ಗಡಿಭಾಗದಲ್ಲಿ ಸಮಸ್ಯೆ: ಜನರಿಗೆ ಕಿರಿಕಿರಿ
ಚಿಕ್ಕಬಳ್ಳಾಪುರ: ಆಂಧ್ರ ಪ್ರದೇಶದ ವಿಭಜನೆಯಿಂದ ಹೊತ್ತಿಕೊಂಡಿರುವ ಕಿಚ್ಚು ರಾಜ್ಯಕ್ಕೂ ಬಿಸಿ ಮುಟ್ಟಿಸಿದೆ. ವಾಹನ ಸಂಚಾರ, ವ್ಯಾಪಾರ ವಹಿವಾಟಿನ ಪ್ರಮಾಣ ಕುಸಿದು ಜನರು ತೊಂದರೆ ಅನುಭವಿಸುವಂತಾಗಿದೆ.
ಕೇಂದ್ರ ಸಚಿವ ಸಂಪುಟ ತೆಲಂಗಾಣವನ್ನು 29 ನೇ ರಾಜ್ಯವನ್ನಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಸೀಮಾಂಧ್ರದಲ್ಲಿ (ರಾಯಲಾಸೀಮಾ ಮತ್ತು ಆಂಧ್ರದ ಕರಾವಳಿ ಭಾಗ) ಹಿಂದೆ ನಡೆಯುತ್ತಿದ್ದ ಪ್ರತಿಭಟನೆಗಳು ತೀವ್ರ ಸ್ವರೂಪವ ಪಡೆದುಕೊಂಡಿದ್ದು ನಿರಂತರ 72 ಗಂಟೆಗಳ ಕಾಲ ಬಂದ್ಗೆ ಕರೆ ನೀಡಿ ರಸ್ತೆಗಳಲ್ಲಿ ಟೈರು ಹಾಕಿ ಬೆಂಕಿ ಹಚ್ಚಲಾಗಿದೆ. ಇದರಿಂದ ವಾಹನಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಆಂಧ್ರದ ಗಡಿಭಾಗದ ಹೆದ್ದಾರಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.
ವಹಿವಾಟಿಗೆ ಬರೆ: ಅವಿಭಜಿತ ಕೋಲಾರ ಜಿಲ್ಲೆ (ಚಿಕ್ಕಬಳ್ಳಾಪುರ ಮತ್ತು ಕೋಲಾರ) ಆಂಧ್ರದ ಗಡಿಗೆ ಹೊಂದಿಕೊಂಡಿರುವುದರಿಂದ ಇಲ್ಲಿನ ಜನರಿಗೂ ಆಂಧ್ರಕ್ಕೂ ಹೆಚ್ಚಿನ ನಂಟಿದೆ. ಪ್ರತಿನಿತ್ಯ ಇಲ್ಲಿಂದ ಆಂಧ್ರಕ್ಕೆ, ಆಂಧ್ರದಿಂದ ಇಲ್ಲಿಗೆ ತರಕಾರಿ, ಹೂಗಳು ಸೇರಿದಂತೆ ತೋಟಗಾರಿಕೆ ಮತ್ತು ಕೃಷಿ ಉತ್ಪನ್ನಗಳನ್ನು ಪರಸ್ಪರ ಸಾಗಾಣಿಕೆ ಮಾಡುತ್ತ ಲಕ್ಷಾಂತರ ರು. ವಹಿವಾಟು ನಡೆಸಲಾಗುತ್ತಿದೆ. ಆದರೆ, ಈಗ ಇಲ್ಲಿನ ವ್ಯಾಪಾರ ವಹಿವಾಟಿನಲ್ಲಿ ಹಿನ್ನಡೆ ಉಂಟಾಗಿದ್ದು ರೈತರು ಬೆಳೆದ ಉತ್ಪನ್ನಗಳು, ಸಾಗಾಣೆ ಮಾಡಬೇಕಾದ ವಾಹನಗಳು ಮಾರುಕಟ್ಟೆಗಳಲ್ಲಿಯೇ ಉಳಿದುಕೊಳ್ಳುತ್ತಿವೆ. ಇನ್ನು ಆಂಧ್ರವನ್ನೇ ನಂಬಿಕೊಂಡಿದ್ದ ಅನೇಕ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವುದನ್ನು ನಿಲ್ಲಿಸಿದ್ದಾರೆ. ಇದರಿಂದ ಆರ್ಥಿಕ ನಷ್ಟ ಉಂಟಾಗುವ ಆತಂಕ ಮೂಡಿದೆ.
ತಿಮ್ಮಪ್ಪನ ದರ್ಶನಕ್ಕೆ ಕಷ್ಟ: ತಿರುಮಲ ತಿರುಪತಿಗೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ಸೇರಿದಂತೆ ರಾಜ್ಯದ ಅನೇಕ ಕಡೆಯಿಂದ ಪ್ರತಿನಿತ್ಯ ಲಕ್ಷಾಂತರ ಮಂದಿ ಭಕ್ತರು ಪ್ರಯಾಣಿಸುತ್ತಿದ್ದು ಈಗ ವಾಹನ ಸಂಚಾರದ ಸ್ಥಗಿತದಿಂದ ಕಷ್ಟವಾಗಿದೆ. ಈಗಾಗಲೇ ತಿರುಪತಿಗೆ ತೆರಳಿರುವ ಅನೇಕ ಕುಟುಂಬಗಳು ರಾಜ್ಯಕ್ಕೆ ವಾಪಸ್ಸಾಗಲು ಪರದಾಡುತ್ತಿರುವುದಾಗಿ ತಿಳಿದು ಬಂದಿದೆ. ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯ, ಕದಿರಿ ಶ್ರೀ ನರಸಿಂಹಸ್ವಾಮಿ ದೇವಾಲಯಕ್ಕೆ ಹೋಗಿ ಬರುವ ಪ್ರಯಾಣಕ್ಕೂ ಸಂಪೂರ್ಣವಾಗಿ ಕಡಿವಾಣ ಬಿದ್ದಿದೆ.
ಆಂಧ್ರದಲ್ಲಿ ಪ್ರತಿಭಟನೆ ಕಾವು ಕಡಿಮೆಯಾಗಿದೆ ಎಂದು ತಿರುಪತಿಗೆ ಕುಟುಂಬ ಸಮೇತ ಹೋಗಿದ್ದು ಉದ್ರಿಕ್ತ ವಾತಾವರಣದ ನಡುವೆ ತಿರುಪತಿಯಿಂದ ಬರಲು ಅನುಭವಿಸಿದ ಪಾಡು ಹೇಳ ತೀರದು ಎಂದು ಅಭಿಪ್ರಾಯಪಡುತ್ತಾರೆ ಚಿಕ್ಕಬಳ್ಳಾಪುರದ ನಿವಾಸಿ ಸತ್ಯನಾರಾಯಣ ಶೆಟ್ಟಿ. ಆಂಧ್ರದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಆಂಧ್ರದ ಗಡಿ ಭಾಗದಲ್ಲಿ ಮುಂದೆ ಸಂಚರಿಸಲು ಸಾಧ್ಯವಾಗದೇ ಭಾರಿ ಸಂಖ್ಯೆಯಲ್ಲಿ ವಾಹನಗಳು ಸಾಲು ಗಟ್ಟಿ ನಿಂತಿವೆ.
ಬಾಗೇಪಲ್ಲಿ ತಾಲೂಕಿನ ಗಡಿ ಪ್ರದೇಶ ಕೊಡಿಕೊಂಡ ಚೆಕ್ ಪೋಸ್ಟ್ನಲ್ಲಿ ಸಮೈಕ್ಯಾಂದ್ರಕ್ಕಾಗಿ ಹೋರಾಟ ನಡೆಸುತ್ತಿರುವ ನಾಯಕರು ರಸ್ತೆಗೆ ಟೈರುಗಳನ್ನು ಹಾಕಿ ಬೆಂಕಿ ಹಚ್ಚಿದ್ದಾರೆ. ಅಲ್ಲದೇ ಯಾವುದೇ ವಾಹನ ಬಿಡುತ್ತಿಲ್ಲ. ಇದರಿಂದ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ವಾಹನಗಳನ್ನು ರಸ್ತೆಬದಿಯಲ್ಲಿ ನಿಲ್ಲಿಸಿರುವ ಚಾಲಕರು ಮರಗಳ ಕೆಳಗೆ ತಾತ್ಕಾಲಿಕ ಆಶ್ರಯ ಮಾಡಿಕೊಂಡಿದ್ದಾರೆ. ಇನ್ನೂ ಬಾಗೇಪಲ್ಲಿ ಪಟ್ಟಣದಿಂದ ಗಡಿ ಗ್ರಾಮಗಳಿಗೆ ಸಂಚರಿಸುವ ಪ್ರಯಾಣಿಕರು ಗಡಿ ಭಾಗದವರಿಗೂ ಆಟೋಗಳಲ್ಲಿ ಸಂಚರಿಸಿ, ಆ ನಂತರ ನಡೆಯುತ್ತಿದ್ದಾರೆ.