'ಸಮುದಾಯ ಬೆಳೆಯಲು ಸಂಘಟನೆ ಮುಖ್ಯ'
ಚಿಕ್ಕಬಳ್ಳಾಪುರ: ಯಾವುದೇ ಸಮುದಾಯ ಬೆಳೆಯಲು ಸಂಘಟನೆ ಮುಖ್ಯ ಎಂದು ಶಾಸಕ ಡಾ.ಕೆ. ಸುಧಾಕರ್ ಅಭಿಪ್ರಾಯಪಟ್ಟರು.
ನಗರದಲ್ಲಿ ಚನ್ನಕೇಶವ ಕಲ್ಯಾಣ ಮಂಟಪದಲ್ಲಿ ರಾಜು ಕ್ಷತ್ರಿಯ ಸಂಘ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ರಾಜು ಕ್ಷತ್ರಿಯ ಜನಾಂಗದವರು ಶ್ರಮಜೀವಿಗಳು. ಆದರೆ, ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಸೂಕ್ತ ಬೆಂಬಲದ ಕೊರತೆಯೂ ಇದೆ. ಸರ್ಕಾರದಿಂದ ಅಗತ್ಯವಿರುವ ಸವಲತ್ತು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಜಿಪಂ ಮಾಜಿ ಸದಸ್ಯ ಪಿ.ಎನ್. ಕೇಶವರೆಡ್ಡಿ, ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ, ಎಸ್.ವೈ. ಮರಿಯಪ್ಪ, ಶ್ರೀನಿವಾಸರಾಜು, ಜಯರಾಮ್, ಕೃಷ್ಣಮೂರ್ತಿ, ಶ್ರೀನಿವಾಸ್, ಆರ್. ವೆಂಕಟಾಚಲರಾಜು ಇದ್ದರು.
ರೈಲ್ವೇ ಹಳಿ ಪರಿಶೀಲನೆ
ಶಿಡ್ಲಘಟ್ಟ: ಚಿಕ್ಕಬಳ್ಳಾಪುರ-ಕೋಲಾರ ರೈಲು ಮಾರ್ಗದ ಬ್ರಾಡ್ ಗೇಜ್ ಪರಿವರ್ತನೆಯಾಗಿದ್ದು, ಇದರ ಪರಿಶೀಲನೆಗಾಗಿ ದಕ್ಷಿಣ ಭಾರತದ ರೈಲ್ವೆ ಸುರಕ್ಷಾ ಆಯುಕ್ತ ಸತೀಶ್ ಕುಮಾರ್ ತಂಡ ಹಳಿಗಳ ಮತ್ತು ರೈಲ್ವೆ ನಿಲ್ದಾಣಗಳ ಪರೀಕ್ಷೆಗಾಗಿ ನೂತನ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿತ್ತು. ಇದೇ ಸಮಯದಲ್ಲಿ ಪರೀಕ್ಷಾರ್ಥವಾಗಿ ಬಂದಿದ್ದ ರೈಲು ಗಂಟೆಗೆ ಸುಮಾರು 100 ಕಿ.ಮೀ ವೇಗದಲ್ಲಿ ಚಲಿಸಿದ್ದು ಈ ಬಗ್ಗೆ ಕಾವಲು ರಹಿತ ರೈಲ್ವೆ ಗೇಟ್ಗಳ ಸುತ್ತಮುತ್ತ ರೈಲ್ವೆ ಹಳಿ ದಾಟದಂತೆ ಎಚ್ಚರಿಕೆ ನೀಡಲಾಗಿದೆ. ಇವರೊಂದಿಗೆ ರೈಲ್ವೆ ಇಲಾಖೆಯ ತಾಂತ್ರಿಕ ತಜ್ಞ ಎ.ಕೆ. ಅಗರ್ವಾಲ್ ಇದ್ದರು.