ಮರಳು ದಂಧೆ ಮೇಲೆ ದಾಳಿ; 62 ಅಡ್ಡೆಗಳ ಧ್ವಂಸ
ಪಾ.ಶ್ರೀ. ಅನಂತರಾಮ್
ಕ.ಪ್ರ. ವಾರ್ತೆ, ಕೋಲಾರ, ಅ.4
ಕಳೆದ ತಿಂಗಳು ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಕ್ರಮ ಮರಳು ದಂಧೆ ತಡೆಯಲು ನೀಡಿದ್ದ ಕಟ್ಟಾದೇಶದಿಂದ ಎಚ್ಚೆತ್ತಿರುವ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಮರಳು ಪಿಲ್ಟರ್ ಅಡ್ಡೆಗಳ ನಾಶಕ್ಕೆ ಧೈರ್ಯ ತೋರಿದೆ.
ಈ ಧೈರ್ಯ ಮತ್ತು ಕೆರೆಗಳ ರಕ್ಷಣೆ ಕಾರ್ಯ ಉತ್ತರನ ಪೌರುಷದಂತಾಗದೆ ಇನ್ನಷ್ಟು ದಿನ ಕಾರ್ಯಾಚರಣೆ ನಡೆಯುವ ಮೂಲಕ ಅಂತರ್ಜಲ ಸಮಸ್ಯೆ ನಿವಾರಿಸಬೇಕೆಂಬುದು ಜನತೆಯ ಒತ್ತಾಸೆಯಾಗಿದೆ.
ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿಗೆ ಸಮಿತಿ ರಚಿಸಲಾಗಿದೆ. ವರದಿ ಜಾರಿಗೆ ಬರುವತನಕ ಅಕ್ರಮ ಮರಳು ಸಾಗಾಣೆ ನಿಲ್ಲಿಸಬೇಕು. ಒಂದು ವೇಳೆ ಲೋಪ ಕಂಡು ಬಂದಲ್ಲಿ ಜಿಲ್ಲಾಧಿಕಾರಿಗಳನ್ನು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಹೊಣೆ ಮಾಡುವುದಾಗಿ ಮುಖ್ಯಮಂತ್ರಿಗಳು ಕಳೆದ ಸೆ.25 ರಂದು ವೇಮಗಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಚ್ಚರಿಕೆ ನೀಡಿದ್ದರು.
ಜಂಟಿ ಕಾರ್ಯತಂತ್ರ: ಇದರಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಮರಳು ದಂಧೆ ನಡೆಯುತ್ತಿರುವ ಅಡ್ಡೆಗಳ ಮೇಲೆ ದಾಳಿ ಮಾಡಿ ಮರಳು ಮಾಫಿಯಾಗಳ ಎದೆಯಲ್ಲಿ ನಡುಕವನ್ನುಂಟು ಮಾಡಿದ್ದಾರೆ. ಮರಳು ದಂಧೆ ತಡೆಯಲು ಜಿಲ್ಲಾಧಿಕಾರಿ ಡಿ.ಕೆ. ರವಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ನಿವಾಸ್ ಸಪಟ್ ಜಂಟಿ ಕಾರ್ಯತಂತ್ರ ರೂಪಿಸಿದ್ದಾರೆ. ಆಪರೇಷನ್ ಸ್ಯಾಂಡ್ ಹೆಸರಿನಲ್ಲಿ ಜಿಲ್ಲೆಯ ಎಲ್ಲಾ ಕಡೆ ಮರಳು ದಂಧೆ ತಡೆಯಲು ತಮ್ಮ ಆಧೀನದಲ್ಲಿರುವ ಕಂದಾಯ, ಲೋಕೋಪಯೋಗಿ, ಗಣಿ ಮತ್ತು ಭೂ ವಿಜ್ಞಾನ, ನೀರಾವರಿ ಹಾಗೂ ಪರಿಸರ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕಾರ್ಯಾಚರಣೆ: ಅಕ್ರಮವಾಗಿ ಮರಳು ಪಿಲ್ಟರ್ ದಂಧೆ ನಡೆಯುತ್ತಿರುವ ಕೆರೆಗಳಿಗೆ ಅನಿರೀಕ್ಷಿತ ದಾಳಿ ಮಾಡಬೇಕು, ಸೂಕ್ತ ಪೊಲೀಸ್ ರಕ್ಷಣೆಯೊಂದಿಗೆ ಅಡ್ಡೆಗಳಿಗೆ ಹೋಗಿ ಮರಳು ಪಿಲ್ಟರ್ ಮಾಡಲು ನಿರ್ಮಿಸಿರುವ ಘಟಕಗಳನ್ನು ನಾಶ ಮಾಡಬೇಕೆಂದು ಜಿಲ್ಲಾಧಿಕಾರಿಗಳು ನೀಡಿರುವ ಆದೇಶದ ಅನ್ವಯ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಂಬಂಧಪಟ್ಟ ತಹಸೀಲ್ದಾರ್ಗಳ ನೇತೃತ್ವದಲ್ಲಿ ಕಳೆದ ಒಂದು ವಾರದಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮುಳಬಾಗಲು ಮತ್ತು ಕೋಲಾರದಲ್ಲಿ ಮರಳು ಫಿಲ್ಟರ್ ಹೆಚ್ಚಿನ ರೀತಿಯಲ್ಲಿ ನಡೆಯುತ್ತಿರುವುದರಿಂದ ಈ ಎರಡೂ ತಾಲೂಕಿನಲ್ಲಿ ಅಡ್ಡೆಗಳನ್ನು ಪತ್ತೆ ಮಾಡಿ ಮರಳು ಪಿಲ್ಟರ್ ಮಾಡಲು ಅಳವಡಿಸಿರುವ ನೀರಿನ ಸಂಪರ್ಕ, ಜನರೇಟರ್, ಮರಳು ಘಟಕಗಳನ್ನು ನಾಶಪಡಿಸಲಾಗುತ್ತಿದೆ.
62 ಘಟಕಗಳ ಧ್ವಂಸ: ಕೋಲಾರ ತಹಸೀಲ್ದಾರ್ ನಾಗರಾಜ್ ಅವರು ಈಗಾಗಲೇ ತಾಲೂಕಿನ ಮೂರು ಕಡೆ ಮರಳು ಪಿಲ್ಟರ್ ಘಟಕಗಳನ್ನು ನಾಶಪಡಿಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ನರಸಾಪುರ ಹೋಬಳಿಯ ಉದ್ದಪ್ಪನಹಳ್ಳಿ ಕೆರೆಯ ಮೇಲೇ ದಾಳಿ ಮಾಡಿ ಅಲ್ಲಿನ ಘಟಕಗಳನ್ನು ನಾಶ ಮಾಡಿದ್ದ ಇವರು ಶುಕ್ರವಾರ ಬೆಳಿಗ್ಗೆಯಿಂದ ಸಂಜೆ 5-30 ಗಂಟೆಯವರೆಗೆ ತಾಲೂಕಿನ ವೇಮಗಲ್ ಹೋಬಳಿಗೆ ಸೇರಿದ ಮಲಿಯಪ್ಪನಹಳ್ಳಿಯ ಕೆರೆ ಸೇರಿದಂತೆ ಸುತ್ತಮುತ್ತಲು ಮರಳು ಪಿಲ್ಟರ್ಗಾಗಿ ನಿರ್ಮಿಸಿದ್ದ 62 ಘಟಕಗಳನ್ನು ದ್ವಂಸ ಮಾಡುವಲ್ಲಿ ಯಶ್ವಸಿಯಾಗಿದ್ದಾರೆ.
ಮರಳು ಪಿಲ್ಟರ್ಗಾಗಿ ಕೆರೆಗಳಲ್ಲಿ ಅಳವಡಿಸಿದ್ದ ನೀರಿನ ಸಂಪರ್ಕ, ಜನರೇಟರ್, ಮರಳು ದಾಸ್ತಾನು ಘಟಕವನ್ನು ಜೆಬಿಸಿಗಳ ಮೂಲಕ ತೆರುವುಗೊಳಿಸಲಾಯಿತಲ್ಲದೆ ಯಂತ್ರೋಪಕರಣಗಳನ್ನು ಸುಡಲಾಯಿತು. ಈ ಕಾರ್ಯಚರಣೆಗೆ ಕೋಲಾರ ಗ್ರಾಮಾಂತರ ಸಿಪಿಐ ದೇವೇಂದ್ರಪ್ಪ, ವೇಮಗಲ್ ಪಿಎಸ್ಐ ಯಶ್ವಂತ್ ರಕ್ಷಣೆ ಒದಗಿಸಿದರು. ಕೋಲಾರ ಉಪವಿಭಾಗಾಧಿಕಾರಿ ಮಂಜುನಾಥ್ ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ನಿವಾಸ್ ಸಪಟ್ ಅವರ ನೇತೃತ್ವದಲ್ಲಿ ಗುರುವಾರ ತಾಲೂಕಿನ ದೊಡ್ಡವಲ್ಲಭಿ ಗ್ರಾಮದ ಕೆರೆಯ ಮೇಲೆ ದಾಳಿ ನಡೆಸಿ ಅಲ್ಲಿ ನಡೆಯುತ್ತಿದ್ದ ಮರಳು ಫಿಲ್ಟರ್ ದಂಧೆಯನ್ನು ನಿಲ್ಲಿಸಲಾಯಿತು.
ಕೇವಲ ಕಂದಾಯ ಮತ್ತು ಪೊಲೀಸ್ ಇಲಾಖೆ ಮಾತ್ರ ಮರಳು ತಡೆಗೆ ಯತ್ನಿಸಿದರೆ ಸಾಲದು, ಸಂಬಂಧಪಟ್ಟ ನೀರಾವರಿ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಿಟ್ಟತನದಿಂದ ಕೆಲಸ ನಿರ್ವಹಿಸಿದಾಗ ಮಾತ್ರ ಮರಳು ದಂಧೆ ಹತೋಟಿಗೆ ಬರುತ್ತದೆ ಎಂದು ಜನತೆ ಅಭಿಪ್ರಾಯ ಪಟ್ಟಿದ್ದಾರೆ.