ಜಿಲ್ಲಾಡಳಿತ ಭವನಕ್ಕೆ ಕಚೇರಿಗಳ ಶಿಫ್ಟ್ ಚರ್ಚೆ
ಎನ್. ವೆಂಕಟೇಶ್
ಚಿಕ್ಕಬಳ್ಳಾಪುರ: ಸುಮಾರು ರು. 22 ಕೋಟಿ ವೆಚ್ಚದಲ್ಲಿ ಭವ್ಯವಾಗಿ ನಿರ್ಮಾಣಗೊಂಡಿರುವ ನೂತನ ಜಿಲ್ಲಾಡಳಿತ ಭವನ ಇದೀಗ ಜಿಲ್ಲಾ ಮಟ್ಟದ ಕಚೇರಿಗಳನ್ನು ಕೈ ಬೀಸಿ ಕರೆಯುತ್ತಿದ್ದು ಭವನದಲ್ಲಿ ಯಾವ್ಯಾವ ಇಲಾಖೆಯ ಕಚೇರಿಗಳಿಗೆ ಯಾವ್ಯಾವ ಕೊಠಡಿಗಳನ್ನು ನೀಡಬೇಕೆನ್ನುವುದರ ಬಗ್ಗೆ ಚರ್ಚೆಯಾಗುತ್ತಿದೆ.
2007 ರಲ್ಲಿ ಆ.23 ರಂದು ಅವಿಭಜಿತ ಕೋಲಾರ ಜಿಲ್ಲೆಯಿಂದ ಪ್ರತ್ಯೇಕಗೊಂಡು ಚಿಕ್ಕಬಳ್ಳಾಪುರ ಜಿಲ್ಲೆ ರಚನೆಯಾದ ನಂತರ ಜಿಲ್ಲಾಧಿಕಾರಿ, ಜಿಪಂ ಕಚೇರಿ ಮತ್ತು ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿಗಳನ್ನು ಸ್ಥಾಪನೆ ಮಾಡಲಾಯಿತು. ಜಿಲ್ಲಾಧಿಕಾರಿ ಮತ್ತು ಜಿಪಂ ಕಚೇರಿ ತಾಲೂಕಿನ ನಂದಿ ಕ್ರಾಸ್ ಬಳಿ ಇರುವ ಚದಲಪುರ ರೇಷ್ಮೆ ಬಿತ್ತನೆ ಕೋಠಿ ಕೇಂದ್ರದಲ್ಲಿ ಸ್ಥಾಪನೆಗೊಂಡರೆ, ಜಿಲ್ಲಾ ಮಟ್ಟದ ಸುಮಾರು 30 ಕ್ಕೂ ಹೆಚ್ಚು ಸರ್ಕಾರಿ ಕಚೇರಿಗಳು ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರದಲ್ಲಿ ಆ ಮೂಲೆಗೊಂದು ಈ ಮೂಲೆಗೊಂದು ಎನ್ನುವಂತೆ ಖಾಸಗೀ ಕಟ್ಟಡಗಳನ್ನು ಬಾಡಿಗೆಗೆ ಪಡೆದು ಕೆಲಸವನ್ನು ಪ್ರಾರಂಭಿಸಿದವು. ಅಂದಿನಿಂದ ಇಂದಿನವರೆಗೂ ಬಹುತೇಕ ಕಚೇರಿಗಳು ದುಬಾರಿ ಬಾಡಿಗೆಗೆ ನಲುಗುತ್ತಿದ್ದರೆ, ಇನ್ನೂ ಹಲವು ಅಸಮರ್ಪಕ ಜಾಗದ ಹಿನ್ನೆಲೆಯಲ್ಲಿ ಕಿರಿಕಿರಿಯನ್ನು ಸಹಿಸಿಕೊಂಡು ಕೆಲಸ ಮಾಡುತ್ತಿವೆ. ಪ್ರಮುಖವಾಗಿ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಂದ ಕಚೇರಿ ಕೆಲಸದ ನಿಮಿತ್ತ ಚಿಕ್ಕಬಳ್ಳಾಪುರಕ್ಕೆ ಆಗಮಿಸುತ್ತಿರುವ ಜನರು ಸಂಬಂಧಪಟ್ಟ ಕಚೇರಿಗಳು ಎಲ್ಲೆಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎನ್ನುವುದು ತಿಳಿಯದೇ ಅನವಶ್ಯಕವಾಗಿ ಅಲೆದಾಡುತ್ತ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದನ್ನು ಹೋಗಲಾಡಿಸಲು ವಿಳಂಬವಾಗಿಯಾದರೂ ತಾಲೂಕಿನ ಅಣಕನೂರು ಬಳಿ ಜಿಲ್ಲಾಡಳಿತ ಭವನ ಆಕರ್ಷಕವಾಗಿ ನಿರ್ಮಾಣವಾಗಿದ್ದು ಸೆ.20 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟನೆಯ ಮೋಕ್ಷವನ್ನು ನೀಡಿದ್ದಾರೆ.
ನಿರ್ವಹಣೆ ಸಮಸ್ಯೆ: ಜಿಲ್ಲಾಡಳಿತ ಭವನದಲ್ಲಿ ಪ್ರಮುಖವಾಗಿ ಈಗ ಸಮರ್ಪಕ ನಿರ್ವಹಣೆಯ ಸಮಸ್ಯೆ ಕಾಡುತ್ತಿದೆ. ಇಲ್ಲಿ ಸುಮಾರು 120 ಕ್ಕೂ ಹೆಚ್ಚು ಇರುವ ಶೌಚಾಲಯಗಳ ಸ್ವಚ್ಛತೆ ಕಾಪಾಡುವ ಜವಾಬ್ದಾರಿ, ಅಗತ್ಯವಿರುವ ನೀರಿನ ವ್ಯವಸ್ಥೆ, ವಿದ್ಯುತ್ ಶುಲ್ಕ ಪಾವತಿ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಭೌತಿಕ, ಆರ್ಥಿಕ ನಿರ್ವಹಣೆ ವ್ಯವಸ್ಥಿತವಾಗಿ ಹೇಗೆ ನಡೆಯಬೇಕೆನ್ನುವುದು ಇದೀಗ ತಲೆ ನೋವಾಗಿದೆ.
ಪ್ರಮುಖವಾಗಿ ಜಿಲ್ಲಾಡಳಿತ ಭವನದಲ್ಲಿ ಸುಗಮವಾಗಿ ಕಾರ್ಯ ನಿರ್ವಹಿಸಲು ಜರೂರಾಗಿ ಪೀಠೋಪಕರಣಗಳನ್ನು ಒದಗಿಸಬೇಕಾಗಿದೆ. ಈಗಾಗಲೇ 22 ಕೋಟಿ ನುಂಗಿರುವ ಭವನಕ್ಕೆ ಇನ್ನೂ 5 ಕೋಟಿ ಅವಶ್ಯಕವಾಗಿದೆ. ಈ ನಡುವೆ ಮುಖ್ಯಮಂತ್ರಿಗಳು ಭವನಕ್ಕೆ ಹೆಚ್ಚುವರಿ 5 ಕೋಟಿ ನೀಡುವುದಾಗಿ ಘೋಷಣೆ ಮಾಡಿದ್ದು ಸದ್ಯ ಸರ್ಮಪಕ ನಿರ್ವಹಣೆಯ ಲೆಕ್ಕಾಚಾರದಲ್ಲಿ ಜಿಲ್ಲಾಡಳಿತ ತಲೆ ಬಿಸಿ ಮಾಡಿಕೊಳ್ಳುತ್ತಿದೆ.
ಭವನಕ್ಕೆ ವರ್ಗಾವಣೆಯಾಗುವ ಜಿಲ್ಲಾ ಮಟ್ಟದ ಇಲಾಖೆಗಳು ತಮ್ಮ ತಮ್ಮ ಕಚೇರಿಯ ಕೊಠಡಿಯ ನಿರ್ವಹಣೆಯನ್ನು ಸ್ವಯಂ ಮಾಡಿಕೊಳ್ಳಬೇಕು. ವಿದ್ಯುತ್ ಬಿಲ್, ನೀರಿನ ಶುಲ್ಕ ಪಾವತಿ ಮತ್ತು ಸ್ವಚ್ಛತೆಯ ಜವಾಬ್ದಾರಿಯನ್ನು ಹೊರಬೇಕು. ಇದಕ್ಕೆ ಮೊದಲು ಒಪ್ಪಿಕೊಂಡರೆ ಮಾತ್ರ ಇಲಾಖೆಗೆ ಭವನದಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗುತ್ತದೆ ಎನ್ನುವುದನ್ನು ಜಿಲ್ಲಾಧಿಕಾರಿ ವಿಶಾಲ್ ಸ್ಪಷ್ಟಪಡಿಸಿದ್ದಾರೆ. ಇಲ್ಲದಿದ್ದಲ್ಲಿ ಜಿಲ್ಲಾಡಳಿತಕ್ಕೆ ಅಧಿಕ ಹೊರೆ ಬೀಳುತ್ತದೆ. ಭವನದ ನಿರ್ವಹಣೆಯೇ ಕಷ್ಟವಾಗುತ್ತದೆ ಎಂದು ಲೆಕ್ಕಾಚಾರ ಹಾಕಿರುವ ಅವರು, ಇಲ್ಲಿನ ಎಲ್ಲಾ ಶೌಚಾಲಯಗಳ ನಿರ್ವಹಣೆಗೆ ಗುತ್ತಿಗೆಯನ್ನು ನೀಡಲೇ ಬೇಕಾಗಿದೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.
ಇನ್ನೂ ಜಿಲ್ಲಾಡಳಿತ ಭವನದಲ್ಲಿ ಒಳ್ಳೆಯ ಕ್ಯಾಂಟಿನ್ ತೆರೆಯಲು, ಭವನದ ಮುಂಭಾಗದ ಉದ್ಯಾನವನ ನಿರ್ಮಾಣ ಮಾಡಲು, ಸರ್ಕಾರಿ ಕಚೇರಿಗಳಿಂದ ಚಿಕ್ಕಬಳ್ಳಾಪುರ-ಚಿಂತಾಮಣಿ ಮಾರ್ಗದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗದಿರಲು, ಬರುವ ಜನರಿಗೆ ಮೂಲ ಸೌಕರ್ಯ ಒದಗಿಸಲು ಯೋಜನೆ ರೂಪಿಸಲಾಗುತ್ತಿದೆ.
ಕಚೇರಿ ನಿಗದಿಗೆ ಚರ್ಚೆ: ನೂತನ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ, ಜಿಪಂ ಕಚೇರಿ ಜತೆಗೆ ಸುಮಾರು ಜಿಲ್ಲಾ ಮಟ್ಟದ 60 ಕ್ಕೂ ಹೆಚ್ಚು ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಲಿದ್ದು ಪ್ರಸ್ತುತ ಇಲ್ಲಿಗೆ ಬರಲು ಆಯಾ ಇಲಾಖೆಗಳಿಟ್ಟುಕೊಂಡಿರುವ ನಿರೀಕ್ಷೆಗಳ ಬಗ್ಗೆ ತಿಳಿದುಕೊಳ್ಳಲಾಗುತ್ತಿದೆ. ಈ ಬಗ್ಗೆ ಲಿಖಿತವಾಗಿ ಅಭಿಪ್ರಾಯವನ್ನು ನೀಡಲು ಸೂಚನೆ ನೀಡಿದ್ದು ಇದರ ಬಗ್ಗೆ ಚರ್ಚಿಸಲು ಶನಿವಾರ ಅಥವಾ ಸೋಮವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಭೆಯಲ್ಲಿ ಯಾವ್ಯಾವ ಇಲಾಖೆಗಳಿಗೆ ಯಾವ್ಯಾವ ಕೊಠಡಿಗಳನ್ನು ನೀಡಬೇಕು. ಅಧಿಕಾರಿ, ಸಿಬ್ಬಂದಿ ಮತ್ತು ಜನರ ಹಿತದೃಷ್ಟಿಯಿಂದ ಯಾವ ಇಲಾಖೆಗಳು ಭವನದಲ್ಲಿ ಎಲ್ಲಿ ಕಾರ್ಯ ನಿರ್ವಹಿಸಿದರೆ ಒಲಿತು ಸೇರಿದಂತೆ ನಾನಾ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿ ಪೀಠೋಪಕರಣಗಳನ್ನು ಹೊಂದಿ ಕಾರ್ಯ ನಿರ್ವಹಣೆಗೆ ಸಿದ್ಧವಾಗಿದ್ದು ಇನ್ನೂ ಉಳಿದ ಇಲಾಖೆಗಳಿಗೆ ಕೊಠಡಿಗಳನ್ನು ನಿಗದಿಪಡಿಸಬೇಕಾಗಿದೆ. ಈ ಕೆಲಸ ಉದ್ಘಾಟನೆಯಾದ ನಂತರ ಕೆಲ ದಿನಗಳಲ್ಲಿಯೇ ನಡೆಯಬೇಕಾಗಿತ್ತು. ಆದರೆ, ಪಿತೃಪಕ್ಷ ದಿನಗಳು ನಡೆಯುತ್ತಿದ್ದರಿಂದ ಕೊಠಡಿ ನಿಗದಿಪಡಿಸುವ ಸಲುವಾಗಿ ಕೈಗೊಳ್ಳಬೇಕಾಗಿದ್ದ ಸಭೆಯನ್ನು ಮುಂದೂಡಿದ್ದು ಇನ್ನೂ ಮುಂದಿನ ದಿನಗಳಲ್ಲಿ ಭವನಕ್ಕೆ ಕಚೇರಿಗಳ ವರ್ಗಾವಣೆ ತ್ವರಿತವಾಗಿ ನಡೆಯಲಿದೆ ಎಂಬ ಮಾತು ಕೇಳಿ ಬಂದಿದೆ.