ನಗರಸಭೆ ವಿರುದ್ಧ ಮಾಜಿ ಶಾಸಕರ ಗರಂ
ಕೆಜಿಎಫ್: ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಸರ್ಕಾರ ಕೊಳವೆ ಬಾವಿ ಕೊರೆಸಲು ಲಕ್ಷಾಂತರ ಅನುದಾನ ಬಿಡುಗಡೆ ಮಾಡಿದೆ. ಆದರೆ ನಗರಸಭೆ ಪೌರಾಯುಕ್ತರು ಹಾಗೂ ಕಾರ್ಯಪಾಲಕ ಅಭಿಯಂತರರು ನಗರಸಭೆ ವ್ಯಾಪ್ತಿಯ 35 ವಾರ್ಡ್ಗಳಲ್ಲಿ ಅಗತ್ಯವಿರುವ ಕಡೆ ಕೊಳವೆ ಬಾವಿ ಕೊರೆಸದೆ ಶಾಸಕಿ ವೈ. ರಾಮಕ್ಕ ಹೇಳಿದಂತೆ ಮತ್ತು ಬಿಜೆಪಿ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಸೂಚಿಸಿದಂತೆ ಕೊಳವೆ ಬಾವಿ ಕೊರೆಸುತ್ತಿರುವುವುದಾಗಿ ಆರೋಪಿಸಿದ ಮಾಜಿ ಶಾಸಕ ಎಂ. ಭಕ್ತವತ್ಸಲಂ ನಗರಸಭೆ ಪೌರಾಯುಕ್ತ ವಿ. ಬಾಲಚಂದ್ರ ಹಾಗೂ ಎಇಇ ಶ್ರೀಧರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಸಂಬಂಧ ಕೋಲಾರ ಉಪವಿಭಾಗಾಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತುಕತೆ ನಡೆಸಿ ಅಧಿಕಾರಿಗಳ ವಿರುದ್ಧ ದೂರು ನೀಡಿದರು. ಮುಂದಿನ ವಾರದೊಳಗೆ ನಗರಸಭೆಗೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಗಳೊಂದಿದೆ ಚರ್ಚಿಸಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ ನಂತರ ಸಮಾದಾನಗೊಂಡ ಮಾಜಿ ಶಾಸಕ ಎಂ. ಭಕ್ತವತ್ಸಲಂ ತಮ್ಮ ಬೆಂಬಲಿಗ ನಗರಸಭೆ ಸದಸ್ಯರೊಂದಿಗೆ ಹಿಂತಿರುಗಿದರು. ಈ ವೇಳೆ ನಗರಸಭೆ ಸದಸ್ಯರಾದ ಎಂ. ಕುಲಶೇಖರ್, ನಿಜಾಂಪಾಷಾ, ಜಿ. ಕುಮಾರ್ ಹಾಜರಿದ್ದರು.