ಅನಂತಮೂರ್ತಿ ಹೇಳಿಕೆ ಖಂಡಿಸಿ ಪ್ರತಿಭಟನೆ
ಚಿಂತಾಮಣಿ: ಬ್ರಾಹ್ಮಣರ ಬಗ್ಗೆ ಅವಹೇಳನವಾಗಿ ಮಾತನಾಡಿದ ಸಾಹಿತಿ ಯು.ಆರ್. ಅನಂತಮೂರ್ತಿಯವರನ್ನು ಗಡೀಪಾರು ಮಾಡುವಂತೆ ಆಗ್ರಹಿಸಿ ಬ್ರಾಹ್ಮಣರ ಯುವಕರ ಟ್ರಸ್ಟ್ ಪಟ್ಟಣದ ಮುಖ್ಯ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಪಟ್ಟಣದ ಆಜಾದ್ ಚೌಕ ವೃತ್ತದ ಶ್ರೀ ಹರಿಹರೇಶ್ವರಸ್ವಾಮಿ ದೇವಾಲಯದ ಮುಂಭಾಗದಲ್ಲಿ ತಾಲೂಕು ಬ್ರಾಹ್ಮಣ ಯುವಕರ ಟ್ರಸ್ಟ್ನ ನೂರಾರು ಜನರು ಸೇರಿ ಅನಂತಮೂರ್ತಿ ಹಿಂದೂ ಸಮಾಜದ ಜಾತಿ ಪದ್ಧತಿ ಬಗ್ಗೆ ವಿತಂಡವಾದ ಮಂಡಿಸುವ ಹಾಸ್ಯವನ್ನು ಕೈ ಬಿಡಲು ಆಗ್ರಹಿಸಿ ದಿಕ್ಕಾರ ಕೂಗಿ, ಸರ್ಕಾರ ಕೂಡಲೇ ಅನಂತಮೂರ್ತಿಯವರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿದರು. ವಕೀಲ ಬಿ.ಆರ್. ಶ್ರೀನಾಥ್ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಸನಾತನ ಹಿಂದೂ ಧರ್ಮದ ಆಚಾರ ವಿಚಾರಗಳ ಬಗ್ಗೆ ಹಾಗೂ ಬ್ರಾಹ್ಮಣ ಸಮುದಾಯದ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿರುವ ಸಾಹಿತಿ ಯು.ಆರ್. ಅನಂತಮೂರ್ತಿಯವರು ಸಾರ್ವಜನಿಕವಾಗಿ ಕ್ಷಮೆ ಯಾಚಿಬೇಕೆಂದು ಆಗ್ರಹಿಸಿದರು.
ನಂತರ ಮಹಿಳಾ ಸಮಾಜದ ಎಂ.ಎಸ್. ಸೀತಮ್ಮ ಮಾತನಾಡಿದರು. ಉಮಾಶಂಕರ್, ಜಿ. ಜಯರಾಮ್, ಗೋಪಾಲಕೃಷ್ಣ, ಮಂಜುನಾಥ್, ಮಧುಸೂದನ್ ರಾವ್, ಸುಬ್ರಮಣ್ಯಂ, ಕೃಷ್ಣಮೂರ್ತಿ, ಅರುಣ್ ಕುಮಾರ್, ಮುರಳಿ ಇದ್ದರು.