ಮರಳು ದಂಧೆ ಮೇಲೆ ದಾಳಿ; 62 ಅಡ್ಡೆಗಳ ಧ್ವಂಸ
ಕೋಲಾರ: ಕಳೆದ ತಿಂಗಳು ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಕ್ರಮ ಮರಳು ದಂಧೆ ತಡೆಯಲು ನೀಡಿದ್ದ ಕಟ್ಟಾದೇಶದಿಂದ ಎಚ್ಚೆತ್ತಿರುವ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಮರಳು ಪಿಲ್ಟರ್ ಅಡ್ಡೆಗಳ ನಾಶಕ್ಕೆ ಧೈರ್ಯ ತೋರಿದೆ.
ಈ ಧೈರ್ಯ ಮತ್ತು ಕೆರೆಗಳ ರಕ್ಷಣೆ ಕಾರ್ಯ ಉತ್ತರನ ಪೌರುಷದಂತಾಗದೆ ಇನ್ನಷ್ಟು ದಿನ ಕಾರ್ಯಾಚರಣೆ ನಡೆಯುವ ಮೂಲಕ ಅಂತರ್ಜಲ ಸಮಸ್ಯೆ ನಿವಾರಿಸಬೇಕೆಂಬುದು ಜನತೆಯ ಒತ್ತಾಸೆಯಾಗಿದೆ.
ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿಗೆ ಸಮಿತಿ ರಚಿಸಲಾಗಿದೆ. ವರದಿ ಜಾರಿಗೆ ಬರುವತನಕ ಅಕ್ರಮ ಮರಳು ಸಾಗಾಣೆ ನಿಲ್ಲಿಸಬೇಕು. ಒಂದು ವೇಳೆ ಲೋಪ ಕಂಡು ಬಂದಲ್ಲಿ ಜಿಲ್ಲಾಧಿಕಾರಿಗಳನ್ನು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಹೊಣೆ ಮಾಡುವುದಾಗಿ ಮುಖ್ಯಮಂತ್ರಿಗಳು ಕಳೆದ ಸೆ.25 ರಂದು ವೇಮಗಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಚ್ಚರಿಕೆ ನೀಡಿದ್ದರು.
ಜಂಟಿ ಕಾರ್ಯತಂತ್ರ: ಇದರಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಮರಳು ದಂಧೆ ನಡೆಯುತ್ತಿರುವ ಅಡ್ಡೆಗಳ ಮೇಲೆ ದಾಳಿ ಮಾಡಿ ಮರಳು ಮಾಫಿಯಾಗಳ ಎದೆಯಲ್ಲಿ ನಡುಕವನ್ನುಂಟು ಮಾಡಿದ್ದಾರೆ. ಮರಳು ದಂಧೆ ತಡೆಯಲು ಜಿಲ್ಲಾಧಿಕಾರಿ ಡಿ.ಕೆ. ರವಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ನಿವಾಸ್ ಸಪಟ್ ಜಂಟಿ ಕಾರ್ಯತಂತ್ರ ರೂಪಿಸಿದ್ದಾರೆ. ಆಪರೇಷನ್ ಸ್ಯಾಂಡ್ ಹೆಸರಿನಲ್ಲಿ ಜಿಲ್ಲೆಯ ಎಲ್ಲಾ ಕಡೆ ಮರಳು ದಂಧೆ ತಡೆಯಲು ತಮ್ಮ ಆಧೀನದಲ್ಲಿರುವ ಕಂದಾಯ, ಲೋಕೋಪಯೋಗಿ, ಗಣಿ ಮತ್ತು ಭೂ ವಿಜ್ಞಾನ, ನೀರಾವರಿ ಹಾಗೂ ಪರಿಸರ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
62 ಘಟಕಗಳ ಧ್ವಂಸ: ಕೋಲಾರ ತಹಸೀಲ್ದಾರ್ ನಾಗರಾಜ್ ಅವರು ಈಗಾಗಲೇ ತಾಲೂಕಿನ ಮೂರು ಕಡೆ ಮರಳು ಪಿಲ್ಟರ್ ಘಟಕಗಳನ್ನು ನಾಶಪಡಿಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ನರಸಾಪುರ ಹೋಬಳಿಯ ಉದ್ದಪ್ಪನಹಳ್ಳಿ ಕೆರೆಯ ಮೇಲೇ ದಾಳಿ ಮಾಡಿ ಅಲ್ಲಿನ ಘಟಕಗಳನ್ನು ನಾಶ ಮಾಡಿದ್ದ ಇವರು ತಾಲೂಕಿನ ವೇಮಗಲ್ ಹೋಬಳಿಗೆ ಸೇರಿದ ಮಲಿಯಪ್ಪನಹಳ್ಳಿಯ ಕೆರೆ ಸೇರಿದಂತೆ ಸುತ್ತಮುತ್ತಲು ಮರಳು ಪಿಲ್ಟರ್ಗಾಗಿ ನಿರ್ಮಿಸಿದ್ದ 62 ಘಟಕಗಳನ್ನು ದ್ವಂಸ ಮಾಡುವಲ್ಲಿ ಯಶ್ವಸಿಯಾಗಿದ್ದಾರೆ.