ವಾತಾವರಣಕ್ಕೆ ತಕ್ಕಂತೆ ನಾಟಿ ವಿಧಾನ ಬದಲಿಸಿ
ಬಂಗಾರಪೇಟೆ: ಬದಲಾಗುತ್ತಿರುವ ವಾತಾವರಣಕ್ಕೆ ತಕ್ಕಂತೆ ರೈತರೂ ತಮ್ಮ ನಾಟಿ ವಿಧಾನಗಳನ್ನು ಬದಲಿಸಿಕೊಂಡು ಆರ್ಥಿಕವಾಗಿ ಸದೃಡರಾಗಬೇಕೆಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಜಿ. ರಾಜಾರೆಡ್ಡಿ ಹೇಳಿದರು.
ತಾಲೂಕಿನ ತೊಪ್ಪನಹಳ್ಳಿ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯ ಬೆಂಗಳೂರು, ಆತ್ಮ ಯೋಜನೆ, ಕೃಷಿ ಇಲಾಖೆ ಬಂಗಾರಪೇಟೆ ಸಂಯುಕ್ತ ಆಶ್ರಯದಲ್ಲಿ ಅಂತಿಮ ವರ್ಷದ ಬಿಎಸ್ಸಿ(ಕೃಷಿ) ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ಅಂಗವಾಗಿ ನಡೆದ ರೈತ ತರಬೇತಿ ಮತ್ತು ಕೃಷಿ ವಸ್ತುಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ತೊಪ್ಪನಹಳ್ಳಿ ಪ್ರದೇಶ ಗಡಿ ಭಾಗವಾಗಿದ್ದು ಇಲ್ಲಿನ ರೈತರಿಗೆ ಕೃಷಿ ಮಾಡುವ ಬಗ್ಗೆ ಸೂಕ್ತ ತಿಳಿವಳಿಕೆ ಮತ್ತು ಅರಿವಿಲ್ಲದೆ ನಷ್ಟಕ್ಕೊಳಗಾಗುತ್ತಿದ್ದಾರೆ. ಅವರಿಗೆ ಆಧುನಿಕ ಕೃಷಿ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಿ ಅವರ ಬದುಕನ್ನು ಹಸನಾಗಿಸಲು ಕೃಷಿ ವಿದ್ಯಾರ್ಥಿಗಳು ಬೆಂಗಳೂರಿನಿಂದ ಬಂದು ಇಲ್ಲೇ ಮೊಕ್ಕಾಂ ಹೂಡಿ ರೈತರಿಗೆ ಹೊಸ ಹೊಸ ತಂತ್ರಜ್ಞಾನದ ಬಗ್ಗೆ ತಿಳಿವಳಿಕೆ ಮೂಡಿಸುತ್ತಿರುವುದು ರೈತರಿಗೆ ವರದಾನವಾಗಿದೆ ಎಂದು ಅಭಿಪ್ರಾಯಪಟ್ಟರು.
ರೈತರು ಇಂತಹ ತರಬೇತಿ ಶಿಬಿರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ರಾಜ್ಯ ಸರ್ಕಾರ ಸಹ ಕೃಷಿಗೆ ಹೆಚ್ಚಿನ ಒತ್ತು ಕೊಡುತ್ತಿದ್ದರೂ ಅರಿವಿನ ಕೊರತೆಯಿಂದಾಗಿ ಯೋಜನೆಗಳು ರೈತರ ಪಾಲಾಗದೆ ಮಧ್ಯವರ್ತಿಗಳ ಪಾಲಾಗುತ್ತಿದೆ ಯೋಜನೆಗಳ ಲಾಭಕ್ಕಾಗಿ ರೈತರು ವಿದ್ಯಾವಂತರಾದಾಗ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಕಳೆದ ಎರಡು ತಿಂಗಳಿಂದ ಕೃಷಿ ವಿದ್ಯಾರ್ಥಿಗಳು ತೊಪ್ಪನಹಳ್ಳಿಯಲ್ಲಿ ರೈತರಿಗೆ ಅನುಕೂಲವಾಗುವಂತಹ ಹಲವು ಉಪಯುಕ್ತ ಶಿಬಿರಗಳು ಹಮ್ಮಿಕೊಂಡಿರುವುದನ್ನು ಶ್ಲಾಘಿಸಿದರು. ಈ ಶಿಬಿರದಲ್ಲಿ ದೋಣಿಮಡಗು, ಬಲಮಂದೆ, ತೊಪ್ಪನಹಳ್ಳಿ, ಕಾಮಸಮುದ್ರ ಮತ್ತಿತರೆ ಪಂಚಾಯ್ತಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು. ಇದೇ ವೇಳೆ ಕೃಷಿಗೆ ಸಂಬಂಧಿಸಿದಂತೆ ಕೃಷಿ ಚಟುವಟಿಕೆಗಳ ಬಗ್ಗೆ ವಸ್ತು ಪ್ರದರ್ಶನ ಸಹ ಏರ್ಪಡಿಸಲಾಗಿತ್ತು.
ತೊಪ್ಪನಹಳ್ಳಿ ಪಂಚಾಯ್ತಿ ಅಧ್ಯಕ್ಷೆ ಸುಶೀಲಮ್ಮ ಚಲಪತಿ, ಡಾ.ಬಿ. ಶ್ರೀರಾಮುಲು, ಡಾ.ಜಿ.ಎಸ್. ಅನಂತ್, ಡಾ.ಎಂ. ವಸುಂದರ ದೇವಿ, ಡಾ. ಆರ್. ವಸಂತಕುಮಾರಿ, ಡಾ.ವಿ.ಎಲ್. ಮಧುಪ್ರಸಾದ್ ಇದ್ದರು.