ಬಂಗಾರಪೇಟೆಯಲ್ಲಿ ರಸ್ತೆ ಕಿರಿಕಿರಿ ಕೇಳೋರ್ಯಾರು?
ಬಂಗಾರಪೇಟೆ: ದಿನೇದಿನೆ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಪಟ್ಟಣವಾಗಿದ್ದರೂ ಇಲ್ಲಿ ರಸ್ತೆಗಳು ತುಂಬಾ ಕಿರಿದಾಗಿದ್ದು ಬಹುತೇಕ ರಸ್ತೆಗಳು ಹಾಳಾಗಿ ವಾಹನಗಳಿರಲಿ ಪಾದಚಾರಿಗಳ ಸಂಚಾರಕ್ಕೂ ಕಷ್ಟವಾಗಿದೆ. ಅಷ್ಟರ ಮಟ್ಟಿಗೆ ರಸ್ತೆಗಳ ಸ್ಥಿತಿ ಇದ್ದರೂ ಪುರಸಭೆ ಮಾತ್ರ ಜಾಣ ಕುರುಡತನಕ್ಕೆ ಜಾರಿದೆ.
ಮೊದಲಿನಿಂದಲೂ ಪುರಸಭೆ ಕಾಂಗ್ರೆಸ್ ಆಡಳಿತದಲ್ಲೇ ಇದೆ. ಅನೇಕ ಬಾರಿ ಪುರಸಭೆ ಕಾಂಗ್ರೆಸ್ ಭದ್ರಕೋಟೆಗೆ ಲಗ್ಗೆ ಹಾಕಲು ಬಿಜೆಪಿ, ಜೆಡಿಎಸ್ ಯಸ್ನಿಸಿದರೂ ನಾಗರಿಕರು ಕೈಯನ್ನು ಬಿಡಲಿಲ್ಲ, ದಶಕಗಳಿಂದ ಪುರಸಭೆ ಕೈ ಆಡಳಿತದಲ್ಲಿದ್ದರೂ ಇದರ ವ್ಯಾಪ್ತಿಯ ರಸ್ತೆಗಳ ಸ್ಥಿತಿ ಮಾತ್ರ ಸುಧಾರಿಸಿಲ್ಲ ಏಕೆ. ಇಂತಹ ದುರ್ಗತಿ ಬಂದಿದೆ ಎಂಬುದಕ್ಕೆ ಯಾರಿಂದಲೂ ಉತ್ತರವೇ ಇಲ್ಲ. ಪ್ರತಿ ವರ್ಷ ಪಟ್ಟಣದ ರಸ್ತೆಗಳಿಗೆ ಚರಂಡಿಗಳಿಗೆ ಹಾಗೂ ಮೂಲ ಸೌಲಭ್ಯಗಳಿಗೆ ಕೋಟ್ಯಂತರ ಹಣ ಮಾತ್ರ ವೆಚ್ಚ ಮಾಡಲಾಗುತ್ತಿದೆಯಾದರೂ ಅಭಿವೃದ್ಧಿ ಮಾತ್ರ ಹಿಂದುಳಿದೆ. ಈ ಹಿಂದೆ ಹಾಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಪುರಸಭೆ ಅಧ್ಯಕ್ಷರಾಗಿದ್ದಾಗ ಪುರಸಭೆಯಲ್ಲಿ ಹಲವು ಹೊಸ ಕ್ರಮಗಳನ್ನು ಜಾರಿಗೆ ತರುವ ಮೂಲಕ ಜಿಲ್ಲೆಯಲ್ಲೇ ಅಭಿವೃದ್ಧಿಯಲ್ಲಿ ಪ್ರಥಮ ಸ್ಥಾನದಲ್ಲಿರುವಂತೆ ಮಾಡಿ ಪ್ರಶಸ್ತಿಗೂ ಪಾತ್ರರಾಗಿದ್ದರು.
ನಂತರ ಬಂದ ಆಡಳಿತ ಮಂಡಳಿ ಬರೀ ಹೆಸರಿಗೆ ಕಾಮಗಾರಿಗಳನ್ನು ಕೈಗೊಂಡವು ವಿನಃ ಅವು ಶಾಶ್ವತವಾಗಿ ಇರುವಂತೆ ಮಾಡಿಲ್ಲ, ಇಂದಿಗೂ ಪಟ್ಟಣದ ಬಹುತೇಕ ವಾರ್ಡುಗಳಲ್ಲಿ ನಾಗರಿಕರು ಪ್ರತಿದಿನ ಸಮಸ್ಯೆಗಳಲ್ಲೇ ಕೈ ತೊಳೆಯುವಂತಾಗಿದೆ.
ಚುನಾವಣೆ ವೇಳೆ ಮಾತ್ರ ಅಭ್ಯರ್ಥಿಗಳು ಮತದಾರರಿಗೆ ಬೆಣ್ಣೆ ಮಾತುಗಳನ್ನಾಡಿ ಮತ ಗಿಟ್ಟಿಸಿಕೊಂಡು ನಂತರ ವಾರ್ಡಿ ಕಡೆ ಮುಖ ಸಹ ಮಾಡುವುದಿಲ್ಲ.
ಈ ಹಿಂದಿನ ಬಿಜೆಪಿ ಸರ್ಕಾರದ ಸಮಯದಲ್ಲಿ ಅಂದಿನ ಶಾಸಕರಾಗಿದ್ದ ಎಂ. ನಾರಾಯಣಸ್ವಾಮಿ ಪಟ್ಟಣವೊಂದಕ್ಕೆ ಕೋಟ್ಯಂತರ ಅನುದಾನ ತಂದಿದ್ದರೂ, ಈ ಅನುದಾನದಲ್ಲಿ ಸಿಮೆಂಟ್ ರಸ್ತೆಗಳ ಮೇಲೆ ಡಾಂಬರು, ಡಾಂಬರು ರಸ್ತೆಗಳ ಮೇಲೆ ಸಿಮೆಂಟ್ ರಸ್ತೆಗಳನ್ನಾಗಿ ಪರಿವರ್ತಿಸಿದರೂ ಕಳಪೆ ಕಾಮಗಾರಿಯಿಂದ ಒಂದೇ ತಿಂಗಳಲ್ಲಿ ಮತ್ತೆ ತನ್ನ ವಿಶ್ವರೂಪ ಪ್ರದರ್ಶಿಸಿ ಜನರ ಕೆಂಗಣ್ಣಿಗೆ ಪುರಸಭೆ ಗುರಿಯಾಗುವಂತಾಗಿತ್ತು.
ಚುನಾಯಿತ ಪ್ರತಿನಿಧಿಗಳ ಇಚ್ಚಾಶಕ್ತಿ ಕೊತರೆಯಿಂದಾಗಿ ಪಟ್ಟಣ ಅಭಿವೃದ್ಧಿ ಬದಲಿಗೆ ಹಿಂದುಳಿಯುವಂತಾಗಿದೆ.ಮಳೆ ಬಂದರೆ ಪಟ್ಟಣದ ನಿಜವಾದ ಬಣ್ಣ ಬಯಲಾಗುತ್ತದೆ, ಪಟ್ಟಣದಲ್ಲಿ ಪಾದಚಾರಿಗಳಿಗೆ ಇರುವ ಫುಟ್ಪಾತ್ಗಳೇ ಮಾಯವಾಗಿದೆ.
ಅಲ್ಲಿ ಅನಧಿಕೃತವಾಗಿ ಅಂಗಡಿಗಳು ತಲೆ ಎತ್ತಿವೆ. ಕಳೆದ ಅವಧಿಯಲ್ಲಿ ಪುರಸಭೆ ಅಧ್ಯಕ್ಷರಾಗಿದ್ದ ಕೆ. ಚಂದ್ರಾರೆಡ್ಡಿ ಸಾಕಷ್ಟು ರಸ್ತೆಗಳ ಸುದಾರಣೆಗೆ ಶ್ರಮಿಸಿದ್ದರೂ ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದ ಅವರ ಶ್ರಮವೆಲ್ಲಾ ಮಣ್ಣುಪಾಲಾಗಿದೆ. ಈಗ ಹಿಂದೊಮ್ಮೆ ಪುರಸಭೆಯನ್ನು ಮಾದರಿ ಪುರಸಭೆಯಾಗಿ ರೂಪಿಸಿದ್ದ ಎಸ್.ಎನ್. ನಾರಾಯಣಸ್ವಾಮಿ ಈಗ ಶಾಸಕರಾಗಿ ಆಯ್ಕೆಯಾಗಿದ್ದಾರೆ ಇವರ ಅವದಿಯಲ್ಲಾದರೂ ಪಟ್ಟಣವನ್ನು ಮತ್ತೊಮ್ಮೆ ಮಾದರಿ ಪುರಸಭೆಯಾಗಿ ರೂಪಿಸುವತ್ತ ಶ್ರಮಿಸುವರೇ ಎಂಬ ಪ್ರಶ್ನೆ ನಾಗರಿಕರಲ್ಲಿ ಮೂಡಿದೆ.
ಇದೇ ತಿಂಗಳು 7ರಂದು ಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು 5ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಬರೀ ಚಾಲನೆ ನೀಡಿದರೆ ಸಾಲದು ಕಾಮಗಾರಿಯಲ್ಲಿ ಗುಣ ಮಟ್ಟ ಕಾಪಾಡುವಂತೆ ನಿಗಾವಹಿಸಬೇಕು ಇಲ್ಲದಿದ್ದರೆ ಶಾಸಕರ ಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.