ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸೀಮಾಂಧ್ರ ಪ್ರತಿಭಟನೆ: ಗಡಿಯಲ್ಲಿ ತಲ್ಲಣ

Mainashree
Updated On : 6 Oct 2013, 12:34 pm

ಕೋಲಾರ/ಚಿಕ್ಕಬಳ್ಳಾಪುರ/ರಾಯಚೂರು: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ಸೀಮಾಂಧ್ರದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ ರಾಜ್ಯದ ಗಡಿ ಭಾಗದ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಅನೇಕ ಸಮಸ್ಯೆಗಳು ಸೃಷ್ಟಿಯಾಗಿವೆ. ವಾಹನ ಸಂಚಾರ, ವ್ಯಾಪಾರ ವಹಿವಾಟಿನ ಪ್ರಮಾಣ ಕುಸಿದು ಲಾರಿ ಸಿಬ್ಬಂದಿ, ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ವಾಹನ ಚಾಲಕರು ಮತ್ತು ಸಿಬ್ಬಂದಿ ಗಡಿ ದಾಟಲಾಗದೆ ಕಳೆದ 22 ದಿನಗಳಿಂದ ಕೋಲಾರ ಜಿಲ್ಲೆಯ ಗಡಿ ಭಾಗದಲ್ಲಿ ಠಿಕಾಣಿ ಹೂಡಿದ್ದು, ಊಟ, ಸ್ನಾನಕ್ಕೆ ಪರದಾಡುತ್ತಿದ್ದಾರೆ. ಕೋಲಾರದಿಂದ ಮುಳಬಾಗಿಲು ಮಾರ್ಗವಾಗಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಗೆ ಸೇರಿದ ಪಲಮನೇರು, ತಿರುಪತಿ, ಶ್ರೀನಿವಾಸಪುರ ತಾಲೂಕುಗಳಿಂದ ಮದನಪಲ್ಲಿ ಕಡೆಗೆ ಹೋಗುವ ವಾಹನಗಳು ಪ್ರತಿಭಟನೆಯಿಂದ ಸ್ತಬ್ಧಗೊಂಡಿವೆ.  ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಪ್ರತಿನಿತ್ಯ ಆಂಧ್ರಕ್ಕೂ, ಆಂಧ್ರದಿಂದ ಇಲ್ಲಿಗೂ ತರಕಾರಿ ಹಾಗೂ ತೋಟಗಾರಿಕೆ ಉತ್ಪನ್ನ ಸೇರಿದಂತೆ ಲಕ್ಷಾಂತರ ರುಪಾಯಿ ವಹಿವಾಟು ನಡೆಯುತ್ತದೆ. ಇವುಗಳನ್ನು ಸಾಗಿಸುವ ವಾಹನಗಳು ಮಾರುಕಟ್ಟೆಯಲ್ಲಿಯೇ ಉಳಿದುಕೊಂಡಿವೆ. ಇದರಿಂದ ರೈತರು ಬೆಳೆದ ಉತ್ಪನ್ನಗಳು ಹಾಗೆಯೇ ಉಳಿಯುವಂತಾಗಿದೆ.
ತಿಮ್ಮಪ್ಪನ ದರ್ಶನ ಕಷ್ಟ ಕಷ್ಟ: ರಾಜ್ಯದಿಂದ ಪ್ರತಿನಿತ್ಯ ಲಕ್ಷಾಂತರ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುತ್ತಾರೆ. ಇದೀಗ ವಾಹನಗಳ ಸಂಚಾರ ಸ್ಥಗಿತದಿಂದ ಅಲ್ಲಿಗೆ ಈಗಾಗಲೇ ತೆರಳಿರುವ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ. ಇಲ್ಲಿಂದ ಹೋಗಲು ಅನುವು ಮಾಡಿಕೊಂಡವರು ತಮ್ಮ ಪ್ರಯಾಣವನ್ನು ಮುಂದೂಡಿದ್ದಾರೆ. ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯ, ಕದಿರಿ ಶ್ರೀ ನರಸಿಂಹಸ್ವಾಮಿ ದೇವಾಲಯಕ್ಕೆ ಹೋಗಿ ಬರುವ ಪ್ರಯಾಣಕ್ಕೂ ಸಂಪೂರ್ಣವಾಗಿ ಕಡಿವಾಣ ಬಿದ್ದಿದೆ.
ಬಸ್ ಸಂಚಾರ ಸ್ಥಗಿತ: ಶ್ರೀ ಶೈಲ, ಕರ್ನೂಲು, ಮಂತ್ರಾಲಯ ನಗರಗಳಿಗೆ ಈಶಾನ್ಯ ಸಾರಿಗೆ ಸಂಸ್ಥೆಯ ರಾಯಚೂರು ವಿಭಾಗದ ಬಸ್‌ಗಳನ್ನು ಕಳೆದ 60 ದಿನಗಳಿಂದ ಸ್ಥಗಿತಗೊಳಿಸಲಾಗಿದೆ. ಸುಮಾರು 19 ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದು, ಪ್ರತಿ ದಿನ 2 ರಿಂದ 4ಲಕ್ಷದಷ್ಟು ಆದಾಯ ಕಡಿತಗೊಳ್ಳುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement