರವನ್ನು ಅಲ್ಲೇ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ. ನಗರದ ಹೃದಯಭಾಗದಲ್ಲಿರುವ ಎಸ್ಬಿಎಂ ಬ್ಯಾಂಕ್ ಶಾಖೆಯಲ್ಲಿ ದಿನನಿತ್ಯ ಕೋಟ್ಯಂತರ ರು. ವಹಿವಾಟು ನಡೆಯುತ್ತಿದ್ದು ಬ್ಯಾಂಕ್ನ ಕಾಂಪೌಂಡ್ನ್ನು ನಿರ್ಮಿಸದೆ ಹಾಗೆ ಬಿಟ್ಟಿದ್ದರಿಂದ ಕಳ್ಳರು ಈ ಕೃತ್ಯವೆಸಗಿದ್ದಾರೆ.
2011ರಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುವಾಗ ಎಸ್ಬಿಎಂ ಬ್ಯಾಂಕ್ ಸೇರಿದಂತೆ ಅಕ್ಕಪಕ್ಕದ ಇತರೆ ಸರ್ಕಾರಿ ಇಲಾಖೆಯ ಕಾಂಪೌಂಡನ್ನು ತೆರವುಗೊಳಿಸಲಾಗಿತ್ತು. ದೂರವಾಣಿ ಕೇಂದ್ರ, ಅಂಚೆ ಕಚೇರಿ ಎಸ್ಐಸಿ ಕಚೇರಿಯ ಕಾಂಪೌಂಡನ್ನು ನಿರ್ಮಿಸಿಕೊಂಡಿದ್ದರು. ಆದರೆ ಅಂದಿನಿಂದ ಇಂದಿನ ವರೆಗೆ ಎಸ್ಬಿಎಂ ಆಡಳಿತ ಮಂಡಳಿ ಬ್ಯಾಂಕ್ನ ಕಾಂಪೌಂಡನ್ನು ನಿರ್ಮಿಸದೆ ನಿರ್ಲಕ್ಷ ವಹಿಸಿದ್ದರು. ಕೋಟ್ಯಂತರ ರು. ಈ ಬ್ಯಾಂಕ್ನಲ್ಲಿ ಪ್ರತಿದಿನ ವಹಿವಾಟು ನಡೆಯುತ್ತಿದ್ದರೂ ಭದ್ರತಾ ದೃಷ್ಟಿಯಿಂದ ಎಚ್ಚರವಹಿಸಿ ಕಾಂಪೌಂಡ್ ನಿರ್ಮಿಸಲು ಅಧಿಕಾರಿಗಳು ವಿಫಲಾಗಿದ್ದು ಬ್ಯಾಂಕ್ನ ಹಿಂಭಾಗ ದಾರಿ ಹೋಕರು ಮೂತ್ರ ವಿಸರ್ಜನೆ ಸ್ಥಳವಾಗಿ ಮಾರ್ಪಟ್ಟಿದೆ ಎಂದು ಬ್ಯಾಂಕ್ ಗ್ರಾಹಕರು ಮತ್ತು ಸಾರ್ವಜನಿಕರು ಆರೋಪಿಸಿದರು.
ಬ್ಯಾಕ್ನ ವ್ಯವಸ್ಥಾಪಕ ಹಾಗೂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ರಾಬರ್ಟ್ಸನ್ಪೇಟೆ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.