ಜಿಲ್ಲಾಡಳಿತ ಭವನ ವೀಕ್ಷಿಸಿದ ಕೋಲಾರ ಡಿಸಿ
ಚಿಕ್ಕಬಳ್ಳಾಪುರ: ಕೋಲಾರ ಜಿಲ್ಲಾಧಿಕಾರಿ ಡಿ.ಕೆ. ರವಿ ಮಹಾಲಯ ಅಮಾವಾಸ್ಯೆಯ ರಜಾ ದಿನವಾದ ಶುಕ್ರವಾರ ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಿ, ನಗರದ ಹೊರ ವಲಯದಲ್ಲಿ (ಅಣಕನೂರು ಗ್ರಾಮದ ಬಳಿ) ಸುಮಾರು ರು. 22 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಜಿಲ್ಲಾಡಳಿತ ಭವನವನ್ನು ವೀಕ್ಷಿಸಿದರು.
ಕೋಲಾರ ಜಿಲ್ಲೆಯಲ್ಲಿ ಇತರೆ ಜಿಲ್ಲೆಗಳಿಗೆ ಮಾದರಿಯಾಗಿ ನೂತನ ಹೈಟೆಕ್ ಜಿಲ್ಲಾಡಳಿತ ಭವನ ನಿರ್ಮಿಸಲು ಕೋಲಾರ ಜಿಲ್ಲಾಡಳಿತ ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಯಾವ ರೀತಿ ಜಿಲ್ಲಾಡಳಿತ ಭವನ ನಿರ್ಮಾಣವಾಗಿದೆ ಎಂಬ ವಿಷಯಗಳನ್ನು ತಿಳಿದುಕೊಳ್ಳಲು ಅವರು ಖುದ್ದು ಭೇಟಿ ಕೊಟ್ಟು ವೀಕ್ಷಿಸಿದರು.
ಸಂಪರ್ಕ ವ್ಯವಸ್ಥೆ, ನೀರಿನ ವ್ಯವಸ್ಥೆ, ಪಾರ್ಕಿಂಗ್, ಕಟ್ಟಡ ನಿರ್ಮಾಣದಲ್ಲಿ ವಿಶೇಷತೆ, ಬಳಸಿದ ಉಪಕರಣಗಳು ಸೇರಿದಂತೆ ನಾನಾ ವಿಷಯಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡರು. ಅಲ್ಲದೇ ಇಲ್ಲಿನ ಪ್ರಮುಖ ಅಂಶಗಳನ್ನು ಗುರುತಿಸಿಕೊಳ್ಳುವುದರ ಜತೆಗೆ ತಮ್ಮ ಮನದಲ್ಲಿ ಮೂಡಿದ ಅನುಮಾನಗಳನ್ನು ಬಗೆಹರಿಸಿಕೊಂಡರು. ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನಕ್ಕಿಂತಲೂ ಭವ್ಯವಾಗಿ ಕೋಲಾರದಲ್ಲಿ ಜಿಲ್ಲಾಡಳಿತ ಭವನವನ್ನು ನಿರ್ಮಿಸುವ ಆಶಯವನ್ನು ವ್ಯಕ್ತಪಡಿಸಿದರು.
ಕೊನೆಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನವನ್ನು ಸುಂದರವಾಗಿ ನಿರ್ಮಿಸಲಾಗಿದೆ ಎಂದಷ್ಟೇ ತಿಳಿಸಿದರು. ಈ ಸಂದರ್ಭದಲ್ಲಿ ಇಇ ಮುನಿ ಆಂಜಿನಪ್ಪ, ಎಇಇಗಳಾದ ಹಿಮಚಲ್ ಮಠ್, ಶಂಕರ್ ಉಪಸ್ಥಿತರಿದ್ದರು.
ಕೋಲಾರ ಜಿಲ್ಲೆ ರಚನೆಯಾಗಿ ದಶಕಗಳೇ ಕಳೆದಿದ್ದರೂ ಸುಸಜ್ಜಿತ ಜಿಲ್ಲಾಡಳಿತ ಭವನದ ಕೊರತೆ ಎದ್ದು ಕಾಡುತ್ತಿತ್ತು. ಇದೀಗ ನೂತನ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಸರ್ಕಾರ ರು. 25 ಕೋಟಿ ಮಂಜೂರು ಮಾಡಿದೆ. ಅಲ್ಲದೇ ಭವನಕ್ಕೆ ಕೋಲಾರ ಜಿಲ್ಲಾ ಕೇಂದ್ರ ಹೊರ ವಲಯದ ಎನ್.ಹೆಚ್.7 ರಲ್ಲಿ ಬರುವ ಕುಂಬಾರ್ಲಹಳ್ಳಿ ಸಮೀಪ 8 ಎಕರೆ ಜಮೀನನ್ನು ಗುರುತಿಸಲಾಗಿದೆ. ಈಗಾಗಲೇ ಉಡುಪಿ, ರಾಮನಗರ, ಚಿತ್ರದುರ್ಗ, ಗದಗ ಇದೀಗ ಚಿಕ್ಕಬಳ್ಳಾಪುರ ಸೇರಿದಂತೆ ಏಳೆಂಟು ಜಿಲ್ಲೆಗಳಿಗೆ ಭೇಟಿ ಕೊಟ್ಟು ಅಲ್ಲಿ ನಿರ್ಮಿಸಲಾಗಿರುವ ಜಿಲ್ಲಾಡಳಿತ ಭವನಗಳನ್ನು ವೀಕ್ಷಿಸಲಾಗಿದೆ. ಈ ಮೂಲಕ ಕೋಲಾರ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ರೂಪುರೇಷೆಗಳನ್ನು ನಿರ್ಧರಿಸಲು ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.