ನಂಗಾನಾಚ್: ಬಿಜೆಪಿ ಪ್ರತಿಭಟನೆ
ಕೋಲಾರ: ಚುನಾವಣೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಕೆಲವರು ದೃಶ್ಯ ಮಾಧ್ಯಮಗಳ ಮುಖಾಂತರ ಬಿಜೆಪಿ ಪಕ್ಷಕ್ಕೆ ಮಸಿ ಬಳಿಯುವಂತ ಕೆಲಸ ಮಾಡುತ್ತಿದ್ದು, ದೃಶ್ಯ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡುವ ಮುನ್ನ ಅದನ್ನು ಪರಾಮರ್ಶಿಸಿ ಪ್ರಸಾರ ಮಾಡಬೇಕೆಂದು ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಓಂ ಶಕ್ತಿ ಚಲಪತಿ ತಿಳಿಸಿದರು.
ಶುಕ್ರವಾರ ದೃಶ್ಯ ಮಾಧ್ಯಮಗಳಲ್ಲಿ ನಂಗಾನಾಚ್ನಲ್ಲಿ ಬಿಜೆಪಿ ನಾಯಕರು ಭಾಗಿ ಎಂಬ ಸುಳ್ಳು ಸುದ್ದಿಯನ್ನು ಪ್ರಕಟಿಸಿದ್ದು, ಇದನ್ನು ಖಂಡಿಸಿ ನಗರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಸಮೀಪ ಯುವ ಮೋರ್ಚಾದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೆಲ ದೃಶ್ಯಮಾಧ್ಯಮಗಳು ಜನತೆಯ ದಿಕ್ಕು ತಪ್ಪಿಸುವ ಕೆಲಸ ಮಾಡಿವೆ. ಇನ್ನು ಮುಂದೆ ಈ ರೀತಿಯ ಸುಳ್ಳಿನ ಕಂತೆಗಳನ್ನು ಪ್ರಸಾರ ಮಾಡದೆ, ನಾಗರಿಕ ಸಮಾಜಕ್ಕೆ ಉಪಯುಕ್ತವಾದ ಮಾಹಿತಿಗಳನ್ನು ನೀಡಬೇಕೆಂದು ಮನವಿ ಮಾಡಿದರು.
ಟಿವಿಗಳಲ್ಲಿ ಪ್ರಸಾರವಾಗುವ ಸಂಗತಿಗಳನ್ನು ಜನತೆ ನಂಬುತ್ತಾರೆ. ಆದರೆ, ತೇಜೋವಧೆಗೆ ಒಳಗಾಗುವ ವ್ಯಕ್ತಿಗಳ ಮೇಲೆ ಇದರಿಂದ ಆಗುವ ಪರಿಣಾಮವೇನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು, ಶುಕ್ರವಾರ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾದ ನಂಗಾನಾಚ್ ದೃಶ್ಯಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ಇದು ಸತ್ಯಕ್ಕೆ ದೂರವಾದುದು ಎಂದು ಪ್ರತಿಪಾದಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಮು. ರಾಘವೇಂದ್ರ, ಹಾರೋಹಳ್ಳಿ ನಾರಾಯಣಸ್ವಾಮಿ, ಮಮತಾ, ಜಿಲ್ಲಾ ವಕ್ತಾರ ಮಹೇಶ್ ಶಿಳ್ಳಂಗೆರೆ, ನಗರ ಬಿಜೆಪಿ ಅಧ್ಯಕ್ಷ ಜಯಂತಿಲಾಲ್ಜೈನ್, ಪ್ರಧಾನ ಕಾರ್ಯದರ್ಶಿ ಸಾ.ಮಾ.ಅನೀಲ್, ಸುರೇಶ್, ಓಹಿಲೇಶ್, ಕೀಲುಕೋಟೆ ರವಿ, ಅಂಗಡಿ ಚಲಪತಿ, ಗಾಂಧಿನಗರ ರವಿ, ತಿಮ್ಮರಾಯಪ್ಪ, ಜಾಮೀನ್ಪಾಷ, ನರೇಶ್, ಯಶವಂತ್, ಮಂಜುಳಮ್ಮ, ವಿಜಯಲಕ್ಷ್ಮಿ, ಎ. ಮಂಜುಳಮ್ಮ, ಕನಕನಪಾಳ್ಯ ಮಂಜು, ಅಪ್ಪಿಗೌಡ, ನಾರಾಯಣಸಿಂಗ್ ಮತ್ತಿತರರು ಇದ್ದರು.