ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸೀಮಾಂಧ್ರ ಪ್ರತಿಭಟನೆ: ಗಡಿಯಲ್ಲಿ ವಾಹನಗಳು ಸ್ಥಗಿತ

Rashmi Kasaragodu
Updated On : 6 Oct 2013, 12:37 pm

ಕ.ಪ್ರ.ವಾರ್ತೆ   ಕೋಲಾರ   ಅ. 5
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ಸೀಮಾಂಧ್ರದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ ಗಡಿ ಭಾಗದಲ್ಲಿ ವಾಹನ ಚಾಲಕರು ಮತ್ತು ಸಿಬ್ಬಂದಿ ಪರದಾಡುವಂತಾಗಿದೆ.
ಕಳೆದ 22 ದಿನಗಳಿಂದ ಹತ್ತಾರು ಲಾರಿಗಳು, ಟ್ರಕ್ಗಳು, ಸರಕು ಸಾಗಾಣೆ ವಾಹನಗಳು ಗಡಿ ದಾಟಲಾಗದೆ ರಸ್ತೆ ಬದಿಯಲ್ಲಿಯೇ ಉಳಿದುಕೊಂಡಿವೆ. ಕೋಲಾರದಿಂದ ಮುಳಬಾಗಿಲು ಮಾರ್ಗವಾಗಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಗೆ ಸೇರಿದ ಪಲಮನೇರು, ಚಿತ್ತೂರು, ತಿರುಪತಿ, ಶ್ರೀನಿವಾಸಪುರ ತಾಲೂಕುಗಳಿಂದ ಮದನಪಲ್ಲಿ ಕಡೆಗೆ ಹೋಗುವ ವಾಹನಗಳು ಸೀಮಾಂಧ್ರ ಜನತೆಯ ಪ್ರತಿಭಟನೆಯಿಂದ ಸ್ತಬ್ಧಗೊಂಡಿವೆ.
ಪ್ರತಿಭಟನೆ ಇಂದು ಅಥವಾ ನಾಳೆ ಮುಗಿಯಬಹುದೆಂದು ವಾಹನಗಳಲ್ಲಿಯೇ ಕಾಲ ಕಳೆಯುತ್ತಿರುವ ವಾಹನ ಸಿಬ್ಬಂದಿ ದಿನದಿಂದ ದಿನಕ್ಕೆ ಸೀಮಾಂಧ್ರ ಪ್ರತಿಭಟನೆ ಬಿರುಸಾಗುತ್ತಿರುವುದರಿಂದ ಸ್ನಾನ, ತಿಂಡಿ-ಊಟಕ್ಕೂ ಕಷ್ಟವಾಗುತ್ತಿದೆ.
ಹೊರ ರಾಜ್ಯಗಳಿಂದ ಬಂದಿರುವ ಸರಕು ಸಾಗಾಣೆ ವಾಹನಗಳ ಚಾಲಕರು ಮತ್ತು ಸಿಬ್ಬಂದಿ ತಮ್ಮ ಬಳಿ ಇದ್ದ ಹಣವನ್ನು ಖರ್ಚು ಮಾಡಿಕೊಂಡಿದ್ದಾರೆ. ಮಾಲೀಕರಿಂದ ಹಣ ತರಿಸಿಕೊಳ್ಳಲು ಸೌಲಭ್ಯಗಳು ಬಂದ್ ಆಗಿವೆ. ತಮ್ಮ ಬಳಿ ಇರುವ ಎಟಿಎಂ ಕಾರ್ಡುಗಳನ್ನು ಬಳಸಿ ಹಣ ಡ್ರಾ ಮಾಡಿಕೊಳ್ಳುವುದಕ್ಕೆ ಸಮೀಪದಲ್ಲಿ ಎಲ್ಲಿಯೂ ಎಟಿಎಂ ಕೇಂದ್ರಗಳೂ ಇಲ್ಲ.
ರೈತರಿಗೆ ಸಂಕಟ: ಕೆಲವರು ತಮ್ಮ ಬಳಿ ಇದ್ದ ಹಣದಿಂದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಸೇರಿದಂತೆ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಹಳ್ಳಿಗಳಿಗೆ ನಡೆದುಕೊಂಡು ಹೋಗಿ ಗೋದಿ ಹಿಟ್ಟು, ಅಕ್ಕಿ, ತರಕಾರಿ, ಸಂಬಾರು ಪುಡಿ, ಸೀಮೆಎಣ್ಣೆ ಹಾಗೂ ನೀರನ್ನು ಖರೀದಿಸಿ, ತಮ್ಮ ವಾಹನಗಳ ಬಳಿಯೇ ಸೀಮೆಎಣ್ಣೆ ಒಲೆ ಮೇಲೆ ಅಡುಗೆ ತಯಾರಿಸಿಕೊಳ್ಳುತ್ತಿದ್ದಾರೆ. ಸಿಕ್ಕಷ್ಟನ್ನೇ ಹಂಚಿ ತಿನ್ನುತ್ತಿದ್ದಾರೆ.
ಸೀಮಾಂಧ್ರ ಪ್ರತಿಭಟನೆಯನ್ನು ನೆಪ ಮಾಡಿಕೊಂಡ ಕೆಲವರು ದುಪ್ಪಟ್ಟು ಬೆಲೆಗೆ ಸಮೋಸಾ, ಕಡಲೆ ಪುರಿ, ಸೌತೆ ಕಾಯಿ ಮಾರುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಸಂಚರಿಸುವ ಭಾರಿ ವಾಹನಗಳಿಂದ ದಿನ ನಿತ್ಯ 20 ರಿಂದ 50 ಸಂಪಾದಿಸುತ್ತಿದ್ದ ಸಣ್ಣ ವ್ಯಾಪಾರಿಗಳಿಗೂ ಮುಷ್ಕರದ ಬಿಸಿ ತಟ್ಟಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು, ಶ್ರೀನಿವಾಸಪುರ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮುಂತಾದ ಕಡೆಗಳಿಂದ ಪ್ರತಿದಿನ ಹಣ್ಣು, ಹೂವು, ತರಕಾರಿಯನ್ನು ಹೊತ್ತು ಆಂಧ್ರ ಪ್ರದೇಶದ ಮದನಪಲ್ಲಿ, ಹಿಂದೂಪುರ, ಪಲಮನೇರು ಮುಂತಾದ ಕಡೆಗೆ ಹೋಗಿ ಮಾರಿ, ಜೀವನ ಸಾಗಿಸುವ ರೈತರಿಗೂ ಮುಷ್ಕರದಿಂದ ಸಂಕಟ ಎದುರಾಗಿದೆ.
ಬ್ರಹ್ಮೋತ್ಸವಕ್ಕೆ ಅಡ್ಡಿ: ನವರಾತ್ರಿ ಪ್ರಯುಕ್ತ ತಿರುಮಲ ತಿರುಪತಿಯಲ್ಲಿ ನಡೆಯುವ ವಿಶೇಷ ಬ್ರಹ್ಮೋತ್ಸವದಲ್ಲಿ ಭಾಗವಹಿಸಲು ಕಳೆದ ಎರಡು ತಿಂಗಳ ಹಿಂದೆಯೇ ಬೆಂಗಳೂರಿನ ಮಲ್ಲೇಶ್ವರಂ ಹಾಗೂ ಇನ್ನಿತರ ಸೇವಾ ಕೇಂದ್ರಗಳಲ್ಲಿ ವಿಶೇಷ ಪೂಜೆಗಳಿಗಾಗಿ ಟಿಕೆಟ್ ಬುಕ್ ಮಾಡಿದ್ದ ಭಕ್ತರೂ ಪ್ರತಿಭಟನೆಯಿಂದ ಪ್ರವಾಸ ಮುಂದೂಡಿದ್ದಾರೆ.
ಕನಿಷ್ಠ ಗಡಿ ಭಾಗದಲ್ಲಿ ಸ್ಥಗಿತಗೊಂಡಿರುವ ವಾಹನಗಳನ್ನು ನೀರು, ನೆರಳು, ಆಹಾರ ಸಿಗುವ ಪ್ರದೇಶಕ್ಕೆ ತಲುಪಿಸುವ ಮೂಲಕ ರಸ್ತೆಗಳಲ್ಲಿ ಪರದಾಡುತ್ತಿರುವ ವಾಹನ ಚಾಲಕರಿಗೆ ಅನುಕೂಲ ಮಾಡಿಕೊಡಬೇಕೆಂಬುದು ಸಂಕಷ್ಟಕ್ಕೆ ಸಿಲುಕಿರುವ ಜನತೆಯ ಅಳಲು. ಕರ್ನಾಟಕ ಮತ್ತು ಆಂಧ್ರ ಪ್ರದೇಶ ಸರ್ಕಾರಗಳು ಮಧ್ಯ ಪ್ರವೇಶಿಸಿ ಸರಕು ಸಾಗಾಣೆ ವಾಹನಗಳಿಗೆ ಮುಕ್ತಿ ಕಲ್ಪಿಸದಿದ್ದರೆ ಅನೇಕರು ನಷ್ಟ ಹೊಂದುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement